ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ವೇಶ್ಯಾವಾಟಿಕೆಗೆ ನೂಕಿದ ಕ್ರೂರಿ
ಮೈಸೂರು, ಫೆಬ್ರವರಿ 14: ಯುವತಿಯೊಬ್ಬರನ್ನು ಮದುವೆಯಾಗಿ ನಂಬಿಸಿ ವೇಶ್ಯಾವಾಟಿಕೆ ಜಾಲಕ್ಕೆ ಮಾರಾಟ ಮಾಡಿದ ಪ್ರಕರಣವೊಂದನ್ನು ಮೈಸೂರು ಅಪರಾಧ ಪತ್ತೆ ವಿಭಾಗದ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಈ ಸಂಬಂಧ ಬೆಂಗಳೂರಿನ ಬಂಡೆ ಬೊಮ್ಮಸಂದ್ರದ ಎಂ.ನಾಗೇಶ್ (29), ಪಾಂಡವಪುರ ಕಡತನಾಳು ಗ್ರಾಮದ ಎನ್.ಸಂಜಯ್ (32), ತುಮಕೂರಿನ ಇಮ್ರಾನ್ (38), ಶ್ರೀರಂಗಪಟ್ಟಣದ ನಜೀರ್ ಅಹಮ್ಮದ್ (49) ಅವರನ್ನು ಬಂಧಿಸಿ, ಯುವತಿಯನ್ನು ರಕ್ಷಿಸಲಾಗಿದೆ.
ಬೆಂಗಳೂರಿನ ನಾಗೇಶ್ ಎಂಬಾತ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಮೈಸೂರಿಗೆ ಕರೆ ತಂದು ಸ್ನೇಹಿತರಾದ ಸಂಜಯ್, ಇಮ್ರಾನ್ ನೊಂದಿಗೆ ಸೇರಿಕೊಂಡು ಶ್ರೀರಂಗಪಟ್ಟಣದಲ್ಲಿರುವ ಐಶ್ವರ್ಯ ಲಾಡ್ಜ್ ನ ಮಾಲೀಕ ನಜೀರ್ ಅಹಮ್ಮದ್ ಗೆ ಮಾರಾಟ ಮಾಡಿದ. ನಂತರ, ಆಕೆಯನ್ನು ಮೈಸೂರಿಗೆ ಕರೆ ತಂದ ನಾಗೇಶ್ ಮೈಸೂರಿನಲ್ಲಿ ಮನೆ ಮಾಡಿ ವೇಶ್ಯಾವಾಟಿಕೆ ನಡೆಸಲು ಮುಂದಾಗಿದ್ದ.

ಈ ಬಗ್ಗೆ ಮಾಹಿತಿ ಕಲೆ ಹಾಕಿದ ಸಿಸಿಬಿ ಪೊಲೀಸರು ಪೀಪಲ್ಸ್ ಉದ್ಯಾನದಲ್ಲಿ ಕಾರ್ಯಾಚರಣೆ ನಡೆಸಿ, ಯುವತಿಯನ್ನು ರಕ್ಷಿಸಿದರು. ಆರೋಪಿಗಳನ್ನು ಬಂಧಿಸಿದರು. ಬಂಧಿತರಿಂದ 9,300 ನಗದು ಮತ್ತು ಕೃತ್ಯಕ್ಕೆ ಬಳಸಿದ್ದ 2 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಯಿತು. ಈ ಕುರಿತು ಸಿಸಿಬಿಯ ಆರ್ಥಿಕ ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications