ಮೈಸೂರು ದಸರಾ 2023ರ ಜಂಬೂ ಸವಾರಿಗೆ ಕ್ಷಣಗಣನೆ, ಪೊಲೀಸ್ ಭದ್ರತೆ ಹೇಗಿದೆ ಗೊತ್ತಾ?
ಮೈಸೂರು, ಅಕ್ಟೋಬರ್, 24: ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ವಿಜಯ ದಶಮಿ ಮೆರವಣಿಗೆಯನ್ನು ಕಣ್ಣುಂಬಿಕೊಳ್ಳಲು ಲಕ್ಷಾಂತರ ಜನರು ಕಾತರದಿಂದ ಕಾಯುತ್ತಿದ್ದಾರೆ.
ಅಕ್ಟೋಬರ್ 24ರಂದು ಮಧ್ಯಾಹ್ನ 1:46ರಿಂದ 2:08 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿರುವ ನಂದಿಧ್ವಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂಜೆ ನೆರವೇರಿಸುವರು. ಸಂಜೆ 4:40ರಿಂದ 5 ಗಂಟೆಯೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಶ್ರೀಚಾಮುಂಡೇಶ್ವರಿದೇವಿಗೆ ಪುಷ್ಪಾರ್ಚನೆ ನೆರವೇರಿಸುವರು.

ವಿಜಯದಶಮಿ ದಿನ ನಡೆಯಲಿರುವ ಮೆರವಣಿಗೆಗೆ ಗಜಪಡೆ ಸಂಪೂರ್ಣ ಸಿದ್ದವಾಗಿದೆ. ನಾಲ್ಕನೇ ಬಾರಿ ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ಈಗಾಗಲೇ ಪುಷ್ಪಾರ್ಚನೆ ರಿಹರ್ಸಲ್ ಸೇರಿದಂತೆ ಎಲ್ಲಾ ಬಗೆಯ ತಾಲೀಮು ಮಾಡಲಾಗಿದೆ.
ಪೊಲೀಸ್ ಬಿಗಿ ಭದ್ರತೆ
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮೈಸೂರು ನಗರ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಅರಮನೆ ಸೇರಿದಂತೆ ಜಂಬೂ ಸವಾರಿ ಮಾರ್ಗ ಹಾಗೂ ಪಂಜಿನ ಕವಾಯತು ಮೈದಾನದಲ್ಲಿ ಲಕ್ಷಾಂತರ ಮಂದಿ ಸೇರುವುದರಿಂದ ಕಟ್ಟೆಚ್ಚರ ವಹಿಸಿದ್ದಾರೆ. ಭದ್ರತೆಗಾಗಿ 6 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳೀಯವಾಗಿ 2,000 ಪೊಲೀಸರ ನಿಯೋಜನೆಯೊಂದಿಗೆ ನೆರೆ ಜಿಲ್ಲೆಗಳಿಂದ 4,000 ಪೊಲೀಸರನ್ನು ಕರೆಸಿಕೊಳ್ಳಲಾಗಿದೆ.
25 ಸಾವಿರ ಆಸನಗಳ ವ್ಯವಸ್ಥೆ
ಈಗಾಗಲೇ ಅರಮನೆ ಎದುರು ವಿಶಾಲವಾದ ಶಾಮಿಯಾನ, ಕುರ್ಚಿಗಳನ್ನು ಹಾಕಲಾಗಿದ್ದು, ಜಂಬೂಸವಾರಿ ವೀಕ್ಷಿಸಲು 25 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಜಂಬೂಸವಾರಿ ವೀಕ್ಷಿಸಲು ದೇಶ-ವಿದೇಶಗಳಿಂದ ಆಗಮಿಸಿರುವ ಪ್ರವಾಸಿಗರು ಈಗಾಗಲೇ ಮೈಸೂರಿನಲ್ಲಿ ಬೀಡುಬಿಟ್ಟಿದ್ದಾರೆ. ಜಂಬೂಸವಾರಿ ಮೆರವಣಿಗೆ ಸಾಗುವ ರಸ್ತೆ ಇಕ್ಕೆಲಗಳಲ್ಲಿ ಲಕ್ಷಾಂತರ ಮಂದಿ ಜಮಾವಣೆಗೊಳ್ಳಲಿರುವ ಹಿನ್ನೆಲೆಯಲ್ಲಿ ಚಾಮರಾಜೇಂದ್ರ ವೃತ್ತ ಸೇರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಭದ್ರತೆ ಪರಿಶೀಲನೆ ಮಾಡಲಾಗಿದೆ. ಜನರು ರಸ್ತೆಗೆ ಇಳಿಯದಂತೆ ತಡೆ ಬೇಲಿ ನಿರ್ಮಾಣ ಮಾಡಲಾಗಿದೆ.
ನಗರದ ಹಲವೆಡೆ ತೀವ್ರ ತಪಾಸಣೆ
ಜಂಬೂ ಸವಾರಿ ದಿನದಂದು ಲಕ್ಷಾಂತರ ಪ್ರವಾಸಿಗರು ಜಂಬೂ ಸವಾರಿ ವೀಕ್ಷಣೆಗೆ ಆಗಮಿಸಲಿದ್ದು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಅಲ್ಲದೇ ನಗರವನ್ನು ಪ್ರವೇಶಿಸುವ ಹೆದ್ದಾರಿಗಳ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗುತ್ತಿದೆ. ಜೊತೆಗೆ ನಗರದ ಹೋಟೆಲ್, ಲಾಡ್ಜ್‌ಗಳಲ್ಲಿ ಅನುಮಾನಾಸ್ಪದವಾಗಿ ವಾಸ್ತವ್ಯ ಹೂಡಿರುವ ವ್ಯಕ್ತಿಗಳ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ಪೊಲೀಸ್ ತಂಡಗಳು ಹೀಗಿವೆ
ಡಿಐಜಿ-1, ಎಸ್‌ಪಿ-11, ಪೊಲೀಸ್ ಅಧಿಕಾರಿಗಳು-410, ಸಿಬ್ಬಂದಿ-3778, ಒಟ್ಟು- 400 ಪೊಲೀಸರನ್ನು ನೇಮಿಸಲಾಗಿದೆ. ಈ ಪೈಕಿ ಸ್ಥಳೀಯವಾಗಿ 2,000 ಪೊಲೀಸ್ ಸಿಬಂದಿ ನೇಮಕ ಮಾಡಲಾಗಿದೆ.
1. ಕೆಎಸ್‌ಆರ್‌ಪಿ-30
2. ಬಿಡಿಡಿಎಸ್-2
3. ಎಎಸ್‌ಸಿ-20
4. ಗರುಡ ಪಡೆ-1












Click it and Unblock the Notifications