ಜಿ ಟಿ ದೇವೇಗೌಡರ ಹೇಳಿಕೆಯನ್ನು ಅಲ್ಲಗಳೆದ ಸಚಿವ ಸಾ ರಾ ಮಹೇಶ್
Recommended Video
ಮೈಸೂರು, ಮೇ 4 : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಗೆ ತಮ್ಮ ಮತ ಚಲಾಯಿಸಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ನೀಡಿರುವ ಹೇಳಿಕೆಯನ್ನು ಸಚಿವ ಸಾ.ರಾ. ಮಹೇಶ್ ಅಲ್ಲಗಳೆದಿದ್ದಾರೆ.
ಅಲ್ಲದೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಗೆ ತಮ್ಮ ಮತ ಚಲಾವಣೆ ಮಾಡಿದ್ದಾರೆಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಮೈತ್ರಿ ಧರ್ಮವನ್ನು ಪಾಲಿಸಿದ್ದಾರೆ. ಸಚಿವ ಜಿ.ಟಿ. ದೇವೇಗೌಡರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ನನಗೆ ತಿಳಿದಿಲ್ಲ. ನನಗೆ ಗೊತ್ತಿರುವಂತೆ ಹಾಗೂ ಮಾಹಿತಿಯಂತೆ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂದು ತಿಳಿಸಿದರು.

ಈ ಹಿಂದೆಯೇ ಜಿ.ಟಿ.ದೇವೇಗೌಡರು ಮೈತ್ರಿಯನ್ನು ಬಹಳ ಬೇಗ ಮಾಡಿಕೊಂಡಿದ್ದರೆ, ಹೆಚ್ಚಿನ ಕಾಲಾವಕಾಶ ಚುನಾವಣಾ ಪ್ರಚಾರಕ್ಕೆ ಲಭ್ಯವಾಗುತ್ತಿತ್ತು. ಹಾಗಾಗಿ ಹೆಚ್ಚಿನ ಮತಗಳ ಅಂತರದಿಂದ ಮೈತ್ರಿ ಅಭ್ಯರ್ಥಿ ಗೆಲ್ಲಲು ಸಾಧ್ಯವಾಗುತ್ತಿತ್ತು ಎಂಬ ಅರ್ಥದಲ್ಲಿ ಹೇಳಿರಬಹುದು. ಮಂಡ್ಯ ಚುನಾವಣೆಯ ಮೇಲೆ ಮಾಧ್ಯಮಗಳು ಹೆಚ್ಚು ಗಮನಹರಿಸುತ್ತಿರುವ ಕಾರಣ ಅವರ ಗಮನವನ್ನು ಮೈಸೂರಿನತ್ತಲೂ ಸೆಳೆಯಲು ಜಿ.ಟಿ.ದೇವೇಗೌಡರು ಈ ರೀತಿಯ ಹೇಳಿಕೆಯನ್ನು ನೀಡಿರಬಹುದೇನೋ ಎಂದು ನಕ್ಕು ಸುಮ್ಮನಾದರು.












Click it and Unblock the Notifications