ಅ. 15ರಿಂದ ದಸರಾ ಚಲನಚಿತ್ರೋತ್ಸವ: ಈ ಬಾರಿ 112 ಸಿನಿಮಾ ಪ್ರದರ್ಶನ, ಇಲ್ಲಿದೆ ಮಾಹಿತಿ
ಮೈಸೂರು, ಅಕ್ಟೋಬರ್ 09: ದಸರಾ ಮಹೋತ್ಸವ ಪ್ರಯುಕ್ತ ಅಕ್ಟೋಬರ್ 15 ರಿಂದ 22 ರವರೆಗೆ 7 ದಿನ ನಡೆಯಲಿರುವ ದಸರಾ ಚಲನ ಚಿತ್ರೋತ್ಸವದಲ್ಲಿ 112 ಸಿನಿಮಾಗಳು ಹುಣಸೂರು ರಸ್ತೆಯಲ್ಲಿರುವ ಡಿಆರ್‌ಸಿಯ ಒಂದು ಪರದೆ ಮತ್ತು ಮೈಸೂರಿನಲ್ಲಿರುವ ಐನಾಕ್ಸ್‌ನ ಮೂರು ಪರದೆಗಳಲ್ಲಿ ಪ್ರದರ್ಶನವಾಗಲಿವೆ ಎಂದು ಚಲನಚಿತ್ರೋತ್ಸವ ಸಮಿತಿಯ ಉಪ ವಿಶೇಷಾಧಿಕಾರಿ ಎಂ.ಕೆ.ಸವಿತಾ ಮಾಹಿತಿ ನೀಡಿದರು.
ದಸರಾ ಚಲನ ಚಿತ್ರೋತ್ಸವದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಿನಿಮಾ ಪ್ರದರ್ಶನದ ಬಳಿಕ ನಿರ್ದೇಶಕರು ಮತ್ತು ನಿರ್ಮಾಪಕರೊಂದಿಗೆ ಪ್ರೇಕ್ಷಕರು ಸಂವಾದ ಕೂಡ ನಡೆಸಬಹುದಾಗಿದೆ ಎಂದರು.

ಸಿನಿಮಾ ವೀಕ್ಷಣೆಗೆ ಸಾರ್ವಜನಿಕರಿಗೆ 500 ರೂಪಾಯಿ ಮತ್ತು ವಿದ್ಯಾರ್ಥಿಗಳಿಗೆ 300 ರೂಪಾಯಿಗೆ ಪಾಸ್ ನೀಡಲಾಗುತ್ತಿದ್ದು, ದಿನದ ಪಾಸ್‌ಗೆ 100 ರೂಪಾಯಿ ನಿಗದಿ ಪಡಿಸಲಾಗಿದೆ. ವಾರ್ತಾ ಇಲಾಖೆಯ ಕಚೇರಿಯಲ್ಲಿ ಪಾಸ್ ಮಾರಾಟದೊಂದಿಗೆ ಆನ್‌ಲೈನ್ ಮೂಲಕ ಪಾಸ್ ಖರೀದಿ ಮಾಡಬಹುದಾಗಿದೆ. ಅ. 10 ರಿಂದ ಪಾಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮಾಹಿತಿಗೆ 7411564510 ಸಂಪರ್ಕಿಬಹುದು ಎಂದರು.
ಚಿತ್ರ ಮಂದಿರಗಳಲ್ಲಿ ತೆರೆಕಾಣದ ಸಾಕಷ್ಟು ಕಲಾತ್ಮಕ ಸಿನಿಮಾಗಳು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದು, ಪ್ರಶಸ್ತಿಗೂ ಭಾಜನವಾಗಿವೆ. ಅಂತಹ ಸಿನಿಮಾಗಳನ್ನು ಸಿನಿ ರಸಿಕರು ಈಗ ಕಣ್ತುಂಬಿಕೊಳ್ಳಬಹುದಾಗಿದೆ. ಈ ಬಾರಿಯ ದಸರಾ ಮಹೋತ್ಸವದ ಪ್ರಯುಕ್ತ ನಡೆಯಲಿರುವ ಚಲನ ಚಿತ್ರೋತ್ಸವದಲ್ಲಿ ಕಿರು ಚಿತ್ರಗಳೊಂದಿಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವ ಸಾಮಾಜಿಕ ಸಂದೇಶವಿರುವ ಸಿನಿಮಾಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಚಲನಚಿತ್ರೋತ್ಸವವನ್ನು ಅ.15ರಂದು ಬೆಳಗ್ಗೆ 11.30ಕ್ಕೆ ಕಲಾಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಲಿದ್ದು, ಸಂಗೀತ ನಿರ್ದೇಶಕ ಡಾ.ಹಂಸಲೇಖಾ, ನಟಿಯರಾದ ಮಿಲನ ನಾಗರಾಜ್, ಮಾನ್ವಿತಾ ಕಾಮತ್, ಮಯೂರಿ ಮತ್ತು ವೈಭವಿ ಶಾಂಡಿಲ್ಯ ಭಾಗವಹಿಸಲಿದ್ದಾರೆ. ಉದ್ಘಾಟನೆಗೂ ಮುನ್ನ ಬೆಳಗ್ಗೆ 10ಕ್ಕೆ ಸಾಧು ಕೋಕಿಲಾ ಮತ್ತು ತಂಡದಿಂದ ಸಂಗೀತ ಮತ್ತು ಮನರಂಜನೆ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಚಲನಚಿತ್ರೋತ್ಸವ ಸಮಿತಿ ಕಾರ್ಯಾಧ್ಯಕ್ಷೆ ವಿ.ಪ್ರಿಯದರ್ಶಿನಿ, ಕಾರ್ಯದರ್ಶಿ ಡಿ.ಅಶೋಕ್ ಕುಮಾರ್, ಸಹ ಕಾರ್ಯದರ್ಶಿ ಟಿ.ಕೆ.ಹರೀಶ್ ಉಪಸ್ಥಿತರಿದ್ದರು.












Click it and Unblock the Notifications