ಇಬ್ಬರಿಗೂ ಪ್ರಾತಿನಿಧ್ಯ ಸಿಗಬೇಕು: ಶಾಸಕ ಎ.ರಾಮದಾಸ್
ಮೈಸೂರು, ಮೇ 25 : ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಅಥವಾ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಇಬ್ಬರಲ್ಲಿ ಯಾರಿಗಾದರೂ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಬೇಕೆಂದು ಎಂದು ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀನಿವಾಸ್ ಪ್ರಸಾದ್ ಹಿರಿಯ ಅನುಭವಿ ರಾಜಕಾರಣಿ. ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲೂ ಸಚಿವರಾಗಿ ಕೆಲಸ ಮಾಡಿದ್ದರು. ಅವರ ಗೆಲುವು ಸಂತೋಷ ತಂದಿದೆ. ಇನ್ನು ಪ್ರತಾಪ್ ಸಿಂಹ ಡೈನಮಿಕ್ ಲೀಡರ್. ಬಿಜೆಪಿ ಎರಡನೇ ಹಂತದ ನಾಯಕರನ್ನು ಬೆಳೆಸುವುದರಲ್ಲಿ ವಿಶೇಷ ಆಸಕ್ತಿ ಹೊಂದಿರುವ ಪಕ್ಷ. ಹೀಗಾಗಿ ಅವರಿಗೂ ಅವಕಾಶ ಸಿಗುವಂತಾಗಲಿ ಎಂದು ಮೈಸೂರು ಕೊಡಗು, ಚಾಮರಾಜನಗರ ಸಂಸದರ ಪರ ಬ್ಯಾಟ್ ಬೀಸಿದರು.

ಜಾತಿ, ಧರ್ಮ ಎಲ್ಲವನ್ನು ಮೀರಿ ಎಲ್ಲಾ ವರ್ಗದವರು ಬಿಜೆಪಿಗೆ ಮತ ನೀಡಿದ್ದಾರೆ. ನರೇಂದ್ರ ಮೋದಿಯವರ ಮತ್ತೊಮ್ಮೆ ಪ್ರಧಾನಿ ಮಾಡಲು ಜನ ಉತ್ಸಾಹ ತೋರಿದ್ದಾರೆ. ಈ ಬಾರಿ ನನ್ನ ಕ್ಷೇತ್ರದಲ್ಲಿ 107 ವಯಸ್ಸಿನ ಅಜ್ಜಿ ಮತ ಚಲಾಯಿಸಿರುವುದು ವಿಶೇಷ. ಇಂದು ಬಿಜೆಪಿ 303 ಸ್ಥಾನಗಳಿಸಿ ದೇಶದಲ್ಲಿ ಅತ್ಯಧಿಕ ಬಹುಮತಗಳಿಸಿದೆ. ಕರ್ನಾಟಕದ ಇತಿಹಾಸದಲ್ಲಿ 25ಸ್ಥಾನ ಕೊಡುವ ಮೂಲಕ ಜನ ನಮಗೆ ಮತ್ತಷ್ಟು ಜವಾಬ್ದಾರಿ ನೀಡಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಜನರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದರು.
ಮುಂದಿನ 2022ರೊಳಗೆ ನರೇಂದ್ರ ಮೋದಿಯವರ ಕನಸಿನ ಕೂಸಾದ ಆಶ್ರಯ ಯೋಜನೆಯಡಿಯಲ್ಲಿ ಸ್ವಂತ ಸೂರನ್ನ ಕಲ್ಪಿಸುವ ನಿರ್ಧಾರಕ್ಕೆ ಕಾರ್ಯೋನ್ಮುಖರಾಗುತ್ತೇವೆ. ಆರೋಗ್ಯ ಮೈಸೂರು ಕಾರ್ಯಕ್ರಮದಿಂದ ಆರೋಗ್ಯ ಭದ್ರತೆ ನೀಡಲು ನಿರ್ಧರಿಸಿದ್ದೇವೆ ಎಂದರು.












Click it and Unblock the Notifications