ಮೈಸೂರು ವಿಶ್ವವಿದ್ಯಾಲಯದ ಪದವಿಗಳು ಗೋತಾನಾ?

ಹೀಗೂ ಉಂಟೆ ಎಂದು ಹಳೆಯ ವಿದ್ಯಾರ್ಥಿಗಳು ತಮ್ಮ ಮೂಗಿನ ಮೇಲೆ ಬೆರಳಿಟ್ಟುಕೊಂಡು ಆಶ್ಚರ್ಯಪಡುವಂತಿದೆ ಈ ಪ್ರಕರಣ. ಹೌದು, 1979ರಿಂದ ಮೈಸೂರು ವಿಶ್ವವಿದ್ಯಾಲಯ ಪ್ರದಾನ ಮಾಡಿರುವ ಪದವಿಗಳು ಯಾವುವೂ ಊರ್ಜಿತವಲ್ಲ. ಅವೆಲ್ಲಾ ಕಾನೂನುಬಾಹಿರವಾಗಿದೆ ಎಂದು ತನಿಖಾ ಆಯೋಗ ವರದಿ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ. ಎರಡೂವರೆ ದಶಕಗಳ ಹಿಂದೆ ನೀಡಿರುವ ಪದವಿಯೊಂದರ ಬಗ್ಗೆ ಈಗ ವಿವಾದ ಹುಟ್ಟಿಕೊಂಡಿರುವುದು ತದನಂತರದ ಪದವೀಧರಲ್ಲಿ ಆತಂಕ ಸೃಷ್ಟಿಸಿದೆ.
ಪ್ರಕರಣದ ಹಕೀಕತ್ತು ಏನು?
ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಹೇಶಪ್ಪ ಅವರು ಕುಲಪತಿ ಹುದ್ದೆ ನೇಮಕಾತಿ ಸಂದರ್ಭ ಮೈಸೂರು ವಿವಿಯಿಂದ ಪ್ರಥಮ ದರ್ಜೆಯಲ್ಲಿ ಪಾಸಾಗಿರುವ ಅಂಕಪಟ್ಟಿ ಸಲ್ಲಿಸಿದ್ದರು.
ಇದರ ವಿರುದ್ಧ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಮಹೇಶಪ್ಪ ಅವರು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಆದರೆ ಅವರು ಪ್ರಥಮ ದರ್ಜೆಯಲ್ಲಿ ಪಾಸಾಗಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದಾರೆ' ಎಂದು ಆರೋಪಿಸಿದ್ದರು.
ಈ ಬಗ್ಗೆ ತನಿಖೆ ನಡೆಸಲು ನ್ಯಾ. ಅಭಯ್ ಗೋಯಿಲ್ ನೇತೃತ್ವದ ಏಕಸದಸ್ಯ ಸಮಿತಿ ರಚಿಸಲಾಗಿತ್ತು. ಸಮಿತಿಯು ಇತ್ತೀಚೆಗೆ ತನ್ನ ವರದಿ ಸಲ್ಲಿಸಿದ್ದು, ಪ್ರೊ. ಮಹೇಶಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಆದರೆ 'ರಾಜ್ಯಪಾಲರ ಅನುಮತಿ ಪಡೆಯದೆ ಮೈಸೂರು ವಿವಿ 1979ರಿಂದ 1998ರವರೆಗೆ ನಿಯಮಬಾಹಿರವಾಗಿ ಪದವಿ ಪ್ರದಾನ ಮಾಡಿದೆ. ಹೀಗಾಗಿ ಆ ಅವಧಿಯಲ್ಲಿ ನೀಡಲಾಗಿರುವ ಇಂಜಿನಿಯರಿಂಗ್ ಸೇರಿದಂತೆ ಸೇರಿದಂತೆ ಎಲ್ಲ ಪದವಿಗಳೂ ಕಾನೂನುಬಾಹಿರವಾಗಿದೆ' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
1979ರವರೆಗೂ ಪಾಸಾದ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬ ಎಷ್ಟು ಅಂಕ ಗಳಸಿರುತ್ತಾನೋ ಅದರ ಆಧಾರದ ಮೇಲೆ ದರ್ಜೆ ನಿಗದಿಪಡಿಸಲಾಗುತ್ತಿತ್ತು. ನಂತರ ಪ್ರಥಮ ಪ್ರಯತ್ನದಲ್ಲಿ ವಿದ್ಯಾರ್ಥಿಯೊಬ್ಬ ಗಳಿಸಿದ ಅಂಕಗಳ ಆಧಾರದ ಮೇಲೆ ದರ್ಜೆ ನಿಗದಿ ಮಾಡಲಾಗುತ್ತಿದೆ. ಈ ಸಂಬಂಧ ತಿದ್ದುಪಡಿಗೆ ಶೈಕ್ಷಣಿಕ ಮಂಡಳಿ ಹಾಗೂ ಸಿಂಡಿಕೇಟ್ ರಾಜ್ಯಪಾಲರ ಅನುಮತಿ ಪಡೆಯದ ಕಾರಣ ಮೈಸೂರು ವಿವಿ ನೀಡಿರುವ ಪದವಿಗಳು ಕಾನೂನುಬಾಹಿರ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಾಲಿ ಕುಲಪತಿ ರಂಗಪ್ಪ ಏನನ್ನುತ್ತಾರೆ?
ಮೈಸೂರು ವಿವಿಯಲ್ಲಿ ಯಾವುದೇ ಪದವಿಯನ್ನೂ ಕಾನೂನುಬಾಹಿರವಾಗಿ ನೀಡಿಲ್ಲ. ವಿವಿ ಯಾವುದೇ ನಿಯಮವನ್ನೂ ಉಲ್ಲಂಘಿಸಿಲ್ಲ. ಯಾರೋ ಒಬ್ಬರ ಹಿತಕಾಯುವ ಸಲುವಾಗಿ ವ್ಯತಿರಿಕ್ತ ವರದಿ ನೀಡಲಾಗಿದೆ. ನ್ಯಾಯಮೂರ್ತಿಗಳ ವರದಿಯ ಬಗ್ಗೆ ನಾನೇನೂ ಪ್ರತಿಕ್ರಿಯಿಸುವುದಿಲ್ಲ. ಆದರೆ ಶೈಕ್ಷಣಿಕ ಮಂಡಳಿ ಹಾಗೂ ಸಿಂಡಿಕೇಟ್ ಕೈಗೊಳ್ಳುವ ಯಾವುದೇ ತೀರ್ಮಾನಕ್ಕೆ ರಾಜ್ಯಪಾಲರ ಅನುಮತಿ ಪಡೆಯುವುದು ಕಡ್ಡಾಯ ಎಂದು ಹೇಳುವುದು ಕಾರ್ಯಸಾಧುವಲ್ಲ' ಎಂದು ಪ್ರೊ. ಕೆಎಸ್ ರಂಗಪ್ಪ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications