ಮೈಸೂರು: ಬೈಕಲ್ಲಿ ಸೊಸೆಯ ಕರೆದೊಯ್ದು ಹತ್ಯೆ ಮಾಡಿದ್ರು

ಹಿಂದಿನ ಸುದ್ದಿ: ಅಂತರ್ಜಾತಿ ವಿವಾಹವಾಗಿದ್ದ ಯುವತಿಯ ಮೇಲೆ ಪೆಟ್ರೋಲ್ ಸುರಿದು ಹತ್ಯೆ ಮಾಡಲು ಯತ್ನಿಸಿರುವ ಘಟನೆ ಮಳವಳ್ಳಿ ತಾಲೂಕು ಕನ್ನಹಳ್ಳಿ ಗೇಟ್ ಬಳಿ ಮಧ್ಯರಾತ್ರಿ ನಡೆದಿದೆ. ಮೈಸೂರಿನ ಮೇಟಗಳ್ಳಿ ನಿವಾಸಿ ಶಿಲ್ಪ (19) ತೀವ್ರ ಗಾಯಗೊಂಡು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದುರ್ದೈವಿ.
ಮೈಸೂರಿನ ಮೇಟಗಳ್ಳಿ ನಿವಾಸಿ ಶಿಲ್ಪ ಮತ್ತು ಅಭಿಜಿತ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಅಂತರ್ಜಾತಿ ವಿವಾಹವಾದ್ದರಿಂದ ಮನೆಯವರ ವಿರೋಧದ ನಡುವೆಯೂ ಹುಡುಗ ಅಭಿಜಿತ್ ಅವರ ಚಿಕ್ಕಪ್ಪ ಪುಟ್ಟಸ್ವಾಮಿ ಮತ್ತು ಚಿಕ್ಕಮ್ಮ ಪ್ರಮೀಳ ಇವರಿಬ್ಬರಿಗೂ ಮದುವೆ ಮಾಡಿಸಿದ್ದರು.
ಬೈಕಿನಲ್ಲಿ ಸೊಸೆಯನ್ನು ಕರೆದೊಯ್ದು ಹತ್ಯೆಗೆ ಯತ್ನ:
ಆದರೆ ಮದುವೆಯಾದಾಗಿನಿಂದಲೂ ಮನೆಯಲ್ಲಿ ಜಗಳ ತಪ್ಪಿರಲಿಲ್ಲ. ನಿನ್ನೆ ಪುಟ್ಟಸ್ವಾಮಿ ಮತ್ತು ಪ್ರಮೀಳ ಅವರು ಶಿಲ್ಪಾಳನ್ನು ಮಳವಳ್ಳಿಯ ಮುಡುಕುತೊರೆ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೋಗಿ ಬರೋಣವೆಂದು ಕರೆದುಕೊಂಡು ಹೋಗಿದ್ದರು. ರಾತ್ರಿ 11ರ ಸಮಯದಲ್ಲಿ ವಾಪಸ್ಸಾಗುತ್ತಿದ್ದಾಗ ನೇಣೂರು ಗೇಟ್ ಬಳಿ ಮೂತ್ರ ವಿಸರ್ಜನೆಗೆಂದು ಬೈಕ್ ನಿಲ್ಲಿಸಿದ್ದಾರೆ.
ತಕ್ಷಣ ಶಿಲ್ಪಾಳ ಕುತ್ತಿಗೆಗೆ ವೇಲ್ ಬಿಗಿದು ಸಾಯಿಸಲು ಯತ್ನಿಸಿದಾಗ ಅವರಿಂದ ಶಿಲ್ಪ ತಪ್ಪಿಸಿಕೊಂಡು ಓಡಿದ್ದಾಳೆ. ಶಿಲ್ಪಾಳನ್ನು ಹಿಂಬಾಲಿಸಿದ ಪುಟ್ಟಸ್ವಾಮಿ ಮತ್ತು ಪ್ರಮೀಳ ಕನ್ನಹಳ್ಳಿ ಗೇಟ್ ಬಳಿ ಆಕೆಯನ್ನು ಹಿಡಿದು ಕೈ ಕಾಲು ಕಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹೊತ್ತಿಸಿದ್ದಾರೆ. ಶಿಲ್ಪ ಸಾವನ್ನಪ್ಪಿದ್ದಾಳೆಂದು ತಿಳಿದು ಇಬ್ಬರೂ ಪರಾರಿಯಾಗಿದ್ದಾರೆ.
ಶಿಲ್ಪಾಳ ಚೀರಾಟ ಕೇಳಿದ ದಾರಿಹೋಕರು ಬೆಂಕಿ ನಂದಿಸಿ, ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆಗೆ ಅಂತರ್ಜಾತಿ ವಿವಾಹ ಹಾಗೂ ವರದಕ್ಷಿಣೆಯೇ ಕಾರಣ ಎನ್ನಲಾಗಿದೆ.
ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ. ಶಿಲ್ಪ ತೀವ್ರ ಸುಟ್ಟ ಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಶಿಲ್ಪಾಳ ಪರಿಸ್ಥಿತಿ ಕಂಡ ಪೋಷಕರ ರೋಧನ ಮುಗಿಲು ಮುಟ್ಟಿದೆ. ಮದುವೆ ಮಾಡಿಸಿದ ಅತ್ತೆ ಮಾವನೇ ಈ ಕೃತ್ಯವೆಸಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.












Click it and Unblock the Notifications