Mysuru: 3 ಬಲಿ ಪಡೆದ ನಂತರ ಹಂಪ್ ತೆರವು ಮಾಡಿದ ಮೈಸೂರು ಮಹಾನಗರ ಪಾಲಿಕೆ
ಮೈಸೂರು: ಅವೈಜ್ಞಾನಿಕ ರಸ್ತೆ ಹಂಪ್‌ಗೆ ಮೂವರು ಬಲಿಯಾದ ನಂತರ ಕೊನೆಗೂ ಎಚ್ಚೆತ್ತುಕೊಂಡ ಮೈಸೂರು ಮಹಾನಗರ ಪಾಲಿಕೆ ಹಂಪ್ಸ್ ಅನ್ನು ತೆರವುಗೊಳಿಸಿದೆ.
ಹಂಪ್ ನಿರ್ಮಿಸಿದ್ದ ಸ್ಥಳದಲ್ಲಿ ಮೃತರ ಕುಟುಂಬದರೊಂದಿಗೆ ಸಾರ್ವಜನಿಕರು ಪ್ರತಿಭಟನೆ ನಡೆಸಲು ಮುಂದಾದ ಬೆನ್ನಲ್ಲೇ ಬುಧವಾರ ರಾತ್ರೋರಾತ್ರಿ ಬೋಗಾದಿ ಮುಖ್ಯ ರಸ್ತೆಯಲ್ಲಿ ಮೂರು ಕಡೆ ಹಾಗೂ ಜೆಸ್ತಿ ರಸ್ತೆಯ ಆಯುಷ್ ಆಸ್ಪತ್ರೆ ಮುಂದೆ ಎರಡು ಇದ್ದ ಹಂಪ್‌ಗಳನ್ನು ತೆರವುಗೊಳಿಸಲಾಗಿದೆ.

ಬೋಗಾದಿ ರಸ್ತೆಯಲ್ಲಿ ಮೈಸೂರು ವಿವಿಯ ಕುವೆಂಪು ಪ್ರತಿಮೆ ಎದುರು, ಜೆಎಸ್‌ಎಸ್ ಹಾಸ್ಟೆಲ್ ಬಳಿ ಪಾಲಿಕೆ ಅಧಿಕಾರಿಗಳು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದ ರಸ್ತೆ ಹಂಪ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಮೈಸೂರು ನಗರ ಸಂಚಾರ ವಿಭಾಗ ಎಸಿಪಿ ಪರಶುರಾಮಪ್ಪ ತಿಳಿಸಿದ್ದಾರೆ.
ಸಾವಿಗೆ ಯಾರು ಹೊಣೆ?
ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಅವೈಜ್ಞಾನಿಕ ಹಂಪ್ ಅನ್ನು ತೆರವುಗೊಳಿಸಿದೆ. ಆದರೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ. ಮೂರು ಕುಟುಂಬದವರಿಗೆ ಸೂಕ್ತ ಪರಿಹಾರದೊಂದಿಗೆ ನಿರ್ಲಕ್ಷ್ಯವಹಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೃತ ಯಶವಂತ್ ಅವರ ತಂದೆ ರಾಜೇಂದ್ರ ಪ್ರಸಾದ್ ಆಕ್ರೋಶ ಹೊರ ಹಾಕಿದ್ದಾರೆ.
ಹಲವು ವರ್ಷಗಳಿಂದ ಈ ರಸ್ತೆಯಲ್ಲಿ ಯಾವುದೇ ಹಂಪ್‌ಗಳು ಇಲ್ಲದ ಕಾರಣ ವಾಹನ ಸಂಚಾರರು ಎಂದಿನಂತೆ ತಮ್ಮ ವಾಹನಗಳಲ್ಲಿ ಸಂಚರಿಸಿ ಜೀವಕಳೆದುಕೊಂಡಿದ್ದಾರೆ. ಮೂವರ ಪ್ರಾಣ ಹೋದ ನಂತರ ಈ ರೀತಿಯ ಕ್ರಮಗಳನ್ನು ಕೈಗೊಂಡರೆ ಎಷ್ಟು ಸರಿ? ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕಿದೆ, ಎನ್ನುತ್ತಾರೆ ಟೀಂ ಮೈಸೂರು ತಂಡದ ಸದಸ್ಯ ಗೋಕುಲ್ ಗೋವರ್ಧನ್.
ಪಾಲಿಕೆ ಉತ್ತರ ನೀಡಲಿ
ಏಕಾಏಕಿ, ರಾತ್ರೋರಾತ್ರಿ ರಸ್ತೆ ಹಂಪ್ ನಿರ್ಮಿಸಿ, ಮೂವರ ಜೀವ ಬಲಿ ಪಡೆದಿದ್ದಾರೆ. ಯಾತಕ್ಕಾಗಿ ಈ ಹಂಪ್ ನಿರ್ಮಿಸಲಾಗಿತ್ತು ಎಂಬುದರ ಬಗ್ಗೆ ಪಾಲಿಕೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು. ನಮ್ಮ ಮಕ್ಕಳನ್ನು ಬಲಿ ತೆಗೆದುಕೊಂಡು ಈ ರಸ್ತೆಯಲ್ಲಿ ಹಂಪ್ ಬೇಕೋ ಬೇಡವೋ ಎಂಬುದನ್ನು ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ನಿರ್ಧರಿಸಬೇಕು ಎಂದು ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರು ಒತ್ತಾಯಿಸಿದ್ದಾರೆ.












Click it and Unblock the Notifications