Mysuru Dasara 2023: ಅದ್ಧೂರಿ ಸ್ವಾಗತದೊಂದಿದೆ ಅರಮನೆ ಪ್ರವೇಶಿಸಿದ ಗಜಪಡೆ
ಮೈಸೂರು, ಸೆಪ್ಟೆಂಬರ್, 05: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಗಾಗಿ ಮೈಸೂರಿಗೆ ಕರೆತರಲಾಗಿರುವ ದಸರಾ ಆನೆಗಳಿಗೆ ಅರಣ್ಯಭವನದಲ್ಲಿ ಸಾಂಪ್ರದಾಯಿಕ ಪೂಜೆ ಮಾಡಿ ಅರಮನೆ ಆವರಣಕ್ಕೆ ಮಂಗಳವಾರ ಬರಮಾಡಿಕೊಳ್ಳಲಾಗಿದೆ.
ಅಭಿಮನ್ಯು ನೇತೃತ್ವದ 9 ಆನೆಗಳ ಮೊದಲ ತಂಡದ ಗಜಪಡೆಯನ್ನು ಸಾಂಪ್ರದಾಯಿಕ ಪೂಜೆಯೊಂದಿಗೆ ಅರಮನೆ ಆವರಣಕ್ಕೆ ಬರಮಾಡಿಕೊಳ್ಳಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆನೆಗಳಿಗೆ ಕಬ್ಬು, ಬೆಲ್ಲ ವಿತರಿಸಿ ಆನೆಗಳಿಗೆ ಸ್ವಾಗತ ಕೋರಿದರು. ಹೀಗೆ ಅಭಿಮನ್ಯು, ಅರ್ಜುನ, ಧನಂಜಯ, ಮಹೇಂದ್ರ, ಭೀಮ, ವಿಜಯ, ಗೋಪಾಲಸ್ವಾಮಿ, ಕಂಜನ್, ಗೋಪಿ, ವರಲಕ್ಷ್ಮೀ ಆನೆಗಳಿಗೆ ಪುಷ್ಪಾರ್ಚನೆ ಮಾಡಿ, ಫಲತಾಂಬೂಲ ನೀಡಲಾಯಿತು.

ಜಿಲ್ಲಾಡಳಿತ, ಅರಮನೆ ಮಂಡಳಿ ಕಡೆಯಿಂದ ಸಡಗರ, ಸಂಭ್ರಮದ ವಾತಾವರಣದಲ್ಲಿ ಆನೆಗಳನ್ನು ಬರಮಾಡಿಕೊಳ್ಳಲಾಯಿತು. ನಗರದ ಅರಣ್ಯ ಭವನದಿಂದ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಆನೆಗಳ ಪಾದ ತೊಳೆದು ಪಾದಪೂಜೆ, ಷೋಡಶೋಪಚಾರ ಪೂಜೆ ಸಲ್ಲಿಸಲಾಯಿತು. ನಂತರ ಆನೆಗಳಿಗೆ ಇಷ್ಟವಾದ ಪಂಚಫಲಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಅಧಿಕಾರಿಗಳು ಆಗಮಿಸಿದ ನಂತರ ಮತ್ತೊಮ್ಮೆ ಪೂಜೆ ಸಲ್ಲಿಸಲಾಯಿತು. ನಂತರ ಆನೆಗಳು ಅರಣ್ಯ ಭವನದಿಂದ ಅರಮನೆಯತ್ತ ಮೆರವಣಿಗೆ ಹೊರಟಿತು.
ಅರಮನೆ ಆವರಣಕ್ಕೆ ಬೆಳಗ್ಗೆ 12 ಗಂಟೆಗೆ ಬಂದ ಗಜಪಡೆಗೆ ಅರ್ಚಕ ಪ್ರಹ್ಲಾದ್ ರಾವ್ ಪೂಜೆ ಸಲ್ಲಿಸಿದರು. ಗಜಪಡೆಯನ್ನು ಅರಮನೆ ಆವರಣಕ್ಕೆ ಸ್ವಾಗತಿಸುವ ಮುನ್ನ ಪೊಲೀಸ್ ತಂಡದಿಂದ ಗೌರವ ವಂದನೆ ಸಲ್ಲಿಸಲಾಯಿತು. ನಂತರ ನಾದಸ್ವರ, ಪೂರ್ಣಕುಂಭ ಸ್ವಾಗತದೊಂದಿಗೆ ಗಜಪಡೆಯನ್ನು ಬರ ಮಾಡಿಕೊಳ್ಳಲಾಯಿತು. ಬಳಿಕ ಅರಮನೆಯ ಗೊಂಬೆ ತೊಟ್ಟಿಯಲ್ಲಿ ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿದೇವಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ತನ್ವೀರ್ ಸೇಠ್, ಜಿ.ಟಿ ದೇವೇಗೌಡ, ಜಿ.ಡಿ.ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ, ಕೆ.ಹರೀಶ್ ಗೌಡ, ವಿಧಾನ ಪರಿಷತ್ತಿನ ಶಾಸಕರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ ಹಾಗೂ ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್, ಉಪ ಮಹಾಪೌರರಾದ ಡಾ.ಜಿ.ರೂಪ, ವಾರ್ಡ್ ನಂ 51 ರ ಮಹಾನಗರ ಪಾಲಿಕೆಯ ಸದಸ್ಯರಾದ ಬಿ.ವಿ.ಮಂಜುನಾಥ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಎರಡನೇ ಹಂತದ ತಂಡದಲ್ಲಿ ಸುಗ್ರೀವ, ರೋಹಿತ, ಪ್ರಶಾಂತ, ಹಿರಣ್ಯ, ಲಕ್ಷ್ಮಿ ಆನೆಗಳು ಆಗಮಿಸಲಿವೆ. ಈ ಬಾರಿ ಕಂಜನ್ ಆನೆ ಇದೆ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸಿದೆ. ಪಾರ್ಥಸಾರಥಿ ಆನೆಗೆ ಮದವೇರಿದ ಕಾರಣ ಈ ಬಾರಿ ಕಂಜನ್ ಆನೆಗೆ ಅವಕಾಶ ಕಲ್ಪಿಸಲಾಗಿದೆ. ಶೀಘ್ರವೇ ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಗುತ್ತದೆ. ನಂತರ ತಾಲೀಮು ನಡೆಸಲು ಅರಣ್ಯ ಇಲಾಖೆ ಸಿದ್ದತೆ ಮಾಡಿಕೊಂಡಿದೆ.












Click it and Unblock the Notifications