ಬಿಜೆಪಿಯವರು ಟಿಪ್ಪು ಜಯಂತಿ ಮಾಡಬೇಕಿಲ್ಲ: ಶಾಸಕ ತನ್ವೀರ್ ಸೇಠ್
ಮೈಸೂರು, ಆಗಸ್ಟ್ 1: "ಬಿಜೆಪಿಯವರು ಟಿಪ್ಪು ಜಯಂತಿ ಮಾಡುವುದು ಬೇಕಾಗಿಲ್ಲ. ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡುತ್ತದೆ ಎಂದು ಮೊದಲೇ ನಿರೀಕ್ಷಿಸಿದ್ದೆವು" ಎಂದಿದ್ದಾರೆ ಶಾಸಕ ತನ್ವೀರ್ ಸೇಠ್.
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಟಿಪ್ಪು ಜಯಂತಿ ರದ್ದು ಮಾಡಿರುವುದು ನಮಗೆ ಬೇಸರವಿಲ್ಲ. ಇದನ್ನು ಮೊದಲೇ ನಿರೀಕ್ಷಿಸಿದ್ದೆವು. ಕಳೆದ ಮೈತ್ರಿ ಸರ್ಕಾರ ಕೂಡ ಟಿಪ್ಪು ಜಯಂತಿಯಂದು 144 ಸೆಕ್ಷನ್ ಜಾರಿ ಮಾಡಿ ನಾಲ್ಕು ಗೋಡೆ ಮಧ್ಯೆ ಜಯಂತಿ ಆಚರಿಸಿತ್ತು. ನಾವು ಯಾವುದೇ ಸರ್ಕಾರವನ್ನು ಟಿಪ್ಪು ಜಯಂತಿ ಮಾಡಿ ಎಂದು ಕೇಳಿಲ್ಲ. ರಾಜಕೀಯ ಉದ್ದೇಶಕ್ಕಾಗಿ ಟಿಪ್ಪು ಜಯಂತಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಟಿಪ್ಪು ಎಂತಹ ವ್ಯಕ್ತಿ ಎನ್ನುವುದನ್ನು ಇತಿಹಾಸ ನೋಡಿ ತಿಳಿದುಕೊಳ್ಳಲಿ" ಎಂದರು.

"ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಕಳೆದ 29 ವರ್ಷಗಳಿಂದ ಟಿಪ್ಪು ಜಯಂತಿ ಆಚರಿಸುತ್ತಾ ಬಂದಿದ್ದೇವೆ. ಈ ಬಾರಿ ಇನ್ನೂ ಅದ್ಧೂರಿಯಾಗಿ ಆಚರಣೆ ಮಾಡುತ್ತೇವೆ. ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಜಾಗಕ್ಕೂ ಹೋಗಿ ಗಂಧ ಊರುಫ್ ಆಚರಿಸಿ ಬಂದಿದ್ದೇವೆ" ಎಂದು ತಿಳಿಸಿದರು.












Click it and Unblock the Notifications