ಮಾರ್ಚ್ 17ರಂದು ರಾಜಕೀಯ ನಿವೃತ್ತಿ ಘೋಷಣೆ ಮಾಡಲು ಸಜ್ಜಾದ ಹಾಲಿ ಸಂಸದ
ಚಾಮರಾಜನಗರ ಹಾಲಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಲು ಸಜ್ಜಾಗಿದ್ದಾರೆ. ಈ ಮೊದಲೇ ಅವರು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಹೇಳಿದ್ದರೂ, ಈಗ ಮಾರ್ಚ್ 17ರಂದು ಅಧಿಕೃತವಾಗಿ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.
ಮೈಸೂರಿನ ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕೀಯಕ್ಕೆ ಬಂದು ಮಾ.17ಕ್ಕೆ 50 ವರ್ಷ ಪೂರೈಸುವ ಹಿನ್ನೆಲೆಯಲ್ಲಿ ಅಂದೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ತಿಳಿಸಿದ್ದಾರೆ.

ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ ಮತ್ತು ಅಭಿನಂದನಾ ಸಮಾರಂಭ ಮಾ.17ರಂದು ಬೆಳಗ್ಗೆ 11ಕ್ಕೆ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಸಿಎಂ ಎಂ.ವೀರಪ್ಪ ಮೊಯಿಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಾಹಿತಿ ಪ್ರಧಾನ ಗುರುದತ್ತ ಸಂಪಾದಕತ್ವದ "ಸ್ವಾಭಿಮಾನಿ ನೆನಪುಗಳು" ಅಭಿನಂದನಾ ಗ್ರಂಥವನ್ನು ಸಾಹಿತಿ ಚಂದ್ರಶೇಖರ ಕಂಬಾರ ಬಿಡುಗಡೆ ಮಾಡುವರು ಎಂದರು.
ಅಭಿಮಾನಿಗಳ ಸಮ್ಮುಖದಲ್ಲೇ ನಿವೃತ್ತಿ
1974ರ ಮಾ.17ರಂದು ಮೈಸೂರಿನ ಕೃಷ್ಣರಾಜ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದರೊಂದಿಗೆ ಚುನಾವಣಾ ರಾಜಕಾರಣ ಆರಂಭಿಸಿದೆ. ಈ ಸವಿನೆನಪಿಗಾಗಿ ಅಭಿಮಾನಿಗಳು 'ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ' ಸಮಾರಂಭ ಆಯೋಜಿಸಿದ್ದಾರೆ. ಅಂದು, ಚುನಾವಣೆ ನಿವೃತ್ತಿ ಘೋಷಣೆ ಮಾಡಲಿದ್ದೇನೆ ಎಂದು ಮಾಹಿತಿ ನೀಡಿದರು.
ನಿವೃತ್ತಿ ಘೋಷಣೆ ಬಳಿಕ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡುತ್ತೇನೆ ಹೊರತು, ಬಹಿರಂಗ ಚುನಾವಣಾ ಪ್ರಚಾರಕ್ಕೆ ಹೋಗುವುದಿಲ್ಲ. ನಾನು ಯಾವುದೇ ರಾಜಕೀಯ ತೀರ್ಮಾನ ಕೈಗೊಂಡಾಗ ಆ ಪಕ್ಷದ ಆಸ್ತಿಯಾಗಿದ್ದೇನೆ ಹೊರತು ಹೊರೆಯಾಗಿಲ್ಲ, ಈ ಬಗ್ಗೆ ತೃಪ್ತಿ ಇದೆ ಎಂದರು.
ದೇಶದಲ್ಲಿ ಬಿಜೆಪಿ ಪರ ವಾತಾವರಣವಿದ್ದು, ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬರಲಿದೆ. ತುರ್ತು ಪರಿಸ್ಥಿತಿ ಬಳಿಕ ಕಾಂಗ್ರೆಸ್‌ಗೆ ಪರ್ಯಾಯವಾಗಿ ಜನತಾ ಪಕ್ಷ ಉದಯವಾದರೂ ಅದು ಬೆಳೆಯಲಿಲ್ಲ. ಆದರೀಗ ಬಿಜೆಪಿ ದೊಡ್ಡ ಪಕ್ಷವಾಗಿ ಬೆಳೆದಿದೆ. ನಾನು 25 ವರ್ಷ ಕಾಂಗ್ರೆಸ್ ಪಕ್ಷದಲ್ಲಿ ಇದ್ದವನು, ಕಾಂಗ್ರೆಸ್ ಇಷ್ಟು ದುಸ್ಥಿತಿಗೆ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದರು.
"ರಾಜ್ಯ ಸರಕಾರದಿಂದ ನಡೆಯುತ್ತಿರುವುದು ಅಂಬೇಡ್ಕರ್ ಸಂವಿಧಾನ ಜಾಗೃತಿ ಜಾಥಾ ಅಲ್ಲ. ಅದು, ಕಾಂಗ್ರೆಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಸಂವಿಧಾನ ಜಾಥಾ ಆಗಿದೆ. ಅಂಬೇಡ್ಕರ್ ಸಂವಿಧಾನ ಚೆನ್ನಾಗಿಯೇ ಇದೆ. ಅದರ ಮೂಲಕ ಕಾಂಗ್ರೆಸ್ ನಾಯಕರು ಗ್ಯಾರಂಟಿಗಳನ್ನು ಪ್ರಚಾರ ಮಾಡುತ್ತಿದ್ದಾರೆ" ಎಂದರು.
ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲು ನನ್ನ ಅಳಿಯಂದಿರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ನನ್ನಂತಹ ಅನುಭವ ಇರುವವರು ಇಂಥವರಿಗೆ ಟಿಕೆಟ್ ಕೊಡಿ ಎಂದು ಕೇಳುವುದು ಸರಿಯಲ್ಲ ಎಂದರು.












Click it and Unblock the Notifications