ಈ ವೇಳೆ ಮಂತ್ರಿಮಂಡಲ ಇರಬೇಕಿತ್ತು : ಸಂಸದ ಶ್ರೀನಿವಾಸ್ ಪ್ರಸಾದ್
ಮೈಸೂರು, ಆಗಸ್ಟ್ 14 : "ಅನಿರೀಕ್ಷಿತ ಬೆಳವಣಿಗೆಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. ಇಂಥ ವೇಳೆಯಲ್ಲಿ ಮಂತ್ರಿಮಂಡಲ ಇದ್ದಿದ್ದರೆ ಹೆಚ್ಚು ಕೆಲಸಗಳು ನಡೆಯುತ್ತಿದ್ದವು" ಎಂದು ಸಂಸದ ಶ್ರೀನಿವಾಸ ಪ್ರಸಾದ್ ತಿಳಿಸಿದ್ದಾರೆ.
ಅಚ್ಚರಿ ಮೂಡಿಸಿದ ಎಚ್ ವಿಶ್ವನಾಥ್-ಶ್ರೀನಿವಾಸ್ ಪ್ರಸಾದ್ ಭೇಟಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಮಂತ್ರಿ ಮಂಡಲ ಇರಬೇಕಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಬ್ಬರೇ ಎಲ್ಲ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದೆನಿಸುತ್ತಿದೆ. ನಾನು ಕಂದಾಯ ಸಚಿವನಾಗಿ ಕೆಲಸ ಮಾಡಿದ್ದೇನೆ. ಆದ್ದರಿಂದ ಅದರ ಕಷ್ಟ ಗೊತ್ತು. ನಾವು ಕೂಡ ನಮ್ಮ ಕ್ಷೇತ್ರದಲ್ಲಿ ಉಂಟಾದ ಪ್ರವಾಹ ಸಂತ್ರಸ್ತರಿಗೆ ಸ್ಪಂದಿಸುತ್ತಿದ್ದೇವೆ" ಎಂದರು.

ಪ್ರವಾಹಕ್ಕೆ ತುತ್ತಾಗಿರುವ ನಿರಾಶ್ರಿತರು ಎದೆಗುಂದುವ ಅಗತ್ಯವಿಲ್ಲ. ನಿಮಗೆ ಎಲ್ಲ ರೀತಿಯ ನೆರವು ನೀಡಲು ಸರ್ಕಾರ ಬದ್ಧವಾಗಿದ್ದು, ಸಂಸದರ ನಿಧಿಯಿಂದ 1 ಕೋಟಿ ಅನುದಾನವನ್ನು ಪರಿಹಾರಕ್ಕೆ ನೀಡುವುದಾಗಿ ಭರವಸೆ ನೀಡಿದರು.
ಶಾಸಕ ಜಿ ಟಿ ದೇವೇಗೌಡ ಬಿಜೆಪಿ ಸೇರುವ ಬಗ್ಗೆ ಮಾತುಕತೆ ನಡೆದಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಈಗ ಆ ಪ್ರಶ್ನೆ ಬೇಡ. ನಮ್ಮ ಮುಂದಿರುವುದು ಪ್ರವಾಹದಿಂದ ಕಷ್ಟದಲ್ಲಿ ಸಿಲುಕಿರುವ ಜನರಿಗೆ ಸ್ಪಂದಿಸುವ ಕೆಲಸ ಅಷ್ಟೇ" ಎಂದರು.












Click it and Unblock the Notifications