24 ವರ್ಷದಿಂದ ಅಣ್ಣನ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕನ ಬಂಧನ!
ಮೈಸೂರು, ಮಾರ್ಚ್ 25; ಮೃತಪಟ್ಟ ಅಣ್ಣನ ಹೆಸರಿನಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿಯನ್ನು ಪಿರಿಯಾಪಟ್ಟಣ ಪೊಲೀಸರು ಬಂಧಿಸಿದ್ದಾರೆ. 24 ವರ್ಷಗಳ ಕಾಲ ಅಣ್ಣನ ಹೆಸರಿನಲ್ಲಿ ಆರೋಪಿ ಲಕ್ಷಣೇಗೌಡ ಕಾರ್ಯ ನಿರ್ವಹಣೆ ಮಾಡಿದ್ದ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಮಾರ್ಚ್ 21ರಂದು ದೂರು ದಾಖಲಾಗಿತ್ತು. ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ಅಣ್ಣನ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದ ಲಕ್ಷಣೇಗೌಡ ಬಂಧಿಸಿದ್ದಾರೆ.
ಆರೋಪಿ ಲಕ್ಷಣೇಗೌಡ ಪಿರಿಯಾಪಟ್ಟಣದ ಮದ್ದನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 1998ರಲ್ಲಿ ಶಿಕ್ಷಕರಾಗಿ ಸೇರ್ಪಡೆಗೊಂಡಿದ್ದರು. ಬಳಿಕ ವಿವಿಧ ಜಿಲ್ಲೆಗಳಲ್ಲಿಯೂ ಕೆಲಸ ಮಾಡಿದ್ದು, ಈಗ ಅಣ್ಣನ ಹೆಸರಿನಲ್ಲಿ ಕೆಲಸ ಮಾಡಿರುವುದು ಪತ್ತೆಯಾಗಿದೆ.

ಲಕ್ಷಣೇಗೌಡ ಸಹೋದರ ಲೋಕೇಶ್ ಗೌಡ ಅವರು ಶಿಕ್ಷಕ ಹುದ್ದೆಗೆ ನೇಮಕಾತಿ ಆದೇಶ ಸಿಕ್ಕಿದ ಕೆಲವೇ ದಿನಗಳಲ್ಲಿ ಮೃತಪಟ್ಟಿದ್ದರು. ಆಗ ಲಕ್ಷಣೇಗೌಡ ಅಣ್ಣನ ಹೆಸರಿನಲ್ಲಿ ಎಲ್ಲಾ ದಾಖಲೆಗಳನ್ನು ನೀಡಿ ಶಿಕ್ಷಕರಾಗಿ ನೇಮಕಗೊಂಡಿದ್ದರು.
ಪಿರಿಯಾಪಟ್ಟಣದ ಕಟ್ಟೆಮಳಲವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ ಶಿಕ್ಷಕನಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಲಕ್ಷಣೇಗೌಡ ಕುಟುಂಬದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ಲೋಕೇಶ್ ಗೌಡ ಹೆಸರಿನಲ್ಲಿ ಲಕ್ಷಣೇಗೌಡ ಕೆಲಸ ಮಾಡುತ್ತಿರುವ ವಿಚಾರ ಬಯಲಾಗಿದೆ.
ಲಕ್ಷಣೇಗೌಡ ಸಹೋದರ ಲೋಕೇಶ್ ಗೌಡ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆಗೆ ಪತ್ರಕರ್ತರೊಬ್ಬರು 2019ರಲ್ಲಿ ದೂರು ನೀಡಿದ್ದರು. ಆದರೆ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲದ ಕಾರಣ ಲೋಕಾಯುಕ್ತಕ್ಕೆ ಸಹ ದೂರು ಕೊಟ್ಟಿದ್ದರು.
ಲೋಕಾಯುಕ್ತದ ಆದೇಶದ ಹಿನ್ನಲೆಯಲ್ಲಿ ನಾಲ್ಕು ಹಂತದಲ್ಲಿ ವಿಚಾರಣೆ ನಡೆಸಿದಾಗ ಲಕ್ಷಣೇಗೌಡ ಶಿಕ್ಷಣ ಇಲಾಖೆಗೆ ನೀಡಿರುವ ವಂಶವೃಕ್ಷ ಮತ್ತು ಅಂಕಪಟ್ಟಿ ನಕಲಿ ಎಂಬುದು ಸಾಬೀತಾಗಿತ್ತು.
ಈ ಹಿನ್ನಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಮಾರ್ಚ್ 21ರಂದು ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಲಕ್ಷಣೇಗೌಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು, ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.












Click it and Unblock the Notifications