ಮಧ್ಯಂತರ ಚುನಾವಣೆಯೊಂದೇ ಪರಿಹಾರ: ಮಾಜಿ ಸ್ಪೀಕರ್ ಅಭಿಮತ
ಮೈಸೂರು, ಜುಲೈ 10: ರಾಜ್ಯದಲ್ಲಿ ಸದ್ಯ ರಾಜಕೀಯ ಸ್ಥಿತಿಗತಿಗಳನ್ನು ನೋಡಿದರೆ ವಿಧಾನಸಭೆಯನ್ನು ವಿಸರ್ಜಿಸಿ ಹೊಸ ಜನಾದೇಶ ಪಡೆಯುವುದೇ ಸೂಕ್ತ ಎಂದು ಮಾಜಿ ಸ್ಪೀಕರ್ ಕೆ.ಆರ್ ಪೇಟೆ ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಇಲ್ಲದ ಕಾರಣ ರಾಜೀನಾಮೆಯನ್ನು ಕಾರ್ಯದರ್ಶಿ ಅವರ ಕೈಯಲ್ಲಿ ಕೊಟ್ಟಿದ್ದರು. ಇದನ್ನು ಸ್ಪೀಕರ್ ಪರಿಶೀಲನೆ ನಡೆಸಿದ್ದರು. ರಾಜೀನಾಮೆ ಬಗ್ಗೆ ಅನುಮಾನವಿದ್ದರೆ ನೋಟಿಸ್ ನೀಡಿ ಖುದ್ದು ಹಾಜರಾಗುವಂತೆ ತಿಳಿಸಬಹುದು. ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಪಕ್ಷಾಂತರ ಕಾಯ್ದೆ ಅನ್ವಯ ಕ್ರಮ ಜರುಗಿಸಲು ಸಾಧ್ಯವಿಲ್ಲ. ಅವರೇನಾದರೂ ಬೇರೆ ಪಕ್ಷ ಸೇರಿದಾಗ ಅಥವಾ ಬೇರೆ ಪಕ್ಷದ ಕೈವಾಡದಿಂದ ರಾಜೀನಾಮೆ ನೀಡಿದ್ದಾರೆ ಎಂದು ಸಾಕ್ಷಿ ಇದ್ದಾಗ ಮಾತ್ರ ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದ್ದಾರೆ.
ಸಮ್ಮಿಶ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಮೇಲೆ ಬೇಸರವಾಗಿ ಸ್ವಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ಶಾಸಕರು ವಾದ ಮಾಡುತ್ತಿದ್ದಾರೆ. ಆದರೆ, ಇದರ ಹಿಂದೆ ಬಿಜೆಪಿ ಕೈವಾಡವಿದೆ, ಸಾವಿರಾರು ಕೋಟಿ ಹಣ ಹರಿದಾಡುತ್ತಿದೆ ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ಆರೋಪಿಸುತ್ತಿವೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ಸ್ಪೀಕರ್ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದು ನನ್ನ ಭಾವನೆ ಎಂದರು.

ಸ್ವಇಚ್ಛೆಯಿಂದ, ಯಾವುದೇ ಒತ್ತಡ, ಆಮಿಷಕ್ಕೆ ಒಳಗಾಗದೆ ರಾಜೀನಾಮೆ ನೀಡಿದ್ದರೆ, ಸಹಿ ಅವರದ್ದೇ ಎಂಬುದು ಮನವರಿಕೆಯಾದರೆ ಸ್ಪೀಕರ್ ಅಂಗೀಕಾರ ಮಾಡಬಹುದು. ಎಲ್ಲಾ ಸಂದರ್ಭಗಳಲ್ಲಿ ಶಾಸಕರು ಖುದ್ದಾಗಿ ಹಾಜರಾಗಬೇಕಾದ ಅಗತ್ಯವಿಲ್ಲ. ಆದರೆ, ಅನುಮಾನಗಳು ವ್ಯಕ್ತವಾದಲ್ಲಿ ಅವರಿಗೆ ನೋಟಿಸ್ ನೀಡಿ ಹಾಜರಾಗಲು ಹೇಳಬಹುದು ಎಂದರು.
ವೈಯಕ್ತಿಕವಾಗಿ ಹೇಳಬೇಕೆಂದರೆ ಇಂದಿನ ರಾಜಕೀಯ ಸ್ಥಿತಿ ಬಿಕ್ಕಟ್ಟಿನಲ್ಲಿದೆ. ಮೈತ್ರಿ ಪಕ್ಷ ಬುದ್ಧಿವಂತಿಕೆಯಿಂದ ಆಡಳಿತ ನಡೆಸಿದ್ದಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಒಂದು ಕಾಲದಲ್ಲಿ ದೇವೇಗೌಡರ ಶಿಷ್ಯರಾಗಿದ್ದ ಸಿದ್ದರಾಮಯ್ಯ ಈ ರಾಜೀನಾಮೆ ಹಿಂದೆ ಇದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಏನೇ ಆದರೂ ಇಂದಿನ ಪರಿಸ್ಥಿತಿಯಲ್ಲಿ ವಿಧಾನಸಭೆಯನ್ನು ವಿಸರ್ಜಿಸಿ ಹೊಸ ಜನಾದೇಶ ಪಡೆಯುವುದು ಸೂಕ್ತವೆಂದೆನಿಸುತ್ತದೆ ಎಂದರು.












Click it and Unblock the Notifications