Get Updates
Get notified of breaking news, exclusive insights, and must-see stories!

Mysuru dasara 2023: ಮೈಸೂರು ದಸರಾ ಮಹೋತ್ಸವಕ್ಕೆ ಲೋಹದ ಹಕ್ಕಿಗಳ ಮೆರಗು, ಸಿದ್ಧತೆ ಹೇಗಿದೆ ಗೊತ್ತಾ?, ಇಲ್ಲಿದೆ ವಿವರ

ಮೈಸೂರು, ಅಕ್ಟೋಬರ್‌, 07: ಸಾಂಸ್ಕೃತಿಕ, ಕ್ರೀಡಾ ಮತ್ತು ಧಾರ್ಮಿಕ ಆಚರಣೆಗಳಿಂದ ಮೈಸೂರು ದಸರಾ ಹೆಚ್ಚಿನ ಆಕರ್ಷಣೆ ಪಡೆಯುತ್ತದೆ. ಅದರಲ್ಲೂ ದಸರಾದ ಹತ್ತು ದಿನಗಳ ಕಾಲ ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಖುಷಿ ಪಡುವುದೇ ಮರೆಯಲಾಗದ ಅನುಭವ. ಈ ಬಾರಿ ದಸರಾಕ್ಕೆ ಹೊಸ ಮೆರಗು ತರಲೆಂದೇ ಏರ್ ಶೋವನ್ನು ಸೇರ್ಪಡೆ ಮಾಡುತ್ತಿರುವುದು ಎಲ್ಲರ ಗಮನಸೆಳೆದಿದೆ.

3 ವರ್ಷಗಳ ಬಳಿಕ ಮೈಸೂರು ದಸರಾಕ್ಕೆ ಲೋಹದ ಹಕ್ಕಿಗಳು ಪ್ರದರ್ಶನ ನೀಡಲು ಬರುತ್ತಿದ್ದು, ಪ್ರೇಕ್ಷಕರಲ್ಲಿ ಸಂಭ್ರಮದ ಧೂಳೆಬ್ಬಿಸಲಿವೆ. 2019ರಲ್ಲಿ ಮೈಸೂರು ದಸರಾದಲ್ಲಿ ಲೋಹದ ಹಕ್ಕಿಗಳ ಪ್ರದರ್ಶನ ಅರ್ಥಾತ್ ಏರ್ ಶೋ ನಡೆದಿತ್ತು. ಅದಾದ ನಂತರ ಎರಡು ವರ್ಷಗಳ ಕಾಲ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲಾಗಿತ್ತು. ಆಗ ಯಾವುದೇ ಅದ್ಧೂರಿ ಕಾರ್ಯಕ್ರಮಗಳಿಲ್ಲದೆ, ಜಂಬೂಸವಾರಿ ಅರಮನೆ ಆವರಣಕ್ಕಷ್ಟೆ ಸೀಮಿತವಾಗಿತ್ತು. ಯಾವುದೇ ಕಾರ್ಯುಕ್ರಮಗಳು ನಡೆದಿರಲಿಲ್ಲ.

Mysuru dasara 2023: How is preparation for Air show in Mysuru?, know details

ಕಳೆದ ವರ್ಷ (2022ರಲ್ಲಿ) ದಸರಾವನ್ನು ಅದ್ಧೂರಿಯಾಗಿ ಆಚರಿಸಲಾಗಿತ್ತಾದರೂ ಏರ್ ಶೋ ನಡೆಸಿರಲಿಲ್ಲ. ಆದರೆ ಈ ಬಾರಿ ಮತ್ತೆ ದಸರಾ ಸಂಭ್ರಮಕ್ಕೆ ಲೋಹದ ಹಕ್ಕಿಗಳ ಪ್ರದರ್ಶನವನ್ನು ಸೇರಿಸಲಾಗಿದೆ. ದಸರಾದಲ್ಲಿ ಏರ್ ಶೋ ನಡೆಸಲೇಬೇಕೆಂಬ ಸಂಕಲ್ಪವನ್ನು ಸರ್ಕಾರ ಮಾಡಿದ್ದು, ಅದರಂತೆ ಕೇಂದ್ರದ ರಕ್ಷಣಾ ಇಲಾಖೆಯಿಂದ ಅನುಮತಿಯನ್ನು ಕೋರಿತ್ತು. ಇದೀಗ ರಕ್ಷಣಾ ಇಲಾಖೆ ಅನುಮತಿ ನೀಡಿದ್ದು, ಏರ್ ಶೋ ನಡೆಯುವುದು ಖಚಿತವಾಗಿದೆ.

ಏರ್ ಶೋ ಇರುವುದು ಖುಷಿ ತಂದಿದೆ

ರಾಜ್ಯದಲ್ಲಿ ಬರ ಇರುವ ಕಾರಣ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದೇ ಹೇಳಲಾಗಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ಅವರು ಸರಳವಲ್ಲದ ಸಾಂಪ್ರದಾಯಿಕ ದಸರಾ ಎಂದಿದ್ದರು. ಹೀಗಾಗಿ ದಸರಾದಲ್ಲಿ ಏರ್ ಶೋ ಇರುವುದಿಲ್ಲವೇನೋ ಎಂದೇ ಜನ ನಂಬಿದ್ದರು. ಆದರೀಗ ದಸರಾದಲ್ಲಿ ಎಂದಿನಂತೆ ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಯುವ ದಸರಾ, ವಸ್ತುಪ್ರದರ್ಶನ ನಡೆಯುತ್ತಿದ್ದು, ಜೊತೆಗೆ ಏರ್ ಶೋ ಹಾಗೂ ಬೇರೆ, ಬೇರೆ ಕಾರ್ಯಕ್ರಮಗಳಿರುವುದು ಜನರಿಗೆ ಖುಷಿ ತರಿಸಿದೆ.

Mysuru dasara 2023: How is preparation for Air show in Mysuru?, know details

ದಸರಾದಲ್ಲಿ ಏರ್ ಶೋ ಇರಲಿದೆ ಎಂಬುದು ಖಚಿತವಾಗಿದೆಯಾದರೂ ಏರ್ ಶೋ ಯಾವಾಗ ನಡೆಯುತ್ತದೆ ಎಂಬುದರ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಮತ್ತೊಂದೆಡೆ ಏರ್ ಶೋ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಬನ್ನಿಮಂಟಪದ ಮೈದಾನಕ್ಕೆ ಭೇಟಿ ನೀಡಿ ಸ್ಧಳ ಹಾಗೂ ಏರ್ ಶೋ ನಡೆಸಲು ಬೇಕಾದ ರೂಪುರೇಷೆಗಳನ್ನು ಪರಿಶೀಲನೆ ನಡೆಸಿದ್ದರು.

ಈ ವೇಳೆ ಜಿಲ್ಲಾಧಿಕಾರಿ ಅವರಿಗೆ ಮೈಸೂರು ಏರ್ ಬೇಸ್ಡ್ ಗ್ರೂಪ್ ಕ್ಯಾಪ್ಟನ್ ಡಿ.ಕೆ.ಓಜಾ ಅವರು ಸಾಥ್ ನೀಡಿದ್ದಾರೆ. ಈ ವೇಳೆ ಏರ್ ಶೋ ನಡೆಸುವ ಸ್ಧಳ, ದಿನಾಂಕ ಹಾಗೂ ಸಮಯದ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಮೂರು ವರ್ಷಗಳ ಬಳಿಕ ಏರ್ ಶೋ

ಏರ್-ಶೋನಲ್ಲಿ ಇಂಡಿಯನ್ ಏರ್‌ಫೋರ್ಸ್‌ನ ಹೆಲಿಕಾಫ್ಟರ್‌ಗಳ ಪ್ರದರ್ಶನ, ಸ್ಕೈಡೈವಿಂಗ್ ಇನ್ನಿತರ ಪ್ರದರ್ಶನಗಳು ನಡೆಯಲಿವೆ. ಏರ್‌ಫೋರ್ಸ್‌ನ ಅಧಿಕಾರಿಗಳು ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಏರ್ ಶೋ ಕಾರ್ಯಕ್ರಮದ ದಿನಾಂಕವನ್ನು ಪ್ರಕಟಿಸಲಾಗುತ್ತದೆ. ದಸರಾದಲ್ಲಿ ಏರ್ ಶೋ ನೋಡಲೆಂದೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುವುದರಿಂದ ಅವರೆಲ್ಲರಿಗೂ ವೀಕ್ಷಿಸಲು ಅನುಕೂಲವಾಗುವಂತೆ ನಗರದ ಬನ್ನಿಮಂಟಪದಲ್ಲಿನ ಪಂಜಿನ ಕವಾಯತು ಮೈದಾನದಲ್ಲಿ ನಡೆಸಲಾಗುತ್ತಿತ್ತು.

ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ 2017ರಲ್ಲಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ 2019ರ ಅವಧಿಯಲ್ಲಿ ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ವಾಯುಪಡೆಯಿಂದ ವಿಶೇಷ ಏರ್ ಶೋ ನಡೆಸಲಾಗಿತ್ತು. ಏರ್ ಶೋ ನಡೆಸಲು ಪಂಜಿನ ಕವಾಯತು ಮೈದಾನ ಸೂಕ್ತವಾಗಿದ್ದು, ಈ ಬಾರಿಯೂ ಇಲ್ಲಿಯೇ ನಡೆಯುತ್ತದೆಯಾ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಸದ್ಯ ಈ ಮೈದಾನವ ಪರಿಶೀಲನೆ ನಡೆದಿದೆ. ಆದರೆ, ಜಾಗ ಇನ್ನೂ ಅಂತಿಮವಾಗಿಲ್ಲದ ಕಾರಣ ಎಲ್ಲಿ? ಯಾವಾಗ? ನಡೆಯುತ್ತದೆ ಎಂಬ ಕುತೂಹಲವಂತು ಇದ್ದೇ ಇದೆ.

ಹಾತೊರೆಯುತ್ತಿರುವ ಮೈಸೂರು ಜನ

ಒಟ್ಟಾರೆಯಾಗಿ ಹೇಳಬೇಕೆಂದರೆ ಮೈಸೂರು ದಸರಾ ಕಳೆ ಈಗಾಗಲೇ ನಗರವನ್ನು ಆವರಿಸಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಂಭ್ರಮಕ್ಕೆ ಮುನ್ನುಡಿ ಬರೆಯಲಾಗಿದೆ. ಈ ಸಂಭ್ರಮದಲ್ಲಿ ರೋಮಾಂಚನಗೊಳಿಸುವ ಲೋಹದ ಹಕ್ಕಿಗಳ ಹಾರಾಟದ ಪ್ರದರ್ಶನ ಇನ್ನಷ್ಟು ರೋಚಕ ಅನುಭವ ನೀಡಲಿದ್ದು, ಏರ್ ಶೋನ ಆ ದಿನಕ್ಕಾಗಿ ಮೈಸೂರಿನ ಜನ ಎದುರು ನೋಡುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+