Dasara 2023: ದಸರಾ ಆಹಾರ ಮೇಳದಲ್ಲಿ ಬ್ಯಾಂಬೂ ಬಿರಿಯಾನಿ, ಬಿದಿರಕ್ಕಿ ಪಾಯಸ!
ಮೈಸೂರು, ಅಕ್ಟೋಬರ್ 13: ಮೈಸೂರಿನಲ್ಲಿ ದಸರಾ ಉದ್ಘಾಟನೆಗೆ ಇನ್ನೇನು ದಿನಗಣನೆ ಶುರುವಾಗಿದೆ. ಈ ಮಧ್ಯೆ ಪ್ರತಿ ವರ್ಷದಂತೆ ಈ ಬಾರಿಯೂ ಆಹಾರ ಮೇಳದಲ್ಲಿ ಬ್ಯಾಂಬೂ ಬಿರಿಯಾನಿ, ಬಿದಿರಕ್ಕಿ ಪಾಯಸ ಪ್ರಮುಖ ಆಕರ್ಷಣೆ ಆಗಲಿದೆ.
ದಸರಾ ಮಹೋತ್ಸವದಲ್ಲಿ ಅತಿಹೆಚ್ಚು ಜನರು ಸೇರುವ ತಾಣಗಳಲ್ಲಿ ಆಹಾರ ಮೇಳವೂ ಒಂದು. ಇಲ್ಲಿ ಹತ್ತಾರು ಮಳಿಗೆಗಳು ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಕೊಡುತ್ತವೆ. ಕಳೆದ ಬಾರಿ ಎರಡು ಕಡೆ ಆಹಾರ ಮೇಳದ ಮಳಿಗೆಗಳು ತೆರೆಯಲಾಗಿತ್ತು. ಆದರೆ, ಈ ಬಾರಿ ನಗರದ ಸ್ಕೌಟ್ಸ್ ಅಂಡ್ ಗೈಡ್ ಮೈದಾನದಲ್ಲಿ ಮಾತ್ರ ಆಹಾರ ಮೇಳ ತೆರೆಯಲಾಗುತ್ತಿದೆ.

ಪ್ರವಾಸಿಗರು, ಆಹಾರ ಪ್ರಿಯರನ್ನು ಕೈ ಬೀಸಿ ಕರೆಯುವ ಆಹಾರ ಮೇಳದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಬುಡಕಟ್ಟು ಸಮುದಾಯದ ಖಾದ್ಯಗಳು ಬಾಯಲ್ಲಿ ನೀರೂರಿಸಲಿವೆ. ಆಹಾರ ಮೇಳದಲ್ಲಿ ಪ್ರಕೃತಿ ಆದಿವಾಸಿ ಫೌಂಡೇಷನ್ ಟ್ರಸ್ಟ್, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಮಳಿಗೆ ತೆರೆಯುತ್ತಿದ್ದು, ಬುಡಕಟ್ಟು ಶೈಲಿಯ ಬೊಂಬು ಬಿರಿಯಾನಿ, ಬಿದಿರಕ್ಕಿ ಪಾಯಸ ಸೇರಿದಂತೆ ವಿಭಿನ್ನ ತಿನಿಸುಗಳು ಆಹಾರ ಪ್ರಿಯರ ನಾಲಿಗೆ ರುಚಿ ತಣಿಸಲಿವೆ.
ಪ್ರಕೃತಿ ಆದಿವಾಸಿ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ಕೃಷ್ಣಯ್ಯ ಮಾತನಾಡಿ, 'ಬ್ಯಾಂಬೂ ಬಿರಿಯಾನಿ 200 ರೂಪಾಯಿ, ನಾಟಿ ಕೋಳಿ ಬ್ಯಾಂಬೂ ಬಿರಿಯಾನಿ 250 ರೂಪಾಯಿ, ಬಿದಿರಕ್ಕಿ ಪಾಯಸ 50 ರೂಪಾಯಿ, ಮಾಕಳಿ ಬೇರಿನ ಟೀ 20 ರೂಪಾಯಿ, ಕಾಡುಗೆಣಸು ಜೇನುತುಪ್ಪ ಮಿಶ್ರಣ 50 ರೂಪಾಯಿ, ನಳ್ಳಿ ಸಾರು ಮುದ್ದೆ 150 ರೂಪಾಯಿ, ವಿವಿಧ ಕಾಡು ಸೊಪ್ಪುಗಳ ಪಲ್ಯಕ್ಕೆ 50 ರೂಪಾಯಿ, ದರ ನಿಗದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಾಡು ಕೊತ್ತಂಬರಿ ಸೊಪ್ಪು, ಕಾಡು ಶುಂಠಿ, ಕಾರು ಅರಿಶಿಣ ಮಿಶ್ರಿತ ಮಸಾಲೆಯೊಟ್ಟಿಗೆ ವಿವಿಧ ಬಗೆಯ ನೈಸರ್ಗಿಕ, ಔಷಧೀಯಗುಣವುಳ್ಳ ಆಹಾರಗಳನ್ನು ಸವಿದು ಆದಿವಾಸಿ ಬುಡಕಟ್ಟು ಆಹಾರಗಳನ್ನು ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.

ಬುಡಕಟ್ಟು ಶೈಲಿಯ ಆಹಾರ ಪರಂಪರೆಯನ್ನು ಮೈಸೂರಿನ ಜನತೆಗೆ ಪರಿಚಯಿಸುವ ಉದ್ದೇಶದಿಂದ ಕಳೆದ 8 ವರ್ಷಗಳಿಂದ ಆಹಾರ ಮೇಳದಲ್ಲಿ ಭಾಗವಹಿಸುತ್ತಿದ್ದೇವೆ. ಗುಣಮಟ್ಟ, ಸ್ವಚ್ಛತೆಯಲ್ಲಿ ರಾಜಿ ಮಾಡಿಕೊಳ್ಳದೆ ರುಚಿಯಾದ ಆಹಾರ ನೀಡುತ್ತಿರುವುದರಿಂದ ಪ್ರತಿವರ್ಷವೂ ನಮ್ಮ ಖಾದ್ಯಗಳಿಗೆ ಬೇಡಿಕೆ ಇರುತ್ತದೆ. ಬಿರಿಯಾನಿಯನ್ನು ಬೊಂಬಿನಲ್ಲಿ ಬೇಯಿಸಬೇಕಿರುವುದರಿಂದ ದಿನಕ್ಕೆ 500 ಮಂದಿಗೆ ಮಾತ್ರ ಪೂರೈಕೆ ಮಾಡಬಹುದು. ಬೇಡಿಕೆಗೆ ಅನುಗುಣವಾಗಿ ತಯಾರು ಮಾಡಲಾಗುತ್ತದೆ ಎಂದರು.
ದಸರಾ ಆಹಾರ ಮೇಳಕ್ಕೆ 1 ಲಕ್ಷ ರೂ ಶುಲ್ಕ
ದಸರಾ ಆಹಾರ ಮೇಳದಲ್ಲಿ ಕಳೆದ 8 ವರ್ಷಗಳಿಂದ ಭಾಗವಹಿಸುತ್ತಿದ್ದೇವೆ. ಯಾವ ವರ್ಷವೂ ಶುಲ್ಕ ಕೇಳಿರಲಿಲ್ಲ. ಆದರೆ, ಈ ಬಾರಿ 1 ಲಕ್ಷ ಶುಲ್ಕ ಪಾವತಿಸುವಂತೆ ತಿಳಿಸಿದ್ದಾರೆ. ಇಷ್ಟು ದೊಡ್ಡ ಮಟ್ಟದ ಹಣ ಪಾವತಿಸಲು ನಮ್ಮಿಂದ ಸಾಧ್ಯವಿಲ್ಲ. ಇಷ್ಟು ವರ್ಷ ನೀಡಿದ ಸಹಕಾರದಂತೆ ಈ ವರ್ಷವೂ ಉಚಿತವಾಗಿ ನೀಡಬೇಕು. ಶುಲ್ಕ ಕೇಳಿದರೆ ಮುಂದಿನ ವರ್ಷ ಆಹಾರ ಮೇಳದಲ್ಲಿ ಭಾಗವಹಿಸುವುದಿಲ್ಲ. ಶುಲ್ಕ ರಿಯಾಯಿತಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗೆ ಮನವಿ ಮಾಡುತ್ತೇವೆ ಎಂದು ಕೃಷ್ಣಯ್ಯ ತಿಳಿಸಿದ್ದಾರೆ.












Click it and Unblock the Notifications