ಸಿದ್ದರಾಮಯ್ಯರಿಗೆ ಪ್ರತಿಷ್ಠೆಯಾದ ಮೈಸೂರು-ಚಾಮರಾಜನಗರ ಕ್ಷೇತ್ರ!
ಮೈಸೂರು, ಡಿಸೆಂಬರ್ 06; ವಿಧಾನ ಪರಿಷತ್ ಚುನಾವಣೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯಾಗಿದ್ದರೂ ಮೇಲ್ನೋಟಕ್ಕೆ ಕೆಲವು ನಾಯಕರು ತಮ್ಮ ಕ್ಷೇತ್ರವನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದು, ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಯೇ ತೀರಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಈ ಪೈಕಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಒಬ್ಬರಾಗಿದ್ದಾರೆ.
ಮೈಸೂರು-ಚಾಮರಾಜನಗರ ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಸಿದ್ದರಾಮಯ್ಯ ಕಾಲಿಗೆ ಚಕ್ರಕಟ್ಟಿಕೊಂಡು ಸುತ್ತಾಡುತ್ತಿದ್ದಾರೆ. ಆದರೂ ಈ ಕ್ಷೇತ್ರದಲ್ಲಿ ಆಗಿರುವ ಒಂದಷ್ಟು ರಾಜಕೀಯ ಬೆಳವಣಿಗೆಗಳು ಮತ್ತು ಪೈಪೋಟಿಗಳು ವಿಪಕ್ಷ ನಾಯಕ ಸಿದ್ದರಾಮಯ್ಯ ನಿದ್ದೆಗೆಡಿಸಿದೆ. ತವರು ಕ್ಷೇತ್ರವಾಗಿರುವುದರಿಂದ ಇಲ್ಲಿ ಕಾಂಗ್ರೆಸ್ ಗೆದ್ದರೆ ಮುಂದಿನ 2023ರ ವಿಧಾನಸಭಾ ಚುನಾವಣೆಗೆ ಧೈರ್ಯವಾಗಿ ಹೋಗಬಹುದು. ಅದಕ್ಕಿಂತ ಹೆಚ್ಚಾಗಿ ಪಕ್ಷದಲ್ಲಿ ಮತ್ತು ರಾಜಕೀಯವಾಗಿ ವರ್ಚಸ್ಸು ಇಮ್ಮಡಿಯಾಗಲಿದೆ.
ಆದರೆ ಸಿದ್ದರಾಮಯ್ಯಗೆ ಹಿಂದಿನ ವಿಧಾನಪರಿಷತ್ ಚುನಾವಣೆಯಂತೆ ಈ ಬಾರಿ ಸುಲಭವಾಗಿಲ್ಲ. ಪೈಪೋಟಿ ಜಾಸ್ತಿ ಇದೆ. ಕಣಕ್ಕೆ ತನ್ನ ಆಪ್ತನನ್ನೇ ಇಳಿಸಿದ್ದರೂ, ಇಲ್ಲಿ ತನಕ ತನ್ನ ಆಪ್ತನಾಗಿದ್ದ ಸಿ. ಎನ್. ಮಂಜೇಗೌಡ ಈಗ ಜೆಡಿಎಸ್ ನಿಂದ ಕಣಕ್ಕಿಳಿದ್ದಾರೆ. ಇದು ಒಂದು ರೀತಿಯಲ್ಲಿ ಸಿದ್ದರಾಮಯ್ಯಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಸಿದ್ದರಾಮಯ್ಯರನ್ನು ಬಗ್ಗುಬಡಿಯಲೆಂದೇ ಜೆಡಿಎಸ್ ಮಾಡಿದ ಮಹಾನ್ ತಂತ್ರ ಇದಾಗಿದೆ. ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆಯದೇ ಬಿಜೆಪಿಯಿಂದ ಟಿಕೆಟ್ ಪಡೆಯುವ ಬಯಕೆಯಲ್ಲಿದ್ದ ಜೆಡಿಎಸ್‍ನ ಸಂದೇಶ್ ನಾಗರಾಜ್ ಅವರಿಗೂ ತಕ್ಕ ಪಾಠವಾಗಿದೆ. ಇಲ್ಲಿ ಜೆಡಿಎಸ್ ಒಂದೇ ಕಲ್ಲಿಗೆ ಎರಡು ಹಕ್ಕಿಯನ್ನು ಹೊಡೆದುರುಳಿಸುವ ತಂತ್ರ ಮಾಡಿದ್ದಂತು ನಿಜ.

ಜೆಡಿಎಸ್ ತಂತ್ರಕ್ಕೆ ಕಾಂಗ್ರೆಸ್ ಶಾಕ್
ಜೆಡಿಎಸ್‍ನಿಂದ ಎಂಎಲ್ಸಿಯಾಗಿದ್ದುಕೊಂಡು ಜೆಡಿಎಸ್ ವಿರುದ್ಧವೇ ಟೀಕೆ ಮಾಡುತ್ತಿದ್ದ ಸಂದೇಶ್ ನಾಗರಾಜ್ ಅವರಿಗೆ ಮುಳುಗು ನೀರು ತಂದಿದಲ್ಲದೆ, ಸಿದ್ದರಾಮಯ್ಯರ ಪರಮ ಶಿಷ್ಯನಾಗಿದ್ದ ಸಿ. ಎನ್. ಮಂಜೇಗೌಡರನ್ನು ರಾತ್ರಿಬೆಳಗಾಗುವುದರೊಳಗೆ ಪಕ್ಷಕ್ಕೆ ಸೇರಿಸಿ ಟಿಕೆಟ್ ನೀಡಿ ಸಿದ್ದರಾಮಯ್ಯ ಮಾತ್ರವಲ್ಲದೆ ಇಡೀ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿದ್ದು ದೇವೇಗೌಡ ಮತ್ತು ಕುಮಾರಸ್ವಾಮಿ ರಾಜಕೀಯ ತಂತ್ರಕ್ಕೊಂದು ನಿದರ್ಶನ.
ಈ ತಂತ್ರ ಬಿಜೆಪಿಗಿಂತ ಕಾಂಗ್ರೆಸ್ ಮೇಲೆ ಹೆಚ್ಚಿನ ಪರಿಣಾಮ ಬೀರಿರುವುದರಿಂದ ಸಿದ್ದರಾಮಯ್ಯ ಹಗಲು ರಾತ್ರಿ ಎನ್ನದೆ ಮೈಸೂರು ಹಾಗೂ ಚಾಮರಾಜನಗರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಇತರೆ ಕ್ಷೇತ್ರಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಮೈಸೂರಿನಲ್ಲಿಯೇ ಬೀಡು ಬಿಟ್ಟು ಮತದಾರರ ಬಳಿಗೆ ತೆರಳುತ್ತಿದ್ದಾರೆ. ಈ ಬಾರಿ ತವರು ಕ್ಷೇತ್ರದಲ್ಲಿ ಭಾರೀ ಪೈಪೋಟಿ ಏರ್ಪಡುವ ಮುನ್ಸೂಚನೆ ಅವರಿಗೆ ಮೊದಲೇ ಸಿಕ್ಕಿತ್ತೇನೋ ಹಾಗಾಗಿಯೇ ಮೊದಲಿಗೆ ರಾಜ್ಯದಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಕೊನೆಗೆ ಮೈಸೂರಿಗೆ ಬಂದು ವಾಸ್ತವ್ಯ ಹೂಡಿದ್ದಾರೆ. ಈಗ ಸ್ಥಳೀಯ ನಾಯಕರೊಂದಿಗೆ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

ಫಲಕೊಡುತ್ತಾ ಸಿದ್ದರಾಮಯ್ಯರ ತಂತ್ರ
ಇಲ್ಲಿ ಸಿದ್ದರಾಮಯ್ಯ ಅಭ್ಯರ್ಥಿಯೇನೋ ಎಂಬಂತೆ ಅವರ ವಿರುದ್ಧ ಮುಗಿ ಬಿದ್ದಿರುವ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಗೆಲುವಿಗಾಗಿ ತಂತ್ರಗಳನ್ನು ಹೂಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರ ಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದರೆ, ಬಿಜೆಪಿ ಅಭ್ಯರ್ಥಿ ಪರವಾಗಿ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದು, ಇದೀಗ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಕ್ಷೇತ್ರಕ್ಕೆ ಆಗಮಿಸಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.
ಮೈಸೂರು- ಚಾಮರಾಜನಗರ ದ್ವಿಸದಸ್ಯ ಕ್ಷೇತ್ರವಾಗಿರುವುದರಿಂದ ಮತದಾರರಿಗೆ ದ್ವಿಮತ (ಮೊದಲ ಮತ್ತು ದ್ವಿತೀಯ ಪ್ರಾಶಸ್ತ್ಯ ಮತ) ಚಲಾಯಿಸುವ ಹಕ್ಕಿದೆ. ಆದರೆ ತಮಗೆ ಎದುರಾಳಿಯಾಗಿರುವ ಜೆಡಿಎಸ್ ಮತ್ತು ಬಿಜೆಪಿಯನ್ನು ಬಗ್ಗುಬಡಿಯುವ ಉದ್ದೇಶದಿಂದ ಸಿದ್ದರಾಮಯ್ಯ ತಂತ್ರವೊಂದನ್ನು ರೂಪಿಸಿದ್ದು, ಮತದಾರರು ಒಂದೇ ಮತವನ್ನು ಚಲಾಯಿಸಿ ಎಂದು ಪ್ರಚಾರ ನಡೆಸುತ್ತಿದ್ದಾರೆ. ಆದರೆ ಮತದಾರರು ಸಿದ್ದರಾಮಯ್ಯ ಮಾತನ್ನು ಚಾಚು ತಪ್ಪದೆ ಪಾಲಿಸುತ್ತಾರೆ ಎಂಬ ನಂಬಿಕೆಯಿಲ್ಲ.

ಜೆಡಿಎಸ್, ಬಿಜೆಪಿ ನಾಯಕರ ತಂತ್ರ ಏನಿರಬಹುದು?
ಈಗಾಗಲೇ ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿ ಏಳು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವಾಟಾಳ್ ನಾಗರಾಜ್ ಮೊದಲ ಪ್ರಾಶಸ್ತ್ಯ ಮತ ನನಗೆ ನೀಡಿ ಉಳಿದ ಮತವನ್ನು ಯಾರಿಗೆ ಬೇಕಾದರೂ ನೀಡಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಆದರೆ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಪ್ರಚಾರದ ವೇಗ ಹೆಚ್ಚಾಗುವ ಸಾಧ್ಯತೆಯಿದ್ದು, ಇನ್ನೊಂದಷ್ಟು ಘಟಾನುಘಟಿ ನಾಯಕರು ಕ್ಷೇತ್ರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.
ಕಳೆದ ಬಾರಿ ಕಾಂಗ್ರೆಸ್‌ನಿಂದ ಗೆಲುವು ಪಡೆದಿದ್ದ ಆರ್. ಧರ್ಮಸೇನಾಗೆ ಟಿಕೆಟ್ ತಪ್ಪಿಸಿ ಡಾ. ಡಿ. ತಿಮ್ಮಯ್ಯಗೆ ಟಿಕೆಟ್ ಸಿಗುವಂತೆ ಮಾಡುವಲ್ಲಿ ಸಿದ್ದರಾಮಯ್ಯ ಪಾತ್ರವಿದೆ. ಹೀಗಾಗಿ ತಾನು ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದು ಸಿದ್ದರಾಮಯ್ಯಗೆ ಅನಿವಾರ್ವಾಗಿದೆ. ಆದರೆ ಸಿದ್ದರಾಮಯ್ಯರನ್ನು ಹಣಿಯಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಕೊನೆಗಳಿಗೆಯಲ್ಲಿ ಒಂದಾಗಿ ಕಾರ್ಯತಂತ್ರ ರೂಪಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಸಿದ್ದರಾಮಯ್ಯ ಪ್ರತಿಷ್ಠೆ
ಇದೆಲ್ಲವನ್ನು ಗಮನಿಸಿರುವ ಸಿದ್ಧರಾಮಯ್ಯ ತನ್ನ ಪ್ರತಿಷ್ಠೆ ಉಳಿಸಿಕೊಳ್ಳುವ ಸಲುವಾಗಿ ತಂತ್ರಗಳನ್ನು ರೂಪಿಸುತ್ತಿದ್ದು, ಈಗಾಗಲೆ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರನ್ನು ಭೇಟಿಯಾಗಿ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಜತೆಗೆ ಒಂದೇ ಒಂದು ಮತವನ್ನು ಹಾಕುವಂತೆ ಮನವಿ ಮಾಡುತ್ತಿದ್ದಾರೆ. ಮುಂದೆ ಏನಾಗುತ್ತದೆ ಎಂಬುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದ್ದು ಚುನಾವಣೆ ನಡೆದು ಫಲಿತಾಂಶ ಬರುವ ತನಕ ಕಾಯುವುದು ಅನಿವಾರ್ಯವಾಗಿದೆ. ಡಿಸೆಂಬರ್ 10ರಂದು ಪರಿಷತ್ ಚುನಾವಣೆ ನಡೆಯಲಿದ್ದು, ಡಿಸೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications