ಸಿಎಂ ತವರು ಜಿಲ್ಲೆಯಲ್ಲಿ ಸಮಸ್ಯೆ ತಂದ ಬಿಸಿಯೂಟ
ಮೈಸೂರು, ನ.29 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಬಿಸಿಯೂಟದ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಸವರ್ಣೀಯರು ತಮ್ಮ ಮಕ್ಕಳನ್ನು ಶಾಲೆಯ ಬಿಸಿಯೂಟಕ್ಕೆ ಕಳುಹಿಸದಿದ್ದರೆ, ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಕುಪ್ಪೇಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಲಿತ ಮಹಿಳೆಯೊಬ್ಬರು ಅಡುಗೆ ಸಹಾಯಕಿಯಾಗಿ ನೇಮಕಗೊಂಡಿದ್ದಾರೆ. ಇದರಿಂದಾಗಿ ಸವರ್ಣೀಯ ಮಕ್ಕಳು ಬಿಸಿಯೂಟ ಬಹಿಷ್ಕರಿಸಿದ್ದಾರೆ. ಈ ಕುರಿತು ಶಾಲೆಯ ಮುಖ್ಯಶಿಕ್ಷಕರು ಪೋಷಕರೊಂದಿಗೆ ನಡೆಸಬೇಕಾಗಿದ್ದ ಸಭೆಯನ್ನು ಮುಂದೂಡಲಾಗಿದೆ.

ಕೆಲವು ಪೋಷಕರು ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದು, ಎಸ್‌ಡಿಎಂಸಿ ಸದಸ್ಯರು ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂದು ಮನವಿ ಮಾಡಿದ್ದಾರೆ. ಮಕ್ಕಳು ಬಿಸಿಯೂಟ ಸೇವಿಸಲು ನಿರಾಕರಿಸಿದರೆ, ಪೋಷಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಶಿಖಾ. ಎಚ್ಚರಿಕೆ ನೀಡಿದ್ದಾರೆ.[ಸರ್ಕಾರಿ ಕಾಲೇಜುಗಳಲ್ಲಿ 5ರೂ.ಗೆ ಬಿಸಿಯೂಟ]
ಐದು ದಿನಗಳ ಬಿಕ್ಕಟ್ಟು : ಕುಪ್ಪೇಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಕೆಗೆ ದಲಿತ ಮಹಿಳೆಯನ್ನು ನೇಮಕ ಮಾಡಿದ್ದಾರೆ ಎಂಬ ಕಾರಣಕ್ಕೆ ಐದು ದಿನದಿಂದಲೇ ಸವರ್ಣೀಯರ ಮಕ್ಕಳು ಶಾಲೆ ಬಹಿಷ್ಕರಿಸಿದ್ದರು. [ವಾರಕ್ಕೊಮ್ಮೆ ಮಕ್ಕಳಿಗೆ ರಾಗಿಮುದ್ದೆ ಭಾಗ್ಯ!]
ಡಿಡಿಪಿಐ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪೋಷಕರ ಮನವೊಲಿಸಲು ಪ್ರಯತ್ನ ನಡೆಸಿದರೂ ಅದು ಯಶಸ್ವಿಯಾಗಿಲ್ಲ. ಕೆಲವು ಎಸ್‌ಡಿಎಂಸಿ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ, ಕೆಲವು ಪೋಷಕರು ತಮ್ಮ ಮಕ್ಕಳ ವರ್ಗಾವಣೆ ಪತ್ರ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಈ ಶಾಲೆಯಲ್ಲಿ ಒಂದೂವರೆ ದಶಕದ ಹಿಂದೆಯೂ ಇಂತಹ ಸಮಸ್ಯೆ ಉಂಟಾಗಿತ್ತು. ಬಿಸಿಯೂಟ ಯೋಜನೆ ಆರಂಭವಾದಾಗ ಎಲ್ಲಾ ಕೋಮಿನವರಿಗೂ ಅಡುಗೆ ಸಹಾಯಕರ ಹುದ್ದೆ ನೀಡಲಾಗಿತ್ತು. ಆಗಲೂ ಇಂಥದೇ ಗೊಂದಲ ಏರ್ಪಟ್ಟು, ದಲಿತ ಕೋಮಿನ ಅಡುಗೆ ಸಹಾಯಕಿಗೆ ಬೇರೆ ಕೆಲಸ ಕೊಡಿಸಿ, ಸಮಸ್ಯೆ ಬಗೆಹರಿಸಲಾಗಿತ್ತು.
ಡಿ.5ಕ್ಕೆ ಸಿಎಂ ಭೇಟಿ : ವರುಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಡಿ.5ರಂದು ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮಾಡುವ ಕಾರ್ಯಕ್ರಮವಿದೆ. ಈ ಕಾರ್ಯಕ್ರಮಕ್ಕೆ ಬರುವ ಸಿಎಂ ಕುಪ್ಪೇಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಇದ್ದು, ಇದು ಇನ್ನೂ ಖಚಿತವಾಗಿಲ್ಲ.












Click it and Unblock the Notifications