ವೃದ್ಧ ಮಣ್ಣಿನ ಶಿಲ್ಪಿಗೆ 2000 ಬಹುಮಾನ ನೀಡಿದ ಸಚಿವ ಸಿ.ಸಿ ಪಾಟೀಲ್
ಮೈಸೂರು, ಫೆಬ್ರವರಿ 12: ಮಣ್ಣಿನ ಕಲಾಕೃತಿ ಮಾಡುವ ವೃದ್ಧ ಬಸವರಾಜಪ್ಪ ಅವರ ನೈಪುಣ್ಯತೆಗೆ ಮನಸೋತ ಸಣ್ಣ ಕೈಗಾರಿಕಾ ಸಚಿವ ಸಿ.ಸಿ ಪಾಟೀಲ್ ಅವರು ಆ ವೃದ್ಧ ಶಿಲ್ಪಿಗೆ 2000 ರುಪಾಯಿಗಳ ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ಗುರುವಾರ ಮೈಸೂರಿನ ವಸ್ತುಪ್ರದರ್ಶನ ಆವರಣದಲ್ಲಿ ಕರಕುಶಲ ಕರ್ಮಿಗಳು ತಯಾರಿಸಿದ್ದ ಕಲಾಕೃತಿಗಳು ಮತ್ತು ಮಾರಾಟ ಮಳಿಗೆಗೆ ಭೇಟಿ ನೀಡಿದ್ದ ಸಚಿವರ ಗಮನವನ್ನು, ಅಲ್ಲಿ ಸ್ಥಳದಲ್ಲೇ ಮಣ್ಣಿನಿಂದ ಮಡಿಕೆ ಹಾಗೂ ಕಲಾಕೃತಿ ಮಾಡುತ್ತಿದ್ದ ಬಸವರಾಜಪ್ಪ ಅವರು ಸೆಳೆದರು. ಅದನ್ನು ಆಸಕ್ತಿಯಿಂದ ಕೆಲ ಕ್ಷಣ ವೀಕ್ಷಿಸಿದ ಸಚಿವರು 2000 ರೂಪಾಯಿ ಹಣ ನೀಡಿ ಗೌರವಿಸಿದರು.
ತಮ್ಮ ಕುಲ ಕಸುಬಾದ ಕುಂಬಾರಿಕೆ ವೃತ್ತಿಯನ್ನೇ ಕಳೆದ 6-7 ದಶಕಗಳಿಂದ ಮುಂದುವರೆಸಿಕೊಂಡು ಬಂದಿರುವ 75 ವರ್ಷ ವಯಸ್ಸಿನ ಬಸವರಾಜಪ್ಪ ಅವರು ಅನೇಕ ಚಲನಚಿತ್ರ, ಧಾರಾವಾಹಿಗಳಿಗೂ ಬೇಕಾದ ಮಣ್ಣಿನ ಮಡಿಕೆ, ಇತರ ಸಾಮಾಗ್ರಿಗಳನ್ನು ಮಾಡಿ ಕೊಟ್ಟಿದ್ದಾರೆ.

ಪ್ರಖ್ಯಾತ ಮಾಲ್ಗುಡಿ ಡೇಸ್, ಯುಗಪುರುಷ, ಮುತ್ತಿನ ಹಾರ ಸೇರಿದಂತೆ ಹಲವಾರು ಸಿನಿಮಾಗಳಿಗೆ ಮಡಿಕೆಗಳನ್ನು ಮಾಡಿ ಕೊಟ್ಟಿದ್ದೇ ಅಲ್ಲದೆ ಆ ಸಿನಿಮಾಗಳಲ್ಲಿ ಮಡಿಕೆ ಮಾಡುವ ಪಾತ್ರವನ್ನು ಸಹ ಮಾಡಿದ್ದಾರೆ.
ತಮಗೆ ಸಚಿವರು ನೀಡಿದ ಹಣದಿಂದ ಸಂತಸವಾಗಿದೆ ಎಂದು ಹೇಳಿದ ಬಸವರಾಜಪ್ಪ, ಈ ವಸ್ತು ಪ್ರದರ್ಶನದಿಂದ ತಮ್ಮ ಕಲಾ ಪ್ರದರ್ಶನಕ್ಕೆ ಸೂಕ್ತ ಅವಕಾಶ ದೊರೆತಿದೆ ಎಂದು ಹೇಳಿದರು.












Click it and Unblock the Notifications