ಜೀರೋ ಟ್ರಾಫಿಕ್ ತ್ಯಜಿಸಿದ ಮೈಸೂರು ಉಸ್ತುವಾರಿ ಸಚಿವ ಸೋಮಣ್ಣ
ಮೈಸೂರು, ಸೆಪ್ಟೆಂಬರ್ 5: ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಅಧಿಕಾರ ಕಿತ್ತುಕೊಂಡವರ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲವೆಂದು ಮಾಜಿ ಸಚಿವ ಸಾರಾ ಮಹೇಶ್ ಹೇಳಿಕೆ ವಿಚಾರಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಾರಾ ಮಹೇಶ್ ಅವರು ಜ್ಞಾನಿಗಳು. ನನಗಿಂತ ಅಪಾರ ಬುದ್ಧಿವಂತರು. ಅವರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಅವರಿಗೆ ಒಳ್ಳೆಯದಾಗಲಿ" ಎಂದು ನಾಜೂಕಾಗಿಯೇ ತಿರುಗೇಟು ನೀಡಿದ್ದಾರೆ.

ಜೀರೋ ಟ್ರಾಫಿಕ್ ತ್ಯಜಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, "ನಾನು ಎಲ್ಲಿ ತನಕ ಮೈಸೂರು ಉಸ್ತುವಾರಿಯಾಗಿರುತ್ತಾನೋ ಅಲ್ಲಿಯವರೆಗೂ ನನಗೆ ಜೀರೊ ಟ್ರಾಫಿಕ್ ಅವಶ್ಯಕತೆ ಇಲ್ಲ. ನಾನು ಕೂಡ ಜನಸಾಮಾನ್ಯನಂತೆ ಓಡಾಡುತ್ತೇನೆ" ಎಂದರು.
ಜಾರಿ ನಿರ್ದೇಶನಾಲಯದಿಂದ ಡಿಕೆಶಿ ಬಂಧನದ ವಿಚಾರಕ್ಕೆ ಪ್ರತಿಕ್ರಿಯಿಸಿ, "ಬಿಜೆಪಿ ಶಿಸ್ತಿನ ಪಕ್ಷ. ಎಂದಿಗೂ ಸೇಡಿನ ರಾಜಕಾರಣ ಮಾಡುವುದಿಲ್ಲ. ಕಾಂಗ್ರೆಸ್ ನವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಆದರೆ ಯಾಕೆ ಎಂಬುದು ಗೊತ್ತಿಲ್ಲ. ಡಿಕೆಶಿಯವರಿಗೆ ಒಳ್ಳೆಯದಾಗಲೆಂದು ಪ್ರಾರ್ಥಿಸುತ್ತೇನೆ. ಡಿಕೆಶಿ ನನಗೆ ಒಳ್ಳೆಯ ಸ್ನೇಹಿತ. ನನ್ನ ಪಕ್ಕದ ಗ್ರಾಮದವರು. ಅವರ ಬಗ್ಗೆ ನನಗೆ ಗೌರವವಿವೆ. ಕಾಂಗ್ರೆಸ್ ಆರೋಪಗಳ ಬಗ್ಗೆ ನಾನು ಮಾತನಾಡುವುದಿಲ್ಲ" ಎಂದರು.












Click it and Unblock the Notifications