Mysuru: ಮೈಸೂರು ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆಗೆ ₹1000 ಕೋಟಿ ಬೇಕು; ಸಂಸದ ಪ್ರತಾಪ್ ಸಿಂಹ
ಮೈಸೂರು: ಮೈಸೂರಿಗೆ ಉತ್ತಮ ಸಂಪರ್ಕ ಕಲ್ಪಿಸುವ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ₹1000 ಕೋಟಿ ಅಗತ್ಯವಿದ್ದು, ಕೇಂದ್ರ ಸರ್ಕಾರ ಅನುದಾನ ಕೊಡಲು ಸಿದ್ಧವಿದೆ ಎಂದು ಸಂಸದ ಪ್ರತಾಪ್‌ಸಿಂಹ ತಿಳಿಸಿದರು.
ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ನೈಋತ್ಯ ರೈಲ್ವೆ ಮೈಸೂರು ವಿಭಾಗದ 12 ರೈಲು ನಿಲ್ದಾಣ ಅಭಿವೃದ್ಧಿ, ಒಂದು ರಸ್ತೆ ಕೆಳ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. "ಈ ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ವೇಳೆ ಭೂ ಸ್ವಾಧೀನಕ್ಕೆ ₹319 ಕೋಟಿ ಕೊಟ್ಟಿದ್ದರು. ಈಗ ಸಿದ್ದರಾಮಯ್ಯ ಅವರು 43 ಕೋಟಿ ರೂ. ಘೋಷಣೆ ಮಾಡಿದ್ದಾರೆ. ಹೀಗಾಗಿ ಕೆಪಿಟಿಸಿಎಲ್ ಸೇರಿದಂತೆ ನಾನಾ ಇಲಾಖೆಗಳಿಗೆ ಸಂಬಂಧಿಸಿದ ಕೆಲಸ ಆರಂಭಿಸಲಾಗುವುದು" ಎಂದರು.

ಮೈಸೂರು-ಚಾಮರಾಜನಗರ ನಡುವಿನ ರೈಲ್ವೆ ಮಾರ್ಗ ವಿದ್ಯುದೀಕರಣಗೊಂಡಿದ್ದರೂ ಕಡಕೊಳ-ಅಶೋಕಪುರಂ ನಡುವೆ ವಿಮಾನ ನಿಲ್ದಾಣದ ಬಳಿ ಸುಮಾರು ಒಂದೂವರೆ ಕಿ.ಮೀ. ದೂರ ವಿದ್ಯುದೀಕರಣಕ್ಕೆ ಅವಕಾಶ ನೀಡಿಲ್ಲ. ಇದರಿಂದ ಇಡೀ ಯೋಜನೆ ಬಳಕೆ ಮಾಡಲು ಆಗುತ್ತಿಲ್ಲ. ಇದಕ್ಕೆ ಪರಿಹಾರ ಕಂಡು ಹಿಡಿಯಲು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡುವುದಾಗಿ ತಿಳಿಸಿದರು.
"ಮೈಸೂರು -ಕುಶಾಲನಗರ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ₹3097 ಕೋಟಿ ವೆಚ್ಚದಲ್ಲಿ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಿ ರೈಲ್ವೆ ಬೋರ್ಡ್‌ಗೆ ಸಲ್ಲಿಸಲಾಗಿದೆ. ಈಗ ರಾಜ್ಯ ಸರಕಾರ ಭೂ ಸ್ವಾಧೀನ ಮತ್ತು ನಿರ್ಮಾಣ ವೆಚ್ಚದ ಶೇ. 50ರಷ್ಟು ಅನುದಾನವನ್ನು ನೀಡಬೇಕು" ಎಂದು ಹೇಳಿದರು.
"ದಡದಹಳ್ಳಿ ಕೆಳ ಸೇತುವೆ ನಿರ್ಮಾಣಕ್ಕೂ ಮುನ್ನ ಸುತ್ತಮುತ್ತಲ ಗ್ರಾಮಸ್ಥರು ಲೆವೆಲ್ ಕ್ರಾಸಿಂಗ್ ಬಳಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಾಯಬೇಕಿತ್ತು. ಮೂರು ಮಂದಿ ಲೆವೆಲ್ ಕ್ರಾಸಿಂಗ್‌ನಲ್ಲಿ ಹಗಲಿರುಳು ಕೆಲಸ ಮಾಡಬೇಕಿತ್ತು. ಕೆಲವೊಮ್ಮೆ ಮ್ಯಾನುವಲ್ ದೋಷಗಳಿಂದಾಗಿ ಅಪಘಾತಗಳಾಗುವ ಸಾಧ್ಯತೆ ಇತ್ತು. ಇದೀಗ ಆ ಸಮಸ್ಯೆ ದೂರವಾಗಿದೆ" ಎಂದರು.
"ರೈಲು ಹಳಿಗಳು ಹಾದು ಹೋಗುವ ಗ್ರಾಮೀಣ, ನಗರ ಪ್ರದೇಶದಲ್ಲಿ ಲೆವೆಲ್ ಕ್ರಾಸಿಂಗ್‌ಗಳ ಸಂಖ್ಯೆ ಹೆಚ್ಚಾಗಿದ್ದರೆ ಸುಗಮ ಸಂಚಾರಕ್ಕೆ ಧಕ್ಕೆಯಾಗುತ್ತದೆ. ಇದರಿಂದ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ರೈಲು ಕೆಳಸೇತುವೆ ಮತ್ತು ಮೇಲುಸೇತುವೆಗಳನ್ನು ನಿರ್ಮಿಸುವ ಮೂಲಕ ಸುರಕ್ಷಿತ ಪಯಣಕ್ಕೆ ಅವಕಾಶ ಕಲ್ಪಿಸಲಾಗಿದೆ" ಎಂದರು.
"ಮೈಸೂರು ವಿವಿ ಕಾರ್ಯಸೌಧದ ಕುಕ್ಕರಹಳ್ಳಿ ಕೆರೆ ಮುಭಾಗ ಮತ್ತು ಕೆ.ಆರ್.ಎಸ್ ರಸ್ತೆಯಲ್ಲಿ ರೈಲ್ವೆ ಅಂಡರ್ ಪಾಸ್ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ. ಸದ್ಯದಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸುತ್ತೇವೆ" ಎಂದರು.












Click it and Unblock the Notifications