ಮೈಸೂರು-ಬೆಂಗಳೂರು 10 ಪಥದ ರಸ್ತೆ 2022ಕ್ಕೆ ಪೂರ್ಣ
ಮೈಸೂರು, ಆಗಸ್ಟ್ 18; "ಮುಂದಿನ 2022ರ ದಸರಾಕ್ಕೆ ಮೊದಲೇ ಮೈಸೂರು-ಬೆಂಗಳೂರು ಹತ್ತು ಪಥದ ರಸ್ತೆಯ ಕಾಮಗಾರಿಯು ಪೂರ್ಣಗೊಳ್ಳಲಿದೆ" ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದರು.
ಬುಧವಾರ ಮೈಸೂರು ನಗರದ ಜಲದರ್ಶಿನಿಯಲ್ಲಿ ಸಂಸದರು ಪತ್ರಿಕಾಗೋಷ್ಠಿ ನಡೆಸಿದರು. "ಮುಂದಿನ 2022ರ ದಸರಾ ಮುಂಚಿತವಾಗಿ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ. ಕೊರೊನಾ ಮೊದಲ ಹಾಗೂ ಎರಡನೇ ಅಲೆ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ನಡೆಯೋದಿಲ್ಲ ಎಂಬ ಭಾವನೆ ಇತ್ತು. ಆದರೆ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 2022ರ ಮೈಸೂರು ದಸರಾ ವೇಳೆಗೆ ರಸ್ತೆ ಸಿದ್ಧಗೊಳ್ಳಲಿದೆ" ಎಂದರು.
"ರಾಜ್ಯ ಸರ್ಕಾರದ ನೆರವೂ ಇಲ್ಲದೆ, ಸಂಪೂರ್ಣ ಕೇಂದ್ರ ಸರ್ಕಾರದ ಹಣದ ಮೂಲಕ 10 ಪಥದ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಈ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಒಂದು ರೂಪಾಯಿಯನ್ನು ಪಡೆದಿಲ್ಲ" ಎಂದು ಪ್ರತಾಪ್ ಸಿಂಹ ಸ್ಪಷ್ಟಪಡಿಸಿದರು.

"ಈ ಕಾಮಗಾರಿ ಪೂರ್ಣಗೊಂಡ ಬಳಿಕ ಒಂದೂವರೆ ಗಂಟೆಗೂ ಮುಂಚೆಯೇ ಬೆಂಗಳೂರು ತಲುಪಬಹುದು. 60 ಕಿ.ಮೀ. ಬೈಪಾಸ್ ಸಂಪೂರ್ಣ ಕಾಮಗಾರಿ ಆಗಿದೆ. ಜನವರಿವರೆಗೆ ಎಲ್ಲ ಬೈಪಾಸ್‌ಗಳನ್ನು ತೆರೆಯಲಾಗುವುದು. ದೇಶದ ಅತಿದೊಡ್ಡ ಕಾಮಗಾರಿ ಇದಾಗಿದೆ. ನಿಗದಿತ ಸಮಯಕ್ಕಿಂತ ಮೊದಲೇ ಕಾಮಗಾರಿ ಮುಕ್ತಾಯವಾಗುವ ರಸ್ತೆ ಇದಾಗಿದೆ" ಎಂದು ಹೇಳಿದರು.
ಮಂಡ್ಯ ಸಂಸದೆ ಸಮಲತಾ ಅಂಬರೀಶ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, "ಯಾರಿಗೆ ಅನುಮಾನ ಇದೆಯೋ ಅಂತಹವರು ತಜ್ಞರನ್ನು ಕರೆದುಕೊಂಡು ಬಂದು ಪರಿಶೀಲನೆ ಮಾಡಿಸಿಕೊಳ್ಳಿ" ಎಂದರು.
"ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಮೂರು ಸಂಸದರಿಗೆ ಸೇರುತ್ತದೆ" ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಹತ್ತು ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತಂದಿರುವುದು ಮೈಸೂರಿಗೋಸ್ಕರ ಮಾತ್ರವಾಗಿದೆ" ಎಂದು ತಿಳಿಸಿದರು.
"ಮೈಸೂರು ಡೆಸ್ಟಿನೇಷನ್ ಎಂಬ ಕಾರಣಕ್ಕಾಗಿ ನಾನು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ಮಂಡ್ಯದ ಮೇಲೆ ಹೋಗುತ್ತೇ ಅಂತಾ ಮಂಡ್ಯದವರು, ರಾಮನಗರದ ಮೇಲೆ ಹೋಗುತ್ತೇ ಅಂತಾ ರಾಮನಗರದವರು, ಈ ಕಾಮಗಾರಿ ನನ್ನದು ಅಂತಾ ಹೇಳಿಕೊಂಡರೇ ಅದಕ್ಕೆ ಅರ್ಥ ಇದೆಯಾ?. ಇದು ಮೋದಿ ಸರ್ಕಾರದ ಯೋಜನೆಯಾಗಿದೆ" ಎಂದರು.
"ಸುಮಲತಾ ಅವರು ಈ ಯೋಜನೆಯ ಕಾಮಗಾರಿ ನನ್ನ ರಸ್ತೆ ಮೇಲೆ ಹೋಗುತ್ತದೆ ಎಂದರೆ ಏನು ಮಾಡಲಾಗೋದಿಲ್ಲ. ಅವರಿಗೆ ಅವಶ್ಯಕತೆ ಇದ್ದರೆ ಮಂಡ್ಯದವರು ಮಂಡ್ಯದವರಗೆ, ರಾಮನಗರದವರು ರಾಮನಗರದವರೆಗೂ ಕಾಮಗಾರಿ ತರಲಿ" ಎಂದು ಪ್ರತಾಪ್ ಸಿಂಹ ಹೇಳಿದರು.
"ಯಾರ್ಯಾರೋ ಇದನ್ನು ತಮ್ಮ ಯೋಜನೆ ಎನ್ನುವ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಯೋಜನೆಗೆ ಕಾಂಗ್ರೆಸ್‌ನವರಿಂದ ಬಿಡಿಗಾಸು ಕೂಡ ಸಿಕ್ಕಿಲ್ಲ. ಕಾಂಗ್ರೆಸ್‌ನವರ ಹೇಳಿಕೆಗೆ ಅರ್ಥವಿಲ್ಲ. ಪದೇ ಪದೇ ಜನರಿಂದ ತಿರಸ್ಕೃತರಾದವರ ಮಾತಿಗೆ ಅರ್ಥವಿಲ್ಲ. ವಕ್ತಾರರಿಗೆ ನಮ್ಮ ಪಕ್ಷದ ವಕ್ತಾರರೇ ಉತ್ತರ ನೀಡುವರೇ ಹೊರತು ನಾನು ಕೆಲಸ ಮಾಡುತ್ತಾ ಹೋಗುವೆ" ಎಂದು ಸ್ಪಷ್ಟಪಡಿಸಿದರು.
ಕೊಡಗಿಗೂ ರಸ್ತೆ; "ಮೈಸೂರು-ನಂಜನಗೂಡು ನಡುವೆ 6 ಪಥದ ರಸ್ತೆ ನಿರ್ಮಾಣ ಮಾಡಬೇಕೆಂದು ಮನವಿ ಸಲ್ಲಿಸಲಾಗಿದ್ದು, ಇದಕ್ಕೆ ಸದ್ಯದಲ್ಲೇ ಅನುಮೋದನೆ ಸಿಗಲಿದೆ. ಇದೇ ರೀತಿ ಮೈಸೂರಿನಿಂದ ಟಿ.ನರಸೀಪುರದವರೆಗೆ 4 ಪಥದ ರಸ್ತೆ ನಿರ್ಮಾಣ ಆಗಲಿದೆ" ಎಂದು ಪ್ರತಾಪ್ ಸಿಂಹ ತಿಳಿಸಿದರು.
"ಕೊಡಗು ಹಾಗೂ ಬೆಂಗಳೂರು ನಡುವೆ ಸುಸಜ್ಜಿತ ರಸ್ತೆ ನಿರ್ಮಿಸಲಾಗುವುದು. ಬರುವ 2022ರ ಮಾರ್ಚ್‌ನಲ್ಲಿ ಬೆಂಗಳೂರು-ಕೊಡಗು ನಡುವಿನ ಸುಸಜ್ಜಿತ ರಸ್ತೆ ಕಾಮಗಾರಿ ಆರಂಭವಾಗಲಿದ್ದು, 2024ಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. ಕಾಮಗಾರಿ ಪೂರ್ಣಗೊಂಡರೆ ಮೂರೂವರೆ ಗಂಟೆಯಲ್ಲಿ ಬೆಂಗಳೂರಿನಿಂದ ಕೊಡಗು ತಲುಪಬಹುದಾಗಿದೆ" ಎಂದರು.
ಈಗ ಅರ್ಥವಾಗಬೇಕು; ಆಫ್ಘಾನಿಸ್ತಾನ ವಿಚಾರ ಮಾತನಾಡಿದ ಪ್ರತಾಪ್ ಸಿಂಹ, "ಭಾರತೀಯರಿಗೆ ಸಿಎಎ ಕಾಯ್ದೆಯನ್ನು ಏಕೆ ಜಾರಿಗೆ ತರಲಾಯಿತು? ಎಂಬುದು ಈಗ ಅರ್ಥವಾಗಬೇಕು. ಮೋದಿಯವರು ಪರಿಸ್ಥಿತಿಯನ್ನು ಮೊದಲೇ ಅರ್ಥ ಮಾಡಿಕೊಂಡು ಸಿಎಎ ಕಾಯ್ದೆಯನ್ನು ಜಾರಿಗೊಳಿಸಿದರು. ಪ್ರತಿಯೊಬ್ಬ ಭಾರತೀಯರು ಇದನ್ನು ಅರ್ಥ ಮಾಡಿಕೊಳ್ಳಬೇಕು" ಎಂದು ಹೇಳಿದರು.
"ಇವತ್ತು ಆಫ್ಘಾನಿಸ್ತಾನದ ಸುತ್ತಮುತ್ತ ಹಲವಾರು ಮುಸ್ಲಿಂ ರಾಷ್ಟ್ರಗಳಿದ್ದರೂ ಅವರನ್ನು ಕರೆಸಿಕೊಳ್ಳುತ್ತಿಲ್ಲ. ಷರಿಯಾ, ತಾಲಿಬಾನ್ ಮಾನವ ವಿರೋಧಿಯೆಂಬುದು ಇದೀಗ ಸಾಬೀತಾಗಿದೆ. ಭಾರತದಲ್ಲೂ ಅದೇ ಮನಸ್ಥಿತಿಯ ಜನರಿದ್ದಾರೆ. ಸಿಎಎ ಜಾರಿಗೆ ತಂದದ್ದು ಆಫ್ಘಾನಿಸ್ತಾನದ ಕಾರಣಕ್ಕಾಗಿ ಮಾತ್ರವಲ್ಲ. ಇತರ ಕಡೆಗಳಲ್ಲಿ ಈ ರೀತಿಯ ಅನಾಹುತಗಳಾಗಬಹುದು. ಎಲ್ಲರೂ ಸೇರಿ ಇದನ್ನು ಎದುರಿಸಬೇಕಾಗಿದೆ. ಆಫ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆ ಮುಸ್ಲಿಂ ರಾಷ್ರಗಳಿಗೂ ಅಪಾಯಕಾರಿಯಾಗಿ ಪರಿಣಮಿಸಬಹುದು" ಎಂದರು.












Click it and Unblock the Notifications