ದಸರಾ ಜಂಬೂಸವಾರಿ ಯಶಸ್ವಿ: ಸಾಂಸ್ಕೃತಿಕ ನಗರಿಯಿಂದ ಗಜಪಡೆಗೆ ವಿಶೇಷ ಬೀಳ್ಕೊಡುಗೆ
ಮೈಸೂರು, ಅಕ್ಟೋಬರ್ 26: ಕಳೆದ ಒಂದೂವರೆ ತಿಂಗಳಿನಿಂದ ಮೈಸೂರು ಅರಮನೆಯಲ್ಲಿ ಬೀಡುಬಿಟ್ಟಿದ ದಸರಾ ಗಜಪಡೆಯನ್ನು ಗುರುವಾರ ಪ್ರೀತಿಯಿಂದ ಬೀಳ್ಕೊಡಲಾಯಿತು. ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರವಾದ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿ ಆತ್ಮೀಯವಾಗಿ ಕಾಡಿಗೆ ಕಳುಹಿಸಲಾಯಿತು
ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿ. ಈ ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳಲೆಂದೇ ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಅಂಥ ಆಕರ್ಷಣೆಯ ಕೇಂದ್ರವಾದ ಗಜಪಡೆ ಈ ಬಾರಿ ತಮ್ಮ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದ್ದು, ಇಂದು ಸ್ವಸ್ಥಾನಕ್ಕೆ ಮರಳಲಿವೆ.

ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಅರ್ಜುನ, ವಿಜಯ, ವರಲಕ್ಷ್ಮಿ, ಧನಂಜಯ ಮತ್ತು ಮಹೇಂದ್ರ, ಪ್ರಶಾಂತ, ಧನಂಜಯ ಸೇರಿದಂತೆ 14 ಆನೆಗಳಿಗೆ ಅರಮನೆ ಆವರಣದಲ್ಲಿ ಪೂಜೆ ಸಲ್ಲಿಸಿ ಆತ್ಮೀಯವಾಗಿ ಬೀಳ್ಕೊಡಲಾಗಿದ್ದು, ಅರಣ್ಯಾಧಿಕಾರಿಗಳು, ಜಿಲ್ಲಾಡಳಿತದ ವತಿಯಿಂದ ಆನೆಗಳನ್ನು ಅವುಗಳ ಶಿಬಿರಕ್ಕೆ ವಾಪಸ್ ಕಳುಹಿಸಲಾಗಿದೆ.
ಆನೆಗಳೊಂದಿಗೆ ಅರಮನೆ ಆಗಮಿಸಿದ್ದ ಮಾವುತರು, ಕಾವಾಡಿಗರ ಮಕ್ಕಳು ಹಾಗೂ ಕುಟುಂಬ ಭಾರವಾದ ಮನಸ್ಸಿನಿಂದಲೇ ಊರಿನ ಕಡೆ ಹೆಜ್ಜೆ ಹಾಕಿದರು. ಈ ವೇಳೆ ನೆರೆದಿದ್ದವರೆಲ್ಲರೂ ಹೋಗಿ ಬನ್ನಿ ಮತ್ತೆ ಮುಂದಿನ ದಸರೆಗೆ ಸಿಗೋಣ ಎಂಬಂತೆ ಬೀಳ್ಕೊಡುತ್ತಿದ್ದ ದೃಶ್ಯ ಕಂಡು ಬಂದಿತು.

ಚಾಮುಂಡಿ ಬೆಟ್ಟದಲ್ಲಿ ರಥೋತ್ಸವ
ನಾಡಹಬ್ಬ ದಸರಾ ಮಹೋತ್ಸವ ಮುಗಿದ ಎರಡು ದಿನದ ಬಳಿಕ ಚಾಮುಂಡಿಬೆಟ್ಟದಲ್ಲಿ ನಡೆದ ರಥೋತ್ಸವ ಮಹೋತ್ಸವಕ್ಕೆ ರಾಜವಂಶಸ್ಥ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಬೆಳಗ್ಗೆ 7:55 ರಿಂದ 8:20 ರ ವೃಶ್ಚಿಕ ಶುಭ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ದೊರೆಯಿತು. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಕೂಡ ರಥೋತ್ಸವದಲ್ಲಿ ಭಾಗಿಯಾಗಿದ್ದರು. 21 ಕುಶಾಲತೋಪು ಸಿಡಿಸಿ ಪೊಲೀಸ್ ಇಲಾಖೆ ಗೌರವ ಸಲ್ಲಿಸಿತು. ಶಾಸಕ ಜಿ.ಟಿ.ದೇವೇಗೌಡ, ಪತ್ನಿ ಲಲಿತಾ ಜಿ.ಟಿ.ದೇವೇಗೌಡ ಸೇರಿ ಅನೇಕರು ಪಾಲ್ಗೊಂಡಿದ್ದರು.












Click it and Unblock the Notifications