ಪ್ರತಾಪ್ ಸಿಂಹ ವಿರುದ್ಧ ಬಿಜೆಪಿಗರಿಂದಲೇ ಬಿಎಸ್‌ವೈಗೆ ಪತ್ರ
ಮೈಸೂರು, ಮಾರ್ಚ್ 3 : ಮೈಸೂರು-ಕೊಡಗು ಲೋಕಸಭಾ ಸದಸ್ಯ ಪ್ರತಾಪ ಸಿಂಹ ಹಾಗೂ ಮೈಸೂರು ಬಿಜೆಪಿ ಮುಖಂಡರಾದ ಶ್ರೀನಿವಾಸ್ ಪ್ರಸಾದ್ ಹಾಗೂ ಫಣೀಶ್ ಅವರ ವಿರುದ್ಧ ಅಸಮಾಧಾನಗೊಂಡಿರುವ ಬಿಜೆಪಿ ಜಿಲ್ಲಾ ಯುವ ಮೋರ್ಚಾದ 9 ಮಂದಿ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಪ್ರತಾಪ್ ಸಿಂಹ ವಿರುದ್ಧ ಬಿಎಸ್‌ಐಗೆ ಪತ್ರ ಬರೆದಿದ್ದಾರೆ.
ಭಾರತೀಯ ಜನತಾ ಪಕ್ಷ ಯುವ ಮೋರ್ಚಾದ ಪದಾಧಿಕಾರಿಗಳಾದ ವಿಜಯ ಕುಮಾರ್, ಪ್ರವೀಣ್ ಶೆಟ್ಟಿ, ಸಂದೀಪ್, ಪ್ರಸನ್ನ, ಪ್ರತಾಪ್, ಸುಮಂತ್, ಕಾಂತರಾಜು, ಉಮಾಶಂಕರ್ ಹಾಗೂ ಶಂಕರ್ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ರಾಜಿನಾಮೆ ಪತ್ರವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ ಅವರಿಗೆ ರವಾನಿಸಿದ್ದಾರೆ.
ಇದಲ್ಲದೆ ಮೈಸೂರು, ನಂಜನಗೂಡು, ಹುಣಸೂರು ಹಾಗೂ ಕೆ.ಆರ್.ನಗರದ ಯುವ ಮೋರ್ಚಾ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯಕಾರಿಣಿ ಸದಸ್ಯರು ಹಾಗೂ ಗ್ರಾಮಾಂತರ ಅಧ್ಯಕ್ಷರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಮೈಸೂರು ಜಿಲ್ಲೆಯ ಸ್ಥಿತಿಗತಿಗಳ ಬಗ್ಗೆ ವಿವರವಾಗಿ ಪತ್ರ ಬರೆದಿದ್ದು. ಪತ್ರದಲ್ಲಿ ಮೈಸೂರು ಜಿಲ್ಲೆಯ ವೀರಶೈವ , ಲಿಂಗಾಯಿತ ಮುಖಂಡರನ್ನು ಪದಾಧಿಕಾರಿಗಳ ಸ್ಥಾನದಿಂದ ವಜಾ ಮಾಡಲು ಪ್ರತಾಪಸಿಂಹ, ವಿ.ಶ್ರೀನಿವಾಸ ಪ್ರಸಾದ್, ಫಣೀಶ್ ಹಾಗೂ ಸುರೇಶ್‌ಬಾಬು ಅವರು ಬಿಗಿ ಪಟ್ಟು ಹಿಡಿದಿದ್ದರು ಎಂದು ತಿಳಿಸಲಾಗಿದೆ.
ಮೈಸೂರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸ್ಥಾನದಿಂದ ಬದಲಾವಣೆಗೊಂಡಿರುವ ಎಲ್.ಆರ್.ಮಹದೇವಸ್ವಾಮಿ ಅಸಮಾಧಾನ ವ್ಯಕ್ತಪಡಿಸಿ, ಸಂಸದ ಪ್ರತಾಪ ಸಿಂಹ ಅವರು ಜೆಡಿಎಸ್‌ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಮುಖ್ಯವಾಗಿ ಮೈಸೂರಿನ ಚಾಮರಾಜನಗರ, ಹುಣಸೂರು, ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವುದು ಬಹಿರಂಗವಾಗಿದೆ. ಇವರು ಪಕ್ಷವನ್ನು ಅಧಿಕಾರಕ್ಕೆ ಬರಲು ಬಿಡುವುದಿಲ್ಲ. ಇವರ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಜ್ಯಾಧ್ಯಕ್ಷರಿಗೆ ತಿಳಿಸಿದ್ದೇವೆ ಎಂದರು.












Click it and Unblock the Notifications