ವಿಷ ಪ್ರಸಾದ ಪ್ರಕರಣ : ಮೈಸೂರಲ್ಲಿ 40 ಜನರಿಗೆ ಚಿಕಿತ್ಸೆ
ರಿಮೈಸೂರು, ಡಿಸೆಂಬರ್ 15 : ಮಾರ್ತಳ್ಳಿಯ ಕಿತ್ತಗುಚ್ಚಿ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಮರಣ ಹೊಂದಿದವರ ಸಂಖ್ಯೆ ಏರುತ್ತಲೇ ಇದೆ. ಮೈಸೂರಿನ ಕೆಆರ್ ಆಸ್ಪತ್ರೆಗೆ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದ ಬಳಿಕ ಸಚಿವ ಸಿಎಸ್ ಪುಟ್ಟರಾಜು ಭೇಟಿ ನೀಡಿ ಅಸ್ವಸ್ಥಗೊಂಡವರ ಬಗ್ಗೆ ವೈದ್ಯರ ಬಳಿ ಮಾಹಿತಿ ಕಲೆಹಾಕಿದರು.
ಇದೇ ವೇಳೆ ಸಾವಿಗೀಡಾದ ಕುಟುಂಬದವರಿಗೆ ಸರ್ಕಾರದ ವತಿಯಿಂದ 5 ಲಕ್ಷ ಪರಿಹಾರವನ್ನ ಘೋಷಿಸಿದರು. ಇದುವರೆಗೂ ಈ ಆಸ್ಪತ್ರೆಯಲ್ಲಿ 38 ಜನ ದಾಖಲಾಗಿದ್ದಾರೆ. ಸರ್ಕಾರದ ಪರವಾಗಿ ನಾನು ಆಸ್ಪತ್ರೆಗೆ ಬಂದಿದ್ದೇನೆ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು ಸಹ ಮೈಸೂರಿಗೆ ಬರಲಿದ್ದಾರೆ. ಘಟನೆ ಬಗ್ಗೆ ತೀವ್ರ ತನಿಖೆಗೆ ಆದೇಶ ಮಾಡಲಾಗಿದೆ. ಜಿಲ್ಲಾಡಳಿತ ಕ್ರಮಕ್ಕೆ ಸಹ ಮುಂದಾಗಿದೆ ಎಂದರು.
ಈಗಾಗಲೇ ಕೆ.ಆರ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ 38 ಮಂದಿಯನ್ನ ದಾಖಲು ಮಾಡಲಾಗಿದೆ. ಚಾಮರಾಜನಗರದಲ್ಲಿ 6 ಮಂದಿ ಸಾವನ್ನಪ್ಪಿದ್ದರು. ಕೆ.ಆರ್ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಜೆಎಸ್ಎಸ್ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದರು.

ಕೆ. ಆರಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲವೆಂಬ ಗುಮಾನಿ :
ಇತ್ತ ಆಸ್ಪತ್ರೆಯಲ್ಲಿ ರೋಗಿಗಳು ದಾಖಲಾಗುತ್ತಿದ್ದಂತೆ ಕೆ. ಆರ್.ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಮಸ್ಯೆ ಇಲ್ಲ ಎಂಬ ಗುಮಾನಿ ಹರಿದಾಡತೊಡಗಿತು. ಇದಕ್ಕೆ ವೈದ್ಯ ಡಾ.ಬಸವರಾಜ್ ಸ್ಪಷ್ಟನೆ ನೀಡಿ, ಅಸ್ವಸ್ಥರಾಗಿ ಬಂದ ಭಕ್ತರಿಗೆ ಚಿಕಿತ್ಸೆ ನೀಡಲು ವೆಂಟಿಲೇಟರ್ ಇಲ್ಲ ಅನ್ನೋ ಆರೋಪ ಕೇಳಿ ಬಂದಿತ್ತು. ಇದಕ್ಕೆ ಅಸ್ವಸ್ಥಗೊಂಡವರಲ್ಲಿ 46ಕ್ಕೂ ಹೆಚ್ಚು ಮಂದಿಯನ್ನ ಮೈಸೂರಿಗೆ ಕರೆ ತರಲಾಗಿದೆ. ಯಾವುದೇ ವೆಂಟಿಲೇಟರ್ ಸಮಸ್ಯೆಯಾಗಿಲ್ಲ.
ಕೆಆರ್ ಆಸ್ಪತ್ರೆಯಲ್ಲಿನ 13 ವೆಂಟಿಲೇಟರ್ ಭರ್ತಿಯಾಗಿದೆ, ಮುಂಜಾಗೃತ ಕ್ರಮವಾಗಿ ಅಪೋಲೋ, ಕೊಲಂಬಿಯಾ ಏಷ್ಯಾ, ಜೆಎಸ್ಎಸ್, ನಾರಾಯಣ ಹೃದಯಾಲಯಕ್ಕೆ ಸೇರಿಸಲಾಗಿದೆ. ಅಪೋಲೋದಲ್ಲಿ 10, ಜೆಎಸ್ಎಸ್ನಲ್ಲಿ 7 ವೆಂಟಿಲೇಟರ್ರ್ಗಳನ್ನ ಕಾಯ್ದಿರಿಸಲಾಗಿದೆ. ಯಾವುದೇ ರೀತಿಯ ಔಷಧಿಗಳಿಗೆ ಕೊರತೆಯಿಲ್ಲ ಎಂದು ತಿಳಿಸಿದರು.

ಸ್ಟ್ರೇಚರ್ ಇಲ್ಲದೇ ಪರದಾಟ :
ಇತ್ತ ಆಸ್ಪತ್ರೆಗೆ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ಕರೆ ತಂದ ಸಂಬಂಧಿಗಳಿಗೆ ಸ್ಟ್ರೇಚರ್ ಇಲ್ಲದ ಕಾರಣಕ್ಕೆ ಹೆಗಲು ಕೊಟ್ಟು ಆಸ್ಪತ್ರೆಗೆ ಸಾಗಿಸುತ್ತಿದ್ದಾರೆ. ಆ್ಯಂಬುಲೆನ್ಸ್ಗಳಲ್ಲಿ ಸರಿಯಾದ ವೆಂಟಿಲೇಟರ್ ವ್ಯವಸ್ಥೆ ಇಲ್ಲದಕ್ಕೆ ಆ್ಯಂಬುಲೆನ್ಸ್ ಸಿಬ್ಬಂದಿ ಬಲೂನ್ ಊದಿ ಅಸ್ವಸ್ಥಗೊಂಡಿದ್ದವರಿಗೆ ಕೃತಕ ಉಸಿರಾಟ ನೀಡಿದ್ದರು. ಆದರೆ, ಅಸ್ವಸ್ಥಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ತಂದರು ಸ್ಟ್ರೆಚರ್ ಇಲ್ಲದೇ ರೋಗಿಯ ಕುಟುಂಬಸ್ಥರೇ ಅಸ್ವಸ್ಥರನ್ನು ಹೆಗಲುಕೊಟ್ಟು ಕೆ. ಆರ್ ಆಸ್ಪತ್ರೆಯ ವಾರ್ಡ್ ಒಳಗೆ ಸೇರಿಸಿದರು.

ಮೈಸೂರು ಡಿ ಸಿ. ಅಭಿರಾಂ ಸ್ಪಷ್ಟನೆ :
ಇನ್ನು ಆಸ್ಪತ್ರೆಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಅವರು, ಕೆ.ಆರ್. ಆಸ್ಪತ್ರೆಯಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ, ಜೆಎಸ್ ಎಸ್ ಆಸ್ಪತ್ರೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಮೈಸೂರಿನಲ್ಲಿ 40 ಕ್ಕೂ ಹೆಚ್ಚು ಮಂದಿ ಅಸ್ಪಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಮೃತಪಟ್ಟವರ ಕುಟುಂಬಕ್ಕೆ ಸಿಎಂ ಸಾಂತ್ವನ :
ಕೆ. ಆರ್ ಆಸ್ಪತ್ರೆಗೆ ಸಿಎಂ ಕುಮಾರಸ್ವಾಮಿ ಭೇಟಿಯಿತ್ತಾಗ ಈ ವೇಳೆ ಸಿಎಂ ಕುಮಾರಸ್ವಾಮಿ ಮಾನವೀಯತೆ ಮೆರೆದಿದ್ದಾರೆ. ಸುಲ್ವಾಡಿ ಮಾರ್ತಳ್ಳಿಯ ಕೃಷ್ಣ ನಾಯಕ್ ಎಂಬುವವರು ಪ್ರಾಸ ಸೇವಿಸಿ ಮೃತಪಟ್ಟಿದ್ದರು. ಅಲ್ಲದೇ ಇವರ ಪುತ್ರಿ ಹಾಗೂ ಪತ್ನಿ ಕೂಡ ತೀವ್ರ ಅಸ್ವಸ್ಥಗೊಂಡಿದ್ದಾರೆ. ಈ ವೇಳೆ ಮೃತ ಕೃಷ್ಣ ನಾಯಕ್ ಅವರ ಹಿರಿಯ ಪುತ್ರಿ ರಾಣಿಭಾಯಿ ಸಿಎಂ ಕುಮಾರಸ್ವಾಮಿ ಎದುರು ಕಣ್ಣೀರು ಇಟ್ಟರು. ಆಗ ರಾಣಿಭಾಯಿ, ಪ್ರಸಾದ ಸೇವಿಸಿ ಅಪ್ಪ ಸಾವನ್ನಪ್ಪಿದ್ದಾರೆ.

ತಂಗಿ ಹಾಗೂ ಅಮ್ಮನ ಸ್ಥಿತಿ ಚಿಂತಾಜನಕವಾಗಿದೆ ಎಂದು ಕಣ್ಣೀರಿಟ್ಟರು. ಇದೇ ವೇಳೆ ಸ್ಫಂದಿಸಿದ ಸಿಎಂ ಕುಮಾರಸ್ವಾಮಿ, ರಾಣಿಭಾಯಿ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುವ ಭರವಸೆಯನ್ನ ನೀಡಿದರು. ಅಲ್ಲದೇ ಅವರಿಗೆ ಪದವಿ ಮುಗಿದ ಮೇಲೆ ಕೆಲಸ ಕೊಡಿಸುವ ಭರವಸೆಯನ್ನೂ ಸಿಎಂ ಕುಮಾರಸ್ವಾಮಿ ನೀಡಿದ್ದಾರೆ. ಇದೇ ವೇಳೆ ಸಚಿವ ಸಿ.ಎಸ್.ಪುಟ್ಟರಾಜುರವರೂ ಕೂಡ ರಾಣಿಭಾಯಿಗೆ ವೈಯಕ್ತಿಕವಾಗಿ 50 ಸಾವಿರ ನೆರವು ನೀಡುವುದಾಗಿ ವಾಗ್ದಾನ ನೀಡಿದ್ದಾರೆ.












Click it and Unblock the Notifications