Mysore Dasara Lighting 2023: ತೆರೆದ "ಅಂಬಾರಿ" ಬಸ್‌ನಲ್ಲಿ ದೀಪಾಲಂಕಾರ ಕಣ್ತುಂಬಿಕೊಂಡ 10 ಸಾವಿರ ಮಂದಿ, ಮಾಹಿತಿ
ಮೈಸೂರು, ನವೆಂಬರ್, 05:'ಅರಮನೆ ನಗರಿ' ಸೌಂದರ್ಯವನ್ನು ಈ ಬಾರಿ ಡಬ್ಬಲ್ ಡೆಕ್ಕರ್ ಅಂಬಾರಿ ಬಸ್ ಮತ್ತಷ್ಟು ಹಿಗ್ಗಿಸಿದ್ದು, ದಸರಾ ಮಹೋತ್ಸವದಲ್ಲಿ ತೆರೆದ ಬಸ್‌ಗಳ ಮೂಲಕ 10 ಸಾವಿರ ಮಂದಿ ವಿದ್ಯುತ್ ದೀಪಾಲಂಕಾರವನ್ನು ಕಣ್ತುಂಬಿಕೊಂಡಿದ್ದಾರೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮದ ಅಂಬಾರಿ ಡಬಲ್ ಡೆಕ್ಕರ್ ಬಸ್‌ಗಳಿಗೆ ಈ ಬಾರಿಯೂ ಸಾರ್ವಜನಿಕ ರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಕ್ಟೋಬರ್ 15ರಿಂದ ನವೆಂಬರ್ 4ರವರೆಗೆ 6 ತೆರೆದ ಬಸ್‌ನಲ್ಲಿ ಸುಮಾರು 10 ಸಾವಿರ ಸಾರ್ವಜನಿಕರು ಸಂಚರಿಸಿದ್ದು, ವಿದ್ಯುತ್ ದೀಪಾಲಂಕಾರದಲ್ಲಿ ನಗರದ ಸೌಂದರ್ಯವನ್ನು ಸವಿದಿದ್ದಾರೆ ಎಂದು ಕೆಎಸ್‌ಟಿಡಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಆರು ಬಸ್, 3 ಟ್ರಿಪ್
ಅಕ್ಟೋಬರ್ 15ರಿಂದ ನವೆಂಬರ್ 4ರವರೆಗೆ ಸುಮಾರು 10 ಸಾವಿರ ಮಂದಿ 6 ಅಂಬಾರಿ ಡಬಲ್ ಡೆಕ್ಕರ್ ಬಸ್‌ಗಳಲ್ಲಿ ಸಂಜೆ 6:30, ರಾತ್ರಿ 8 ಹಾಗೂ 9:30 ಗಂಟೆ ವೇಳಾಪಟ್ಟಿಯಂತೆ ಆರು ಬಸ್‌ಗಳು 3 ಟ್ರಿಪ್‌ಗಳಲ್ಲಿ ಸಂಚರಿಸಿವೆ. 40 ಆಸನ ಸಾಮರ್ಥ್ಯ ಹೊಂದಿರುವ ಅಂಬಾರಿ ಬಸ್ಸಿನ ಕೆಳ ಅಂತಸ್ತಿನಲ್ಲಿ ತಲಾ 250 ರೂಪಾಯಿ ಹಾಗೂ ಮೇಲ್ಮಹಡಿಯಲ್ಲಿ ತಲಾ 500 ರೂಪಾಯಿ ದರದ ಪ್ರಯಾಣದ ಟಿಕೆಟ್ ಪಡೆದು ಸಾರ್ವಜನಿಕರು ಹಾಗೂ ಪ್ರವಾಸಿಗರು ವಿದ್ಯುದ್ದೀಪಾಲಂಕಾರ ವೀಕ್ಷಿಸಿ ಸಂಭ್ರಮಿಸಿದ್ದಾರೆ.
ಇನ್ನು ನವೆಂಬರ್ 5ರವರೆಗೆ ಮೈಸೂರಿನ ವಿದ್ಯುದ್ದೀಪಾಲಂಕಾರವನ್ನು ವಿಸ್ತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೂಚನೆ ನೀಡಿರುವುದರಿಂದ ಅಲ್ಲಿಯವರೆಗೂ ತೆರೆದ ಬಸ್‌ನಲ್ಲಿ ಅರಮನೆ ನಗರಿ ವೈಭವನ್ನು ವೀಕ್ಷಿಸಬಹುದಾಗಿದೆ.
ಅಂಬಾರಿ ಬಸ್ ಸಂಚಾರದ ಮಾರ್ಗಗಳ ವಿವರ
ಜೆಎಲ್‌ಬಿ ರಸ್ತೆಯ ಮಯೂರ ಹೊಯ್ಸಳ ಹೋಟೆಲ್‌ನಿಂದ ಹೊರಟು ಮೆಟ್ರೊಪೋಲ್ ಸರ್ಕಲ್, ಹಳೇ ಡಿಸಿ ಕಚೇರಿ, ಕ್ರಾರ್ಡ್ ಹಾಲ್, ಓರಿಯೆಂಟಲ್ ರೀಸರ್ಚ್ ಇನ್ಸ್ಟಿಟ್ಯೂಟ್, ರಾಮಸ್ವಾಮಿ ಸರ್ಕಲ್, ಚಾಮರಾಜ ಜೋಡಿ ರಸ್ತೆ, ಸರಕಾರಿ ಸಂಸ್ಕೃತ ಪಾಠಶಾಲೆ, ಅರಮನೆ ದಕ್ಷಿಣ ದ್ವಾರ, ಜಯಮಾರ್ತಾಂಡ ಗೇಟ್, ಹಾರ್ಡಿಂಜ್ ಸರ್ಕಲ್, ಕೆ.ಆರ್.ಸರ್ಕಲ್, ಸಯ್ಯಾಜಿರಾವ್ ರಸ್ತೆ ದೇವಾಜ ಮಾರುಕಟ್ಟೆ, ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್, ರೈಲ್ವೇ ಸ್ಟೇಷನ್ ಸರ್ಕಲ್ ಮಾರ್ಗವಾಗಿ ಸಂಚರಿಸುವ ಅಂಬಾರಿ ಡಬಲ್ ಡೆಕ್ಕರ್ ಬಸ್ಸುಗಳು ಮರಳಿ ಮಯೂರ ಹೊಯ್ಸಳ ಹೋಟೆಲ್ ತಲುಪಲಿವೆ.

ದಸರಾ ಮಹೋತ್ಸವ ಉದ್ಘಾಟನೆಯಾದ ಅಕ್ಟೋಬರ್ 15 ರಿಂದ 23ರವರೆಗೆ ಡಬಲ್ ಡೆರ್ಕ್ಕ ಬಸ್‌ಗಳ ಶೇಕಡಾ 100ರಷ್ಟು ಆಸನಗಳು ಭರ್ತಿಯಾಗಿದ್ದವು. ವಿಜಯ ದಶಮಿ ಮೆರವಣಿಗೆ ನಿಮಿತ್ತ ಅಕ್ಟೋಬರ್ 4ರಂದು ಅಂಬಾರಿ ಬಸ್ಸುಗಳ ಸಂಚಾರ ಸೇವೆ ಇರಲಿಲ್ಲ. ನಂತರ ಬಸ್‌ನ ಲೋಯರ್ ಡೆಕ್ ಬೇಡಿಕೆ ತೀವ್ರ ಕಡಿಮೆಯಾಗಿತ್ತು.
ತೆರೆದ ಬಸ್‌ನಲ್ಲಿ ಸಂಚರಿಸಲು ಸಾರ್ವಜನಿಕರಿಂದ ಸಖತ್ ಡಿಮ್ಯಾಂಡ್ ಇದ್ದು, ಹಲವರಿಗೆ ಆನ್‌ಲೈನ್‌ನಲ್ಲಿ ಟಿಕೆಟ್ ಸಿಕ್ಕಿಲ್ಲ. ಅವರೆಲ್ಲರೂ "ನಾವು ದೂರದೂರಿನಿಂದ ಬಂದಿದ್ದೇವೆ. ಹಾಗಾಗಿ ತೆರೆದ ಬಸ್‌ನಲ್ಲಿ ಹೋಗಲು ಅವಕಾಶ ಕೊಡಿ. ನಿಂತುಕೊಂಡೇ ಹೋಗುತ್ತೇವೆ ಎಂದು ದುಂಬಾಲು ಬಿದ್ದಿದ್ದರು. ಅವರೆಲ್ಲರಿಗೂ ರಸೀದಿ ನೀಡಿ ನಿಂತುಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದೆ," ಎಂದು ಕೆಎಸ್‌ಟಿಡಿಸಿ ಮ್ಯಾನೇಜರ್ ಮಧು ತಿಳಿಸಿದ್ದಾರೆ.
ಮೈಸೂರಲ್ಲಿ ಅಂಬಾರಿ ಸವಾರಿ ಯಶಸ್ವಿಯಾಗಿರುವ ಹಿನ್ನೆಲೆ ಬೇಡಿಕೆ ಆಧರಿಸಿ ನೆರೆ ಜಿಲ್ಲೆಗಳಾದ ಚಾಮರಾಜನಗರ, ಕೊಡಗು, ಹಾಸನ ಹಾಗೂ ಮಂಡ್ಯ ಜಿಲ್ಲೆಗಳ ಕೇಂದ್ರ ಸ್ಥಾನಗಳಲ್ಲೂ ಅಂಬಾರಿ ಬಸ್ ಸೇವೆ ಒದಗಿಸಲು ನಿಗಮವು ಮುಂದಾಗಿದ್ದು, ಸಮೀಕ್ಷೆ ನಡೆಸಿ ರೂಟ್ ಮ್ಯಾಪ್ ತಯಾರಿಸಿದ ನಂತರ ಸಾಧಕ-ಬಾಧಕಗಳನ್ನು ಗಮನಿಸಿದ ಬಳಿಕ ಅಂಬಾರಿ ಬಸ್ ಸೇವೆ ವಿಸ್ತರಿಸುವ ಕುರಿತು ನಿರ್ಧರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.












Click it and Unblock the Notifications