ವಿಡಿಯೋ; ಎಷ್ಟು ಜನರನ್ನು ಗೆಲ್ಲಿಸಿದ್ದೀರಿ? ಪ್ರತಾಪ್ ಸಿಂಹಗೆ ಪ್ರಶ್ನೆ

ಮೈಸೂರು, ಜನವರಿ 30; ಮೈಸೂರು ನಗರದಲ್ಲಿ ಗ್ಯಾಸ್‌ಪೈಪ್ ಲೈನ್ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್‌ ಸಿಂಹ ಹಾಗೂ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್‌. ನಾಗೇಂದ್ರ ನಡುವಿನ ಜಟಾಪಟಿ ಮುಂದುವರೆದಿದೆ. ತಮ್ಮದೇ ಪಕ್ಷದ ಸಂಸದರ ವಿರುದ್ಧ ಹರಿಹಾಯ್ದಿರುವ ನಾಗೇಂದ್ರ, "ನೀವು ನಮ್ಮ ಊರಲ್ಲಿ ಜಿಲ್ಲಾ ಪಂಚಾಯಿತಿಯಿಂದ ಗೆದ್ದು ಬಂದಿದ್ದರೆ ನಿಮಗೆ ಶರಣಾಗುತ್ತೇನೆ" ಎಂದು ಸವಾಲು ಹಾಕಿದ್ದಾರೆ.

ಮೈಸೂರಲ್ಲಿ ಭಾನುವಾರ ಮಾತನಾಡಿದ ಶಾಸಕರು, "ನಾನು ನಿಮ್ಮ ರೀತಿ ದಿಢೀರ್ ಅಂತ ಬಂದು ಪದವಿ ಪಡೆದವನಲ್ಲ‌. 25 ವರ್ಷದಿಂದ ಜನಪ್ರತಿನಿಧಿಯಾಗಿದ್ದೇನೆ. ನನ್ನ ಲೀಡ್‌ ಕಡಿಮೆಯಾಗಲು ಒಂದೇ ಊರಿನ ಇಬ್ಬರು ಅಭ್ಯರ್ಥಿಗಳು ಕಾರಣ. ಮುಂದಿನ ಚುನಾವಣೆಯಲ್ಲಿ ಅತಿ ಹೆಚ್ಚು ಲೀಡ್ ಪಡೆಯುತ್ತೇನೆ. ನಿಮ್ಮ ಚುನಾವಣೆಯಲ್ಲಿ ನನ್ನ ಮುಖ, ನನ್ನ ಅಭಿವೃದ್ಧಿ ನೋಡಿ ನಿಮಗೆ ಲೀಡ್ ಕೊಟ್ಟಿದ್ದು. ನನ್ನ ಕ್ಷೇತ್ರದಲ್ಲಿ ಪಾಲಿಕೆ ಸದಸ್ಯರು ಸೋಲಲು ಕಾರಣ ನೀವು" ಎಂದು ವಾಗ್ದಾಳಿ ನಡೆಸಿದರು.

"ನೀವೇ ಅದರ ಜವಾಬ್ದಾರಿ ಪಡೆದು ಟಿಕೆಟ್ ನೀಡಿದ್ದೀರಿ‌. ಅದರಲ್ಲಿ ಎಷ್ಟು ಜನರನ್ನು ಗೆಲ್ಲಿಸಿದ್ದೀರಾ?. ಎಂ‌ಎಲ್‌ಸಿ ಚುನಾವಣೆಯ ಉಸ್ತುವಾರಿ ಸಹ ನೀವೇ ವಹಿಸಿದ್ದೀರಿ, ಅದನ್ನು ಗೆಲ್ಲಿಸಿದ್ದೀರಾ?" ಎಂದು ತನ್ನ ಹುಟ್ಟೂರಲ್ಲೇ ಲೀಡ್ ಸಿಕ್ಕಿಲ್ಲವೆಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ನಾಗೇಂದ್ರ ತಿರುಗೇಟು ನೀಡಿದರು.

MLA L Nagendra And MP Pratap Simha Verbal War

"ನಾನು‌ ನಿಮ್ಮಷ್ಟು ವಿದ್ಯಾವಂತ, ಬುದ್ಧಿವಂತ ಅಲ್ಲ. ಬೀದಿಯಲ್ಲಿ ನಿಂತು ನಮಗೆ ಪಾಠ ಮಾಡಬೇಡಿ. ಸಂಸದರು ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರನ್ನು ಗೆಲ್ಲಿಸಿದ್ದಾರೆ?. ಮೈಸೂರಿನಲ್ಲಿ 7 ವರ್ಷದಿಂದ ನೀವೇ ಸಂಸದರಾಗಿದ್ದೀರಾ, ಮೊದಲು ಅದನ್ನು ಹೇಳಿ. ನಾನು ನನ್ನ ಹುಟ್ಟೂರಿನಲ್ಲಿ ಪಾಲಿಕೆ ಸದಸ್ಯನಾಗಿದ್ದೆ. ನೀವು ನಮ್ಮ ಊರಲ್ಲಿ ಜಿಲ್ಲಾ ಪಂಚಾಯಿತಿ ಗೆದ್ದು ಬಂದಿದ್ದರೆ ನಿಮಗೆ ಶರಣಾಗುತ್ತೇನೆ" ಎಂದು ಸವಾಲು ಹಾಕಿದ್ದಾರೆ.

ಇನ್ನೂ ಚಾಮರಾಜ ಕ್ಷೇತ್ರಕ್ಕೆ 300 ಕೋಟಿ ಅನುದಾನದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ಇದು ಒಂದೇ ದಿನದಲ್ಲಿ ನಾನು ದಾಖಲೆ ಸಂಗ್ರಹಿಸಿದ್ದು, ಇನ್ನು ಹಲವು ದಾಖಲೆಗಳು ಇವೆ, ಅವನ್ನೂ ಬಿಡುಗಡೆ ಮಾಡುತ್ತೇನೆ. ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಪಕ್ಷದ ನಾಯಕರ ಗಮನಕ್ಕೆ ತಂದಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲರ ಗಮನಕ್ಕೂ ತಂದಿದ್ದೇನೆ. ಅಲ್ಲದೇ ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆ" ಎಂದು ಶಾಸಕ ಎಲ್. ನಾಗೇಂದ್ರ ಹೇಳಿದರು.

"ಚಾಮುಂಡೇಶ್ವರಿ ಆಣೆಯಾಗಿಯೂ ಇದು ಕಮಿಷನ್‌ಗಾಗಿ ಅಲ್ಲ. ಜನರ ಹಿತದೃಷ್ಟಿಯಿಂದಾಗಿ ನಾನು ಮಾತನಾಡುತ್ತಿದ್ದೇನೆ. ನನಗೆ ಕಮಿಷನ್ ವಿಚಾರ ಗೊತ್ತಿಲ್ಲ. ಇದು ನನ್ನೂರು, ಇಲ್ಲಿನ ಸಮಸ್ಯೆಗಳು ನನಗೆ ಚೆನ್ನಾಗಿ ಗೊತ್ತಿವೆ. ಗ್ಯಾಸ್ ಪೈಪ್ ಲೈನ್ ಅಳವಡಿಕೆ ಯೋಜನೆ ಕಾಮಗಾರಿ ವೇಳೆ ಅನಾಹುತ ಆದರೆ ಯಾರು ಜವಾಬ್ದಾರಿ?. ಬೇರೆ ಬೇರೆ ಕಡೆ ಅನಾಹುತಗಳು ಆಗಿವೆ. ಆಗುವ ಅನಾಹುತಕ್ಕೆ ಯಾರು ಹೊಣೆ ಎಂದು ಕೇಳಿದರೆ ತಪ್ಪಾ?" ಎಂದು ಪ್ರಶ್ನಿಸಿದರು.

"ಸಂಸದ ಪ್ರತಾಪ್ ಸಿಂಹ ಅವರಿಗೆ ಏಕೆ ಆ ಕಂಪನಿಯ ಮೇಲೆ ಒಲವು?. ಕಂಪನಿಯವರು ನೇರವಾಗಿ ನಗರ ಪಾಲಿಕೆ ಅಧಿಕಾರಿಗಳ ಜೊತೆ ಮಾತನಾಡಲಿ" ಎಂದರು. ಈ ಮೂಲಕ ಕಂಪನಿಯವರು ವೈಯುಕ್ತಿಕವಾಗಿ ಭೇಟಿ ಮಾಡಿಲ್ಲದಿರಬಹುದು, ಅದಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಸಂಸದ ಪ್ರತಾಪ್ ಸಿಂಹ ಆರೋಪಕ್ಕೆ ಶಾಸಕ ನಾಗೇಂದ್ರ ಪ್ರತಿಕ್ರಿಯೆ ನೀಡಿದರು.

"ಮೈಸೂರು ನಗರ ಪ್ಲಾನ್ ಸಿಟಿಯಾಗಿದ್ದು, ಮೈಸೂರು ಮಹಾರಾಜರ ಹಂತಕ್ಕೆ ನಾವು ಹೇಳಿಕೊಳ್ಳುವುದಲ್ಲ. ನಾವ್ಯಾರು ಅವರ ಹಂತಕ್ಕಿಲ್ಲ, ಅವರ ಮಟ್ಟಕ್ಕೆ ಹೋಲಿಕೆ ಮಾಡಿಕೊಳ್ಳಲು ಆಗುವುದಿಲ್ಲ. ಮಹಾರಾಜರು ಅವರ ಮನೆಯ ದುಡ್ಡನ್ನ ಬಳಸಿ ಕನ್ನಂಬಾಡಿ ಕಟ್ಟೆ ಕಟ್ಟಿದ್ದಾರೆ. ಯಾವ ರಾಜಕಾರಣಿ ಚಿನ್ನ ಮಾರಾಟ ಮಾಡಿ ಡ್ಯಾಂ ಕಟ್ಟಿದ್ದಾರೆ?, ಮೋರಿ ಅಥವಾ ರಸ್ತೆ ಕಟ್ಟಿಸಿದ್ದಾರೆ?. ನಾನು ನಾನು ಎಂದು ಹೇಳಿಕೊಳ್ಳುವ ಒಬ್ಬ ರಾಜಕಾರಣಿಯನ್ನು ನಮ್ಮ ರಾಜ್ಯ ಮತ್ತು ದೇಶದಲ್ಲಿ ತೋರಿಸಿ. ಮೈಸೂರು ಮಹಾರಾಜರ ಕೊಡುಗೆ ಸಾಕಷ್ಟಿದೆ. ಈ ನಗರಕ್ಕೆ ನಾನೇನೋ ಮಾಡಿದ್ದೇನೆಂಬ ಭ್ರಮೆಯಲ್ಲಿ ನಾನಿಲ್ಲ" ಎಂದು ಸಂಸದ ಪ್ರತಾಪ್ ಸಿಂಹಗೆ ಟಾಂಗ್ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+