Mysuru Dasara 2023: ಜಂಬೂಸವಾರಿ ಆನೆಗಳಿಗೆ ವಿಮೆ ಸೌಲಭ್ಯ, ಮತ್ತೆ ಯಾರಿಗೆಲ್ಲ ಇದು ಲಭ್ಯ ಹಾಗೂ ಮೊತ್ತ ಎಷ್ಟು?
ಮೈಸೂರು, ಸೆಪ್ಟೆಂಬರ್, 11: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲಾ 14 ಆನೆಗಳಿಗೂ ಜಿಲ್ಲಾಡಳಿತದಿಂದ ವಿಮೆ ಮಾಡಿಸಲಾಗಿದ್ದು, ಇದೇ ಅಕ್ಟೋಬರ್ ಅಂತ್ಯದವರೆಗೆ ವಿಮಾ ಅವಧಿ ಇರಲಿದೆ. ಕಳೆದ ಕೆಲವು ವರ್ಷಗಳಿಂದ ದಸರಾ ಆನೆಗಳಿಗೆ ವಿಮೆ ಮಾಡಿಸುತ್ತಿದ್ದು, ಯಾವುದಾದರೂ ಅನಾಹುತ ಸಂಭವಿಸಿದಲ್ಲಿ ಪರಿಹಾರಕ್ಕೆ ವಿಮೆಯನ್ನು ಅವಲಂಬಿಸಲಾಗಿದೆ. ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಸಂಸ್ಥೆಯು ದಸರೆಯ 14 ಆನೆಗಳಿಗೆ ನೀಡಿದ ಕೊಟೇಷನ್‌ಗೆ ಜಿಲ್ಲಾಧಿಕಾರಿಗಳು ಒಪ್ಪಿಗೆ ಸೂಚಿಸಿದ್ದು, ಈ ಮೂಲಕ ವಿಮೆ ಜಾರಿಯಾಗಿದೆ.
ಗಜಪಡೆಯ 14 ಆನೆಗಳು, 14 ಮಾವುತರು, 14 ಕಾವಾಡಿಗಳು, 6 ಮಂದಿ ವಿಶೇಷ ಮಾವುತರು, ಆರ್‌ಎಫ್‌ಓ, ಡಿಆರ್‌ಎಎಫ್‌ಒ, ಪಶುವೈದ್ಯ, ಸಹಾಯಕರು ಹಾಗೂ ಆನೆಗಳ ಉಸ್ತುವಾರಿ ನೋಡಿಕೊಳ್ಳುವ ಸಿಬ್ಬಂದಿ ಮಾತ್ರವಲ್ಲದೆ ಸಂಭವಿಸಬಹುದಾದ ಆಸ್ತಿ ಹಾನಿಗೂ ವಿಮೆ ಮಾಡಿಸಲಾಗಿದೆ. ಇದನ್ನೊಳಗೊಂಡಂತೆ 28 ಜನರ ಹೆಸರಿನಲ್ಲಿ ತಲಾ 1 ಲಕ್ಷ ರೂಪಾಯಿನಂತೆ 28 ಲಕ್ಷ ಆರೋಗ್ಯ ವಿಮೆ ಮಾಡಿಸಿದ್ದು, 720 ರೂಪಾಯಿ ಪ್ರೀಮಿಯಂ ಮೊತ್ತ ಪಾವತಿಸಲಾಗಿದೆ.

ಈ ಬಾರಿ 10 ಗಂಡಾನೆಗಳಿಗೆ ತಲಾ 5 ಲಕ್ಷ ರೂಪಾಯಿ, 4 ಹೆಣ್ಣಾನೆಗಳಿಗೆ 4.5 ಲಕ್ಷ ರೂಪಾಯಿ ಮೊತ್ತದ ವಿಮೆ ಮಾಡಿಸಲಾಗಿದೆ. ಅದೇ ರೀತಿ ಮಾವುತರು ಹಾಗೂ ಕಾವಾಡಿಗರು ಉಳಿದವರಿಗೆ ತಲಾ 2 ಲಕ್ಷದ ವಿಮೆ ಮಾಡಿಸಲಾಗಿದೆ. ಆನೆಗಳಿಂದ ಆಸ್ತಿಪಾಸ್ತಿ ಹಾನಿ ಉಂಟಾದರೆ ಅದಕ್ಕೆ ಪರಿಹಾರ ನೀಡುವುದಕ್ಕಾಗಿ 50 ಲಕ್ಷ ರೂಪಾಯಿ ಮೊತ್ತದ ವಿಮೆ ಮಾಡಿಸಲಾಗಿದೆ. ಅಂದಾಜು 2.02 ಕೋಟಿ ರೂಪಾಯಿ ಮೊತ್ತದ ವಿಮೆ ಮಾಡಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಅಭಿಮನ್ಯು ನೇತೃತ್ವದ 8 ಆನೆಗಳ ತಂಡಕ್ಕೆ ತಾಲೀಮು ಶುರುವಾಗಿದೆ. ಅರಮನೆಯ ಕೋಡಿ ಸೋಮೇಶ್ವರ ದೇವಾಲಯದಿಂದ ಶುಕ್ರವಾರ ಬೆಳಗ್ಗೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಭೀಮ, ಮಹೇಂದ್ರ, ಧನಂಜಯ, ವಿಜಯ, ವರಲಕ್ಷ್ಮಿ, ಗೋಪಿ, ಕಂಜನ್ ಆನೆಗಳನ್ನು ಜಂಬೂ ಸವಾರಿ ಮಾರ್ಗದಲ್ಲಿ ತಾಲೀಮಿಗೆ ಕರೆದೊಯ್ಯಲಾಯಿತು.
ಬಲರಾಮ ದ್ವಾರದಿಂದ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆಯಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಹಳೆ ಆರ್‌ಎಂಸಿ ವೃತ್ತ, ಬಂಬೂ ಬಜಾರ್ ವೃತ್ತ, ಹೈವೆ ವೃತ್ತದ ಮೂಲಕ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನವನ್ನು ಆನೆಗಳು ತಲುಪಿದವು. ನಂತರ ಮಾರ್ಗದ 4 ಕಡೆ ವಿರಮಿಸಿದವು.
ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿ ಅರಮನೆ ಆವರಣದಲ್ಲಿ 3 ದಿನಗಳಿಂದ ಬೀಡುಬಿಟ್ಟಿರುವ ಗಜಪಡೆಯು ನಗರದ ವಾತಾವರಣಕ್ಕೆ ಹೊಂದಿಕೊಳ್ಳಲೆಂಬ ಉದ್ದೇಶದಿಂದ ಅರಮನೆ ಆವರಣದಲ್ಲಿ ತಾಲೀಮು ಮಾಡುತ್ತಿತ್ತು. ಜಂಬೂಸವಾರಿ ಮಾರ್ಗದಲ್ಲಿ ಈ ವರ್ಷದ ಮೊದಲ ತಾಲೀಮಿನಲ್ಲಿ ಯಶಸ್ವಿಯಾಗಿ ಹೆಜ್ಜೆ ಹಾಕಿದವು.
ಆನೆಗಳನ್ನು ಕಣ್ತುಂಬಿಕೊಂಡ ಜನ
ಅರಮನೆಯಿಂದ ಹೊರಟ ಆನೆಗಳು ಕೆ.ಆರ್.ವೃತ್ತದಿಂದ ಸಯ್ಯಾಜಿರಾವ್ ರಸ್ತೆಗೆ ಪ್ರವೇಶಿಸುತ್ತಿದ್ದಂತೆಯೇ ರಸ್ತೆಯ ಎರಡು ಬದಿಯಲ್ಲಿ ನಿಂತುಕೊಂಡಿದ್ದ ನೂರಾರು ಮಂದಿ ಸಾರ್ವಜನಿಕರು ದಸರಾ ಗಜಪಡೆ ಕಣ್ತುಂಬಿಕೊಂಡು ಸಂಭ್ರಮಿಸಿದರು. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೂ ಸುಮಾರು 1.10 ಗಂಟೆ ಅವಧಿಯ ಗಜಪಯಣದಲ್ಲಿ ದಾರಿಹೋಕರ ಚಿತ್ತ ಗಜಪಡೆಯ ಮೇಲಿತ್ತು. ತಾಲೀಮು ಮುಗಿದ ಬಳಿಕ ಬನ್ನಿಮಂಟಪದ ಮೈದಾನದಲ್ಲಿ ಕೆಲ ಕಾಲ ವಿರಮಿಸಿದ ಆನೆಗಳು ಮತ್ತೆ ಅದೇ ಮಾರ್ಗದಲ್ಲಿ ಸಾಗಿ ಅರಮನೆಗೆ ವಾಪಸಾದವು.












Click it and Unblock the Notifications