ಪಟ್ಟಭದ್ರ ಶಕ್ತಿಗಳಿಂದ ಸಮಾಜ ಒಡೆಯುವ ಕೆಲಸವಾಗುತ್ತಿದೆ: ಸಿಎಂ ಸಿದ್ದರಾಮಯ್ಯ
ಮೈಸೂರು: ಸರ್ವಜನಾಂಗದ ಶಾಂತಿಯ ತೋಟದಂತೆ ಸಮಾಜ ಇರಬೇಕು ಎಂದು ರಾಷ್ಟ್ರಕವಿ ಕುವೆಂಪು ಆಶಿಸಿದ್ದರು. ಅವರ ನುಡಿ ಸಾಕಾರವಾಗಬೇಕಾದರೆ ಎಲ್ಲರೂ ಮನುಷ್ಯರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ ತಿಳಿಸಿದರು.
ಸುತ್ತೂರಿನಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವ ಅಂಗವಾಗಿ ದೇಸಿ ಆಟಗಳಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೆಲ ಪಟ್ಟಭದ್ರ ಶಕ್ತಿಗಳು ಸಮಾಜದಲ್ಲಿ ಜಾತಿಯ ವಿಷ ಬೀಜ ಬಿತ್ತಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಮನುಷ್ಯರ ನಡುವೆ ದ್ವೇಷ ಭಾವನೆ ಸರಿಯಲ್ಲ. ನಾವೆಲ್ಲರೂ ಮಾನವೀಯತೆ ಹಾಗೂ ಸಂವೇದನಾಶೀಲತೆಯನ್ನು ಮರೆಯಬಾರದು ಎಂದು ಹೇಳಿದರು.

"ಈ ಸಮಾರಂಭದ ವೇದಿಕೆಯಲ್ಲಿ ಒಕ್ಕಲಿಗರು, ಲಿಂಗಾಯತರು, ಕುರುಬನಾದ ನಾನು, ಹಿಂದುಳಿದ ವರ್ಗದವರು ಕುಳಿತಿದ್ದೇವೆ ಎಂದರೆ ಇದಕ್ಕೆ ಸಂವಿಧಾನ ಕಾರಣವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಪಟ್ಟಭದ್ರರು ಸಂವಿಧಾನವನ್ನು ಬದಲಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನಾವೆಲ್ಲರೂ ಸಂವಿಧಾನವನ್ನು ರಕ್ಷಣೆ ಮಾಡಬೇಕಿದೆ" ಎಂದು ತಿಳಿಸಿದರು.
"ಸಮಾಜದಲ್ಲಿ ಇಂದಿಗೂ ಸಮಾನತೆ ಬಂದಿಲ್ಲ ಹಾಗೂ ಮೇಲು ಕೀಳೆಂಬ ಭಾವನೆಯೂ ದೂರವಾಗಿಲ್ಲ. ಜನರಿಗೆ ಕೇವಲ ಮತ ಹಾಕುವ ಸ್ವಾತಂತ್ರ್ಯ ಬಂದರೆ ಸಾಲದು. ಬದಲಾಗಿ ಪ್ರತಿಯೊಬ್ಬರಿಗೂ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ಬಂದಾಗ ಸ್ವಾತಂತ್ರ್ಯಕ್ಕೂ ಸಾರ್ಥಕವಾಗಲಿದೆ. ಸಂಪತ್ತು ಅಧಿಕಾರ ಕೆಲವರ ಕೈಲಿ ಕೇಂದ್ರೀಕೃತವಾಗದೆ, ಸಮಾಜದಲ್ಲಿನ ಎಲ್ಲರಿಗೂ ಸಮಾನತೆ ಸಿಗುವಂತಾಗಬೇಕು" ಎಂದು ಆಶಿಸಿದರು.
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿ, ಸುತ್ತೂರು ಶ್ರೀಕ್ಷೇತ್ರ ಕೇವಲ ಧಾರ್ಮಿಕ, ಶೈಕ್ಷಣಿಕವಾಗಿ ಮಾತ್ರವಲ್ಲದೇ ಸಂಪ್ರದಾಯವನ್ನು ಉಳಿಸುವ ನಿಟ್ಟಿನಲ್ಲಿ ಕೊಡುಗೆ ನೀಡಿದ್ದು, ಅದರಂತೆ ದೇಸಿ ಆಟಗಳನ್ನು ಉಳಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಧಾರ್ಮಿಕ, ಸಾಮಾಜಿಕ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಜೊತೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸುತ್ತೂರು ಮಠ ದೇಶವೇ ಗುರುತಿಸುವ ಕೆಲಸ ಮಾಡಿದೆ. ಆ ಮೂಲಕ ಸಮಾಜದಲ್ಲಿ ಬದಲಾವಣೆ ತರುವ ಕೆಲಸವನ್ನು ಮಾಡಿದೆ, ಎಂದು ಶ್ಲಾಘಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಸ್ವಾತಂತ್ರ್ಯದ ಉದ್ದೇಶ ಕೋಮು ಸೌಹಾರ್ದ, ಸಾಮಾಜಿಕ ನ್ಯಾಯ, ಜಾತ್ಯಾತೀತ ಸಮಾಜದ ನಿರ್ಮಾಣ ಮಾಡುವುದಾಗಿದೆ. ಸಂವಿಧಾನದ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದೇವೆ. ಇದಕ್ಕೆ ಸುತ್ತೂರು ಮಠ ಒತ್ತಾಸೆಯಾಗಿ ಕೆಲಸ ಮಾಡುತ್ತಾ ಬಂದಿದೆ. ಸುತ್ತೂರು ಶ್ರೀಮಠ ಎಲ್ಲಾ ಕ್ಷೇತ್ರಗಳಿಗೂ, ಎಲ್ಲಾ ಸಮುದಾಯಗಳಿಗೂ ಆದ್ಯತೆ ನೀಡಿದೆ ಎಂದು ಹೇಳಿದರು.











Click it and Unblock the Notifications