ಲಾಕ್ ಡೌನ್ ನಡುವೆಯೇ ನಂಜನಗೂಡಿನಲ್ಲಿ ಶಾಸಕರ ಚಂಡಿಕಾ ಯಾಗ
ಮೈಸೂರು, ಮೇ 8: ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿರುವ ಕಾರಣದಿಂದ ದೇವಸ್ಥಾನ, ಮಸೀದಿ, ಪ್ರಾರ್ಥನಾ ಮಂದಿರಗಳಲ್ಲಿ ಇನ್ನೂ ಸಾರ್ವಜನಿಕರ ಪ್ರವೇಶ ಮತ್ತು ಪೂಜೆಗೆ ಅವಕಾಶ ನೀಡಲಾಗಿಲ್ಲ.
ಆದರೆ ನಂಜನಗೂಡಿನ ನಂಜುಂಡೇಶ್ವರನ ದೇವಾಲಯದಲ್ಲಿ ಶುಕ್ರವಾರ ಬೆಳಿಗ್ಗೆ ವಿಶೇಷ ಚಂಡಿಕಾಯಾಗ ಪೂಜೆ ನಡೆಸುವ ಮೂಲಕ ಬಿಜೆಪಿ ಶಾಸಕ ಹರ್ಷವರ್ಧನ್ ಅವರು ಲಾಕ್ ಡೌನ್ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸರ್ಕಾರದ ನಿಯಮಾವಳಿಗಳು ಬರೀ ಜನಸಾಮಾನ್ಯರಿಗೆ ಮಾತ್ರವೇ? ರಾಜಕಾರಣಿಗಳಿಗೆ ಅನ್ವಯಿಸುವುದಿಲ್ಲವೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಸೀದಿ, ದೇವಸ್ಥಾನಗಳಿಗೆ ಬೀಗ ಹಾಕುವಂತೆ ಆದೇಶ ಇದೆ. ಸಾರ್ವಜನಿಕರಿಗೆ ಕಡ್ಡಾಯ ಪ್ರವೇಶ ನಿಷೇಧ ಕೂಡ ಇದೆ. ದೇವಾಲಯಗಳಲ್ಲಿ ನಿತ್ಯ ಪೂಜೆಗೆ ಅವಕಾಶ ಇದ್ದು, ಪುರೋಹಿತರು ಮತ್ತು ಸಿಬ್ಬಂದಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ಇದೆ.
ಅದರಲ್ಲೂ ಬೆಳಿಗ್ಗೆ 6 ರಿಂದ 8 ಗಂಟೆಯೊಳಗೆ ಪೂಜಾ ವಿಧಾನಗಳನ್ನು ಪೂರೈಸಿ ಬಾಗಿಲು ಮುಚ್ಚಬೇಕೆಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆದರೆ ಜನಪ್ರತಿನಿಧಿಯಿಂದಲೇ ನಿಯಮ ಉಲ್ಲಂಘನೆ ಆಗಿದ್ದು, ಕಾನೂನು ಪಾಲಿಸಿ ಇತರರಿಗೆ ಮಾದರಿಯಾಗಬೇಕಿದ್ದ ನಂಜನಗೂಡು ಶಾಸಕ ಹರ್ಷವರ್ಧನ್ ಅವರೇ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.