ಮಾಲ್ ಆಫ್ ಮೈಸೂರಿನಿಂದ ಪಾಲಿಕೆಗೆ 5 ಕೋಟಿಗೂ ಹೆಚ್ಚು ತೆರಿಗೆ ವಂಚನೆ
ಮೈಸೂರು ನಗರ ಪಾಲಿಕೆ ಅಧಿಕಾರಿಗಳು ಮಾಲ್ ಆಫ್ ಮೈಸೂರ್ ದಾಖಲೆಗಳನ್ನು ಪರಿಶೀಲಿಸಿ, ಐದು ಕೋಟಿಗೂ ಹೆಚ್ಚು ಮೊತ್ತದ ತೆರಿಗೆ ವಂಚನೆ ಆಗಿದೆ ಎಂದು ಕಂಡುಹಿಡಿದಿದ್ದಾರೆ. ಆ ಮೊತ್ತವನ್ನು ದಿನದೊಳಗಾಗಿ ಪಾವತಿಸುವಂತೆ ತಿಳಿಸಿದ್ದಾರೆ
ಮೈಸೂರು, ಮಾರ್ಚ್ 3: ಮೈಸೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ರೇಸ್ ಕೋರ್ಸ್ ಎದುರಿನ ಮಾಲ್ ಆಫ್ ಮೈಸೂರಿನ ಮೇಲೆ ಮಹಾನಗರ ಪಾಲಿಕೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ನೋಟಿಸ್ ನೀಡಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿ, ಪಾಲಿಕೆ ನಿಯಮವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮಾಲ್ ಆಫ್ ಮೈಸೂರ್ ಗೆ ಶುಕ್ರವಾರ ಸಂಜೆ ವೇಳೆಗೆ ಬೀಗ ಹಾಕುವ ಸಾಧ್ಯತೆಗಳಿವೆ.
ಪಟ್ಟಣ ಮತ್ತು ನಗರಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ನಂದೀಶ್ ಪ್ರೀತಂ ನೇತೃತ್ವದಲ್ಲಿ ಮಾಲ್ ಆಫ್ ಮೈಸೂರಿನ ಮೇಲೆ ದಾಳಿ ನಡೆಸಿದ್ದು, ಅದರ ಮಾಲೀಕರು ಪಾವತಿಸಬೇಕಾದ ತೆರಿಗೆಯನ್ನು ಸರಿಯಾಗಿ ಸಂದಾಯ ಮಾಡಿಲ್ಲ ಎಂಬುದು ತಿಳಿದುಬಂದಿದೆ.

ಅಷ್ಟೇ ಅಲ್ಲ, ಮಲ್ಟಿಪ್ಲೆಕ್ಸ್ ನಿರ್ಮಿಸಿ, ಒಂದು ಪ್ರದರ್ಶನ ನೀಡುತ್ತೇವೆ ಎಂದಿದ್ದು, ಪ್ರತಿ ದಿನ ನಾಲ್ಕು ಪ್ರದರ್ಶನ ನಡೆಯುತ್ತಿದೆ. ಆದರೆ ಪಾಲಿಕೆಗೆ ಒಂದು ಪ್ರದರ್ಶನದ ತೆರಿಗೆಯನ್ನು ಮಾತ್ರ ನೀಡಲಾಗುತ್ತಿದೆ. ಆ ಮೂಲಕ ಪಾಲಿಕೆ ನಿಯಮವನ್ನು ಉಲ್ಲಂಘಿಸಿದ್ದಾರೆ.[ಮಂಗಳೂರು ಮಹಾನಗರ ಪಾಲಿಕೆಯಿಂದ ಆಸ್ತಿ ತೆರಿಗೆ ಹೆಚ್ಚಳ]
ಐದು ಕೋಟಿ ರುಪಾಯಿಗೂ ಹೆಚ್ಚಿನ ತೆರಿಗೆ ವಂಚನೆ ಆಗಿದ್ದು, ಮಲ್ಟಿ ಪಾರ್ಕಿಂಗ್ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿ, ಅಂಥ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ. ಈ ಹಿಂದೆ ಪಾಲಿಕೆ ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಅದಕ್ಕೆ ಸ್ಪಂದಿಸಿಲ್ಲ.
350 ವಾಹನಗಳ ನಿಲುಗಡೆಗೆ ಅವಕಾಶ ನೀಡುತ್ತೇವೆಂದು ಅನುಮತಿ ಪಡೆದಿದ್ದು, ಕೇವಲ 150 ವಾಹನಗಳಿಗೆ ಮಾತ್ರ ನಿಲುಗಡೆಗೆ ಅವಕಾಶ ನೀಡುತ್ತಿದ್ದಾರೆ. ಈ ಬಗ್ಗೆ ತರಾಟೆಗೆ ತೆಗೆದುಕೊಂಡ ನಂದೀಶ್ ಪ್ರೀತಂ, ನೀವು ಪಾಲಿಕೆ ನಿಯಮವನ್ನು ಗಾಳಿಗೆ ತೂರಿದ್ದೀರಿ. ತೆರಿಗೆ ಕಟ್ಟದೆ ವಂಚಿಸಿದ್ದೀರಿ ಎಂದಿದ್ದಾರೆ. ಮಾಲ್ ಮಾಲೀಕರ ಮೇಲೆ ಕಾನೂನುಬದ್ಧವಾಗಿ ಏನೆಲ್ಲ ಕ್ರಮ ಕೈಗೊಳ್ಳಲು ಸಾಧ್ಯವೋ ಎಲ್ಲವನ್ನೂ ಕೈಗೊಳ್ಳಿ ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ಕೂಡ ನೀಡಿದ್ದಾರೆ.[ಪರಿಸರಸ್ನೇಹಿ ಕಟ್ಟಡಕ್ಕೆ ಬೆಳಗಾವಿ ಪಾಲಿಕೆಯಿಂದ ಶೇ 10 ಆಸ್ತಿ ತೆರಿಗೆ ರಿಯಾಯ್ತಿ]
2010ನೇ ಇಸವಿಯಿಂದಲೂ ಮಾಲ್ ನವರು ಪಾಲಿಕೆಗೆ ವಂಚಿಸುತ್ತಲೇ ಬಂದಿದ್ದಾರೆ. ಬಾಕಿ ಇರಿಸಿಕೊಂಡ ಎಲ್ಲ ತೆರಿಗೆಗಳನ್ನೂ ಈ ದಿನ ಪಾವತಿಸಬೇಕು. ಇಲ್ಲದಿದ್ದಲ್ಲಿ ಸಂಜೆ ವೇಳೆಗೆ ಬೀಗ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ.












Click it and Unblock the Notifications