'JDSನಲ್ಲಿ ಸೂಟ್ ಕೇಸ್‌ನವರಿಗೆ ಮನ್ನಣೆ' ಸಿಡಿದೆದ್ದ ಪ್ರಜ್ವಲ್ ರೇವಣ್ಣ
ಹುಣಸೂರು, ಜುಲೈ 7: ಜೆಡಿಎಸ್ ಪಕ್ಷದ 'ಹೈಕಮಾಂಡ್' ವಿರುದ್ಧ ಯುವ ನಾಯಕರೊಬ್ಬರು ತಿರುಗಿ ಬಿದ್ದಿದ್ದಾರೆ. ಅವರು ಮತ್ಯಾರೂ ಅಲ್ಲ. ಸ್ವತಃ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ. ಈ ಮೂಲಕ ಸ್ವತಃ ದೇವೇಗೌಡರು ಮತ್ತು ಎಚ್.ಡಿ ಕುಮಾರಸ್ವಾಮಿ ವಿರುದ್ಧ ಪ್ರಜ್ವಲ್ ಭಿನ್ನರಾಗ ಹಾಡಿದ್ದಾರೆ.
ಅಷ್ಟಕ್ಕೂ ಇಂಥಹದ್ದೊಂದು ಭಿನ್ನರಾಗಕ್ಕೆ ಕಾರಣವಾಗಿದ್ದು ಜೆಡಿಎಸ್ ಗೆ ಹಾರಿ ಬಂದ 'ಹಳ್ಳಿ ಹಕ್ಕಿ' ಎಚ್ ವಿಶ್ವನಾಥ್ ಮತ್ತು ಹುಣಸೂರು ಕ್ಷೇತ್ರ.
ಇಂದು ಹುಣಸೂರಿನಲ್ಲಿ ಒಂದು ರೀತಿಯಲ್ಲಿ ನೋವಿನ ಭಾಷಣ ಮಾಡಿದ ಜೆಡಿಎಸ್ ಪಕ್ಷದ ಭವಿಷ್ಯದ ತಲೆಮಾರು ಪ್ರಜ್ವಲ್ ರೇವಣ್ಣ ಹಲವು ಕಹಿ ಮಾತುಗಳನ್ನು ಬಹಿರಂಗವಾಗಿ ಹೇಳಿಯೇ ಬಿಟ್ಟರು.

ದೂರದ ಬೆಟ್ಟ ನುಣ್ಣಗೆ ಕಾಣಿಸುತ್ತಿರುತ್ತದೆ. ಹತ್ತಿರ ಹೋದಾಗಲೇ ಅದರಲ್ಲಿ ಎಷ್ಟು ಮುಳ್ಳುಗಳಿವೆ ಎಂಬುದು ಗೊತ್ತಾಗುತ್ತದೆ ಎಂದು ಮಾತು ಆರಂಭಿಸಿದ ಪ್ರಜ್ವಲ್ ರೇವಣ್ಣ, "ಆ ಮುಳ್ಳುಗಳು ಬೇರೆ ಯಾರೂ ಅಲ್ಲ. ಎರಡು ಕಾಲುಗಳನ್ನು ಎರಡು ದೋಣಿ ಮೇಲೆ ಇಟ್ಟು ಎರಡೂ ಪಕ್ಷದಲ್ಲೂ ಚೆನ್ನಾಗಿ ಆಟ ಆಡ್ತಿರ್ತಾರಲ್ಲ, ಅವರನ್ನೇ ಮುಳ್ಳುಗಳು ಅಂತ ಹೇಳುವುದು," ಎಂದು ಪರೋಕ್ಷವಾಗಿ ಅಡಗೂರು ವಿಶ್ವನಾಥ್ ವಿರುದ್ಧ ತಮ್ಮ ಅಸಮಧಾನ ಹೊರಹಾಕಿದರು.
ಮುಂದುವರಿದು ಮಾತನಾಡಿದ ಅವರು ನೇರವಾಗಿ ಪಕ್ಷದ ಬುಡಕ್ಕೇ ಕೈ ಹಾಕಿದರು. "ಯಾಕೆ ಈ ಮಾತುಗಳನ್ನು ಹೇಳುತ್ತಿದ್ದೇವೆ ಅಂತ ಹೇಳಿದರೆ ಇವತ್ತು ನಮ್ಮ ಪಕ್ಷದಲ್ಲಿ ಒಂದು ರೋಗವಿದೆ. ನಿಷ್ಠೆಯಿಂದ ದುಡಿದವರಿಗೆ ಹಿಂದುಗಡೆ ಕುರ್ಚಿ ಹಾಕ್ತೇವೆ. ಸೂಟ್ ಕೇಸ್ ಹಿಡಿದು ಬಂದವರಿಗೆ ಮುಂದುಗಡೆ ಕುರ್ಚಿ ಹಾಕ್ತೀವಿ. ಇದೇ ವಿಪರ್ಯಾಸ ನೋಡಿ," ಎಂದು ಹೇಳಿದರು.
ಇದರೊಂದಿಗೆ ತಮ್ಮ ಅಜ್ಜ ದೇವೇಗೌಡ ಹಾಗೂ ಪಕ್ಷದ ಚುಕ್ಕಾಣಿ ನಿಭಾಯಿಸುತ್ತಿರುವ ಚಿಕ್ಕಪ್ಪ ಎಚ್.ಡಿ ಕುಮಾರಸ್ವಾಮಿ ವಿರುದ್ಧವೇ ತಮ್ಮ ಬೇಸರ ತೋಡಿಕೊಂಡರು.

ಟಿಕೆಟ್ ತಪ್ಪಿಸಿದ್ರಾ ವಿಶ್ವನಾಥ್?
2018ರ ವಿಧಾನಸಭೆ ಚುನಾವಣೆಯಲ್ಲಿ ಹುಣಸೂರಿನಿಂದ ಸ್ಪರ್ಧಿಸುವುದು ಪ್ರಜ್ವಲ್ ರೇವಣ್ಣ ಮಹದಾಸೆಯಾಗಿತ್ತು. ಅದಕ್ಕಾಗಿ ಕ್ಷೇತ್ರ ತುಂಬಾ ಪಾದರಸದಂತೆ ಓಡಾಡುತ್ತಾ ಅಖಾಡಕ್ಕೆ ಸಿದ್ದವಾಗುತ್ತಿದ್ದರು. ಆದರೆ, ಸರಿ ಹೊತ್ತಲ್ಲಿ ಪಕ್ಷಕ್ಕೆ ಚಂಗನೆ ನೆಗೆದು ಬಂದ ಎಚ್. ವಿಶ್ವನಾಥ್ ಕೂಡಾ ಇದೇ ಹುಣಸೂರಿನ ಮೇಲೆ ಕಣ್ಣಿಟ್ಟಿದ್ದಾರೆ.
ಸಾಮಾನ್ಯವಾಗಿ ಪಕ್ಷಕ್ಕೆ ಒಳಬರುವಾಗಲೇ ಕ್ಷೇತ್ರಗಳು ನಿರ್ಧಾರವಾಗಿ ಒಂದು ಹಂತದ ಲೆಕ್ಕಾಚಾರಗಳು ಮುಗಿದಿರುತ್ತವೆ. ಹೀಗಾಗಿ ಹುಣಸೂರಿನಿಂದ ವಿಶ್ವನಾಥ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಇದರಿಂದ ಟಿಕೆಟ್ ಕೈ ತಪ್ಪುವ ಬೇಸರದಲ್ಲಿ ಮನಸ್ಸಿನಲ್ಲಿ ಇದ್ದಿದ್ದನ್ನೆಲ್ಲಾ ಶಿಳ್ಳೆ ಕೇಕೆ ಹಾಕುತ್ತಿದ್ದ ಜನರ ಮುಂದೆ ಮೈಮರೆತು ತೋಡಿಕೊಂಡಿದ್ದಾರೆ ಪ್ರಜ್ವಲ್ ರೇವಣ್ಣ.
ಸಾವರಿಸಿಕೊಂಡ ಯುವ ನಾಯಕ
ನರ ಮುಂದೆ ಮೈಮರೆತು ಮಾತನಾಡಿದ ಇನ್ನೂ ಮಾಗದ ಯುವ ನಾಯಕ ಪ್ರಜ್ವಲ್ ರೇವಣ್ಣ ಮುಂದೆ ಮಾಧ್ಯಮಗಳಲ್ಲಿ ಈ ವಿಚಾರ ಚರ್ಚೆಗೆ ಬರುತ್ತಿದ್ದಂತೆ ಸಾವರಿಸಿಕೊಂಡು 'ನಾನು ಹಾಗೆ ಹೇಳಿಯೇ ಇಲ್ಲ,' ಎಂದಿದ್ದಾರೆ.
ವಿಡಿಯೋ ದಾಖಲೆಗಳು ಎದುರಿಗಿಟ್ಟುಕೊಂಡಿದ್ದಾಗಲೂ "ನಾನು ಹೇಳಿದ್ದು ಬೇರೆ ಅರ್ಥದಲ್ಲಿ, ಹುಣಸೂರಿನ ಟಿಕೆಟ್ ಆಕಾಂಕ್ಷಿ ಹೌದು. ಅದನ್ನು ಪಕ್ಷದ ವರಿಷ್ಠ ದೇವೇಗೌಡರು ನಿರ್ಧರಿಸುತ್ತಾರೆ," ಎಂದೆಲ್ಲಾ ಶಿಸ್ತಿನ ಸಿಪಾಯಿಯ ಪೋಸು ಕೊಟ್ಟು ಮರೆಯಾಗಿದ್ದಾರೆ.
ಹೀಗೆ ಪಕ್ಷದಲ್ಲಿ ಅಸಮಧಾನ ಇರುವುದನ್ನು, ವಿಶ್ವನಾಥ್ ಆಗಮನ ಒಡಕಿಗೆ ಕಾರಣವಾಗಿರುವುದನ್ನು 'ಅಪ್ರಬುದ್ಧತೆ'ಯಿಂದ ಹೊರ ಹಾಕಿದ್ದಾರೆ ಪ್ರಜ್ವಲ್ ರೇವಣ್ಣ.












Click it and Unblock the Notifications