ದಸರಾ ಆನೆ ಬಲರಾಮನಿಗೆ ಗುಂಡೇಟು: ಜಮೀನು ಮಾಲೀಕನ ಬಂಧನ
ಮೈಸೂರು, ಡಿಸೆಂಬರ್ 16: ಮೈಸೂರು ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಬಲರಾಮ ಆನೆಗೆ ಗುಂಡು ಹಾರಿಸಿದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸುರೇಶ್ ಎನ್ನುವಾತ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದ ಆರೋಪಿ ಎಂದು ಗುರುತಿಸಲಾಗಿದೆ.
ಗುರುವಾರ ರಾತ್ರಿ ಪಿರಿಯಾಪಟ್ಟಣ ತಾಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪವಿರುವ ಜಮೀನಿಗೆ ಬಲರಾಮ ಹೋಗಿದ್ದು, ಆನೆಯನ್ನು ಕಂಡು ಸಿಟ್ಟಿಗೆದ್ದ ಜಮೀನು ಮಾಲೀಕ ಸುರೇಶ್ ಮನಸೋಇಚ್ಛೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಆನೆಯ ತೊಡೆ ಕಾಲು ಸೇರಿದಂತೆ ಅರ್ಧ ಭಾಗದಲ್ಲಿ ಗುಂಟೇಟು ಬಿದ್ದಿರುವ ಗಾಯಗಳು ಪತ್ತೆಯಾಗಿದೆ.

ಸದ್ಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯಾಧಿಕಾರಿ ಡಾ.ರಮೇಶ್ ಬಲರಾಮನಿಗೆ ಚಿಕಿತ್ಸೆ ನೀಡಿದ್ದು, ಆನೆ ಚೇತರಿಸಿಕೊಳ್ಳುತ್ತಿದೆ. ಇನ್ನು ಈ ಕೃತ್ಯ ಎಸಗಿದ ಆರೋಪಿಯನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಆತನ ಬಳಿ ಇದ್ದ ಒಂಟಿ ನಳಿಕೆಯ ಕೋವಿ ಹಾಗೂ ಕಾಡತೂಸುಗಳನ್ನು ಸಹ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಇನ್ನು ಈ ಘಟನೆ ಬಗ್ಗೆ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದು, "ಸಾಕಾನೆ ಶಿಬಿರದಿಂದ ಮೇಯಲು ಬಿಟ್ಟಿದ್ದ ಸಾಕಾನೆ ಬಲರಾಮನಿಗೆ ಆರೋಪಿ ಸುರೇಶ್ ಡಿಸೆಂಬರ್15 ರಂದು ಗುಂಡು ಹಾರಿಸಿದ್ದಾರೆ. ಈ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ನಾಗರಹೊಳೆ ಹುಲಿ ಯೋಜನೆ ಮುಖ್ಯಸ್ಥ ಹರ್ಷಕುಮಾರ್ ನರಗುಂದ, ಎಸಿಎಫ್ ದಯಾನಂದರವರ ಮಾರ್ಗದರ್ಶನದಲ್ಲಿ ಆರ್‌ಎಫ್‌ಓ ರತನ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಚರಣೆ ನಡೆಸಿ ಆರೋಪಿ ಸುರೇಶನನ್ನು ಬಂಧಿಸಿದ್ದಾರೆ. ಆತನ ಬಳಿ ಇದ್ದ ಒಂಟಿ ನಳಿಕೆ ಬಂದೂಕನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಡಿಸೆಂಬರ್30ರ ವರೆಗೆ ಕಸ್ಟಡಿ ಪಡೆಯಲಾಗಿದೆ . ಗಾಯಗೊಂಡಿರುವ ಬಲರಾಮನಿಗೆ ನಾಗರಹೊಳೆ ಪಶುವೈದ್ಯ ಡಾ.ರಮೇಶ್ ನೇತೃತ್ವದ ತಂಡ ಚಿಕಿತ್ಸೆ ನೀಡುತ್ತಿದ್ದಾರೆ" ಎಂದು ತಿಳಿಸಿದರು.












Click it and Unblock the Notifications