ಮೈಸೂರು ದಸರಾ; ಮರದ ಅಂಬಾರಿ ಹೊತ್ತು ಅಭಿಮನ್ಯು ಅಭ್ಯಾಸ
ಮೈಸೂರು, ಅಕ್ಟೋಬರ್ 01; ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವ 2021ರ ಸಂಭ್ರಮ ಕಳೆಗಟ್ಟಿದೆ. ನಾಡಹಬ್ಬಕ್ಕೆ ಸಿದ್ಧತೆ ಶುರುವಾಗಿರುವ ಬೆನ್ನಲ್ಲೇ ದಸರಾ ಗಜಪಡೆಗೆ ಶುಕ್ರವಾರದಿಂದ ಅಂತಿಮ ಹಂತದ ತಾಲೀಮು ನಡೆಸಲಾಗುತ್ತಿದೆ.
ಈಗಾಗಲೇ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆ ಸಾರಥಿ ಅಭಿಮನ್ಯು ಹಾಗೂ ಇತರ ಆನೆಗಳಿಗೆ ವಿವಿಧ ತಾಲೀಮು ನೀಡುವ ಮೂಲಕ ದಸರೆಗೆ ಸಿದ್ಧಗೊಳಿಸಲಾಗುತ್ತಿದೆ. ಇದರ ನಡುವೆ ಗಜಪಡೆ ಕ್ಯಾಪ್ಟನ್ ಅಭಿಮನ್ಯುಗೆ ಶುಕ್ರವಾರ ಮರದ ಅಂಬಾರಿ ಕಟ್ಟಿ ತಾಲೀಮು ನೀಡಲಾಯಿತು.
ಅರಮನೆ ಅಂಗಳದಲ್ಲಿ ಮರದ ಅಂಬಾರಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ಡಿಸಿಎಫ್ ಕರಿಕಾಳನ್ ಹಾಗೂ ಸಿಬ್ಬಂದಿ, ನಂತರ ಮರದ ಅಂಬಾರಿ ತಾಲೀಮು ನಡೆಸಿದರು. ಅಕ್ಟೋಬರ್ 15ರಂದು ಅರಮನೆ ಆವರಣದಲ್ಲಿ ವಿಶ್ವವಿಖ್ಯಾತ ಜಂಬೂ ಸವಾರಿ ನಡೆಯಲಿದೆ.

ಚಿನ್ನದ ಅಂಬಾರಿ ಮಾದರಿಯ ಮರದ ಅಂಬಾರಿ ಜೊತೆಗೆ ಮರಳು ಮೂಟೆಗಳನ್ನು ಹೊತ್ತು ಸಾಗಿದ ಅಭಿಮನ್ಯು ಜಂಬೂ ಸವಾರಿ ಮೆರವಣಿಗೆಯಲ್ಲಿ 750 ಕೆಜಿ ತೂಕದ ಅಂಬಾರಿ ಹೊರಲು ತಾನು ಸಂಪೂರ್ಣ ಸಿದ್ಧನಾಗಿದ್ದೇನೆ ಅನ್ನೋದನ್ನ ಸಾಬೀತುಪಡಿಸಿದ.
ಅರಮನೆ ಆವರಣದಲ್ಲಿ ನಡೆದ ತಾಲೀಮಿನಲ್ಲಿ ಅಭಿಮನ್ಯು ಜೊತೆ ಕಾವೇರಿ, ಚೈತ್ರಾ, ಲಕ್ಷ್ಮಿ, ಗೋಪಾಲಸ್ವಾಮಿ, ಧನಂಜಯ, ಅಶ್ವತ್ಥಾಮ ಹಾಗೂ ವಿಕ್ರಮ ಆನೆಗಳು ಇದ್ದವು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಗಜಪಡೆಗೆ ಫಲ ತಾಂಬೂಲ ನೀಡಿ ಪುಷ್ಪಾರ್ಚನೆ ನೆರವೇರಿಸಿದರು.
ದಸರಾ ವೆಬ್‌ಸೈಟ್‌ಗೆ ಚಾಲನೆ; ಮೈಸೂರು ದಸರಾ ವೆಬ್‌ಸೈಟ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ ನೀಡಿದರು. ದಸರಾ ಸಂಬಂಧ ಸಂಪೂರ್ಣ ಮಾಹಿತಿ ಒದಗಿಸುವ ವೆಬ್‌ಸೈಟ್ ಇದಾಗಿದ್ದು, ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕ ದಸರಾ ಹಿನ್ನೆಲೆ ವರ್ಚುವಲ್ ಹಾಗೂ ನೇರ ಪ್ರಸಾರಗಳು ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ.
ಪ್ರಮುಖವಾಗಿ ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ನಂದಿಪೂಜೆ, ಜಂಬೂ ಸವಾರಿ ಮೆರವಣಿಗೆ ನೇರ ಪ್ರಸಾರವನ್ನು ಸಹ ವೆಬ್‌ಸೈಟ್ ಮೂಲಕ ವೀಕ್ಷಿಸಬಹುದಾಗಿದೆ. ಅಲ್ಲದೇ ದಸರಾ ಕಾರ್ಯಕ್ರಮಗಳ ವಿವರ, ವೇಳಾಪಟ್ಟಿ, ಉಪಸಮಿತಿ ವಿವರ, ಛಾಯಾಚಿತ್ರಗಳು, ಮಾಹಿತಿಗಳು ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ದೊರೆಯಲಿದೆ.
ಅಲ್ಲದೇ ದಸರಾ ಉದ್ಘಾಟಕರ ಪರಿಚಯ, ಉಪಸಮಿತಿಗಳ ವಿವರ, ಕಾರ್ಯಕ್ರಮಗಳ ಪಟ್ಟಿ, ಹಿಂದಿನ ದಸರಾ ಮಹೋತ್ಸವದ ಫೋಟೋ, ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿಯನ್ನು ವೆಬ್‌ಸೈಟ್ ಒಳಗೊಂಡಿರಲಿದೆ. ದೇಶಿ ಮತ್ತು ವಿದೇಶಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೂಡ ಮಾಹಿತಿ ಪ್ರಕಟಿಸಲಾಗಿದೆ.
ಕಾವಾಡಿಗರು, ಮಾವುತರೊಂದಿಗೆ ಉಪಹಾರ; ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹಾಗೂ ಇತರರು ಗಜಪಡೆ ಮಾವುತರು ಹಾಗೂ ಕಾವಾಡಿಗರೊಂದಿಗೆ ಉಪಹಾರ ಕೂಟದಲ್ಲಿ ಭಾಗವಹಿಸಿದರು. ಕಾವಾಡಿಗರು ಹಾಗೂ ಮಾವುತರಿಗೆ ಸ್ವತಃ ಸಚಿವರೇ ಉಪಹಾರ ಬಡಿಸಿದರು. ಆನೆಗಳ ಪಾಲನೆ, ಪೋಷಣೆ ಮಾಡುತ್ತಿರುವ ಕಾವಾಡಿಗರು ಹಾಗೂ ಮಾವುತರ ಕಾರ್ಯವನ್ನು ಪ್ರಶಂಸಿ, ಯೋಗಕ್ಷೇಮ ವಿಚಾರಿಸಿದರು.

ಸಿದ್ದರಾಮಯ್ಯ ವಿರುದ್ಧ ಟೀಕೆ; "ಕೋವಿಡ್ ಬಂದು ಗುಣಮುಖರಾದ ಮೇಲೆ ಸಿದ್ದರಾಮಯ್ಯ ಅವರು ತಾನು ಏನು ಮಾತನಾಡುತ್ತಿದ್ದೇನೆ ಎಂಬುದೇ ಅವರಿಗೆ ತಿಳಿಯುತ್ತಿಲ್ಲ" ಎಂದು ಸಚಿವ ಎಸ್. ಟಿ. ಸೋಮಶೇಖರ್ ಟೀಕಿಸಿದರು.
ಮೈಸೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, "ಸಿದ್ದರಾಮಯ್ಯರಿಗೆ ಕೋವಿಡ್ ಬಂದ ಮೇಲೆ ತಾವು ಏನು ಮಾತನಾಡುತ್ತಿದ್ದೇನೆ ಎಂಬುದೆ ಅವರಿಗೆ ಗೊತ್ತಾಗುತ್ತಿಲ್ಲ. ಅವರಿಗೆ ತಾಲಿಬಾನು ಗೊತ್ತಿಲ್ಲ, ಬಿಜೆಪಿಯೂ ತಿಳಿದಿಲ್ಲ. ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಏನೇನೋ ಮಾತನಾಡುತ್ತಿದ್ದಾರೆ" ಎಂದರು.
"ಆರ್‌ಎಸ್‌ಎಸ್ ಬಗ್ಗೆ ತಿಳಿಯಬೇಕಾದರೆ ಯಾವುದಾದರು ಶಾಖೆಗೆ ಬರಲಿ. ಅವರು ಶಾಖೆಗೆ ಬರುವುದಾದರೆ ನಾನೇ ಅವರನ್ನು ಖುದ್ದಾಗಿ ಒಂದು ಶಾಖೆಗೆ ಕರೆದುಕೊಂಡು ಹೋಗುತ್ತೇವೆ. ಅವರಿಗೆ ಮಾನಸಿಕವಾಗಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ?" ಎಂದು ವ್ಯಂಗ್ಯವಾಡಿದರು.
ನಾಡಹಬ್ಬ ದಸರಾ ಉದ್ಘಾಟನೆ ಕುರಿತು ಮಾತನಾಡಿ, "ಚಾಮರಾಜನಗರಕ್ಕೆ ಸಿಎಂ ಬರುತ್ತಾರೆ. ಅಕ್ಟೋಬರ್ 6ರಂದೇ ಸಿಎಂ ಮೈಸೂರಿಗೆ ಬರುತ್ತಾರೆ. ಬಳಿಕ ದಸರಾ ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತಾರೆ. ನಂತರ ಏರ್‌ಪೋರ್ಟ್‌ನಲ್ಲಿ ರಾಷ್ಟ್ರಪತಿಗಳನ್ನು ಸ್ವಾಗತಿಸಿ ಚಾಮರಾಜನಗರ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ" ಎಂದು ತಿಳಿಸಿದರು.
"ದಸರಾಗೆ ಎಲ್ಲಾ ತಯಾರಿ ನಡೆದಿದೆ. ಸಂಜೆ ಒಳಗಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಅಂತಿಮವಾಗಲಿದೆ. ಹಂಸಲೇಖ ಸೇರಿದಂತೆ ನಾಡಿನ ಹಲವು ಕಲಾವಿದರಿಗೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗುವುದು. ಉದ್ಘಾಟನೆಗೆ 500 ಹಾಗೂ ಜಂಬೂಸವಾರಿಗೆ 1,000 ಜನ ಎಂದು ತಜ್ಞರ ಸಮಿತಿ ಹೇಳಿದೆ. ಈ ಸಂಖ್ಯೆಯನ್ನು ಹೆಚ್ಚಿಸಲು ಕೇಳಿದ್ದೇನೆ" ಎಂದರು.
"ಕೋವಿಡ್ ಮೂರನೇ ಅಲೆ ಹಾಗೂ ಮೈಸೂರು ಜನತೆಯ ಹಿತದೃಷ್ಟಿಯಿಂದ ಸರಳ ಮತ್ತು ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗುತ್ತದೆ. ಎಲ್ಲೂ ಕೂಡ ಕೋವಿಡ್ ನಿಯಮಗಳನ್ನು ಮೀರದಂತೆ ಸುರಕ್ಷಿತವಾಗಿ ದಸರಾ ಆಚರಣೆ ಮಾಡಲಾಗುತ್ತದೆ" ಎಂದು ಸಚಿವರು ಹೇಳಿದರು.












Click it and Unblock the Notifications