ದಾಖಲೆ ಕೊಡಲಿ ಇಲ್ಲ ನಾನೇ ನೋಟಿಸ್ ಕೊಡುತ್ತೇನೆ: ಸಚಿವ ಭೈರತಿ ಸುರೇಶ್ ವಿರುದ್ಧ ಜಿಟಿ ದೇವೇಗೌಡ ಕಿಡಿ
ನಾನು 50:50 ಯೋಜನೆಯಡಿ ಯಾವುದೇ ನಿವೇಶನ ಪಡೆದುಕೊಂಡಿಲ್ಲ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ದಾಖಲೆ ಬಿಡುಗಡೆ ಮಾಡಲಿ. ಇಲ್ಲವಾದಲ್ಲಿ ಅವರ ವಿರುದ್ಧ ನೋಟಿಸ್ ಜಾರಿಗೊಳಿಸುತ್ತೇನೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಮೈಸೂರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಾಭಿವೃದ್ಧಿ ಇಲಾಖೆ ಮಂತ್ರಿಗಳು ಯಾವುದೇ ದಾಖಲೆ ಇಲ್ಲದೆ ನನ್ನ ವಿರುದ್ದ ಆರೋಪ ಮಾಡಿದ್ದಾರೆ. ಕಲೆಕ್ಷನ್ ಮಾಡೋಕೆ ಇಟ್ಟುಕೊಂಡವರ ಮಾತುಕೇಳಿ ಇಂಥ ಹೇಳಿಕೆ ನೀಡಿದ್ದಾರೆ. ನಿಮ್ಮ ತಪ್ಪಿನಿಂದ ಸಿಎಂ ತಲೆಗೆ ಬಂದಿದೆ. ಪ್ರಾಧಿಕಾರಗಳು ಸಂಬಳ ಕೊಡಲೂ ಕಾಸಿಲ್ಲದ ಸ್ಥಿತಿಗೆ ಬಂದಿವೆ ಎಂದು ಟೀಕಿಸಿದರು.

ಮಾದಗಳ್ಳಿಯ 1 ಎಕರೆ ಹಾಗೂ ಈರನಗೆರೆಯ 2.25 ಎಕರೆ ಜಾಗಕ್ಕೆ ಬದಲಾಗಿ ಜಿ.ಟಿ.ದೇವೇಗೌಡ 50:50 ಯೋಜನೆಯಡಿ ನಿವೇಶನ ಪಡೆದಿದ್ದಾರೆ ಎಂದು ರಾಜ್ಯದ ನಗರಾಭಿವೃದ್ಧಿ ಸಚಿವರು ಆರೋಪಿಸಿದ್ದಾರೆ. ಆದರೆ 50:50 ಯೋಜನೆಯಂತೆ ಮುಡಾ ವಶಪಡಿಸಿಕೊಂಡಿರುವ ಜಮೀನಿಗೆ ಪರ್ಯಾಯವಾಗಿ ನಿವೇಶನ ಕೊಡಿಸಿಕೊಡುವಂತೆ ಕೇಳಿಕೊಂಡು ಕ್ಷೇತ್ರದ ಇಬ್ಬರು ಫಲಾನುಭವಿಗಳು ನನ್ನ ಕಚೇರಿಗೆ ಬಂದಿದ್ದರು.
ಈ ವಿಷಯವನ್ನು ಪ್ರಾಧಿಕಾರದ ಸಭೆಯ ಗಮನಕ್ಕೆ ತಂದು ಕಾನೂನಾತ್ಮಕವಾಗಿ ಅವರ ದಾಖಲೆಗಳನ್ನು ಪರಿಶೀಲಿಸಿ ನಿವೇಶನ ನೀಡುವಂತೆ ಮುಡಾಗೆ ಶಿಫಾರಸ್ಸು ಪತ್ರ ಕೊಟ್ಟಿರುವುದು ಬಿಟ್ಟರೆ, ನಾನು ಮುಡಾದಿಂದ ಈ ಯೋಜನೆಯಡಿ ಯಾವುದೇ ನಿವೇಶನ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ 50:50 ಯೋಜನೆಯಲ್ಲಿ ಅಕ್ರಮವಾಗಿದೆ ಎಂಬ ಆರೋಪಗಳು ಕೇಳಿಬಂದಾಗಲೇ ಜವಾಬ್ದಾರಿಯಿಂದ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮವಹಿಸಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ರೀತಿ ಕೆಟ್ಟ ಹೆಸರು ಬರುತ್ತಿರಲಿಲ್ಲ. ನನ್ನ ವಿರುದ್ಧ ಆರೋಪ ಮಾಡುತ್ತಿರುವ ಸಚಿವರು ಧಮ್ಮಿದ್ದರೆ ಎಲ್ಲಾ ಶಾಸಕರ ವಿರುದ್ಧ ತನಿಖೆ ಮಾಡಿಸಲಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಿ ಎಂದು ಸವಾಲು ಹಾಕಿದರು.
ನನ್ನ 55 ವರ್ಷದ ರಾಜಕಾರಣದಲ್ಲಿ ನನ್ನ ಸ್ವಂತಕ್ಕೆ ಯಾವುದೇ ಆಸ್ತಿ ಮಾಡಿಕೊಂಡಿಲ್ಲ. ಕಲ್ಯಾಣ ಮಂಟಪ, ಪೆಟ್ರೋಲ್ ಬಂಕ್, ಶಾಲೆ, ವಾಣಿಜ್ಯ ಕಟ್ಟಡಗಳು ನನ್ನ ಹೆಸರಿನಲ್ಲಿ ಇಲ್ಲ. ಹಿಂದೆ ಗೋವಿಂದರಾಜು ಅವರು ಮುಡಾ ಅಧ್ಯಕ್ಷರಾಗಿದ್ದಾಗ ಲಾಟರಿಯಲ್ಲಿ 50*80 ನಿವೇಶನ ನನಗೆ ದೊರೆತಿದೆ. ನಂತರ ಬಂದ ಅಧ್ಯಕ್ಷರೆಲ್ಲ ನನ್ನ ಆಪ್ತರಾದರೂ ಅವರಲ್ಲಿ ಒಂದೇ ಒಂದು ನಿವೇಶನ ಪಡೆದಿಲ್ಲ ಎಂದು ತಿಳಿಸಿದರು.












Click it and Unblock the Notifications