Mahisha Dasara; ಮೈಸೂರು ಅಲ್ಲ 'ಮಹಿಷೂರು'! ಮಹಿಷ ದಸರಾ ಆಚರಣಾ ಸಮಿತಿ ಆಹ್ವಾನ ಪತ್ರಿಕೆಯಲ್ಲಿ ಉಲ್ಲೇಖ
ಪ್ರತಿ ವರ್ಷ ಮೈಸೂರು ದಸರಾ ಆಚರಣೆ ಸಂದರ್ಭದಲ್ಲಿ ಮಹಿಷ ದಸರಾ ವಿವಾದ ಮುನ್ನಲೆಗೆ ಬರುತ್ತದೆ. ಈ ಬಾರಿ ಕೂಡ ಮಹಿಷ ದಸರಾ ಆಚರಣೆ ಮಾಡಲು ಮಹಿಷ ದಸರಾ ಆಚರಣಾ ಸಮಿತಿ ಮುಂದಾಗಿದ್ದು, ಆಹ್ವಾನ ಪತ್ರಿಕೆಯಲ್ಲಿ ಮೈಸೂರು ಹೆಸರನ್ನು ಮಹಿಷೂರು ಎಂದು ಮುದ್ರಿಸುವ ಮೂಲಕ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಮಹಿಷ ದಸರಾ ಆಚರಣಾ ಸಮಿತಿ ಮಹಿಷ ದಸರಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮೈಸೂರು ಬದಲಾಗಿ ಮಹಿಷೂರು ಎಂದು ಮುದ್ರಿಸಿದ್ದು, ಚಾಮುಂಡಿಬೆಟ್ಟವನ್ನು ಮಹಿಷ ಬೆಟ್ಟ ಎಂದು ಮುದ್ರಿಸಿದ್ದು ಈ ಬಗ್ಗೆ ಆಕ್ಷೇಪ ವ್ಯಕ್ತವಾಗುವ ಸಾಧ್ಯತೆ ಇದೆ.

ಸೆಪ್ಟೆಂಬರ್ 29ರಂದು ಮಹಿಷ ದಸರಾ ನಡೆಸಲು ಸಮಿತಿ ತೀರ್ಮಾನ ಮಾಡಿದ್ದು, ಇದಕ್ಕಾಗಿ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ ಹಂಚಿಕೆ ಮಾಡಿದೆ. ಮಹಿಷಾಸುರನ ಬಗ್ಗೆ, ಮೈಸೂರು ಇತಿಹಾಸದ ಬಗ್ಗೆ ಮಾಹಿತಿ ಕೊಡಲಾಗಿದ್ದು, ರಾಜಕೀಯ ಮಾಡುವ ಮೂಲಕ ಮಹಿಷ ದಸರಾದ ಉದ್ದೇಶವನ್ನು ಹಾಳು ಮಾಡಲಾಗುತ್ತಿದೆ ಎಂದು ಸಂಘಟಕರು ಹೇಳಿದ್ದಾರೆ.
ಕ್ರಿ.ಪೂ. 3ನೇ ಶತಮಾನದಲ್ಲಿ ಮಹಿಷಮಂಡಲದಿಂದ ವಿಂದ್ಯಾಪರ್ವತ ಶ್ರೇಣಿಯವರೆಗೆ ಮಹಿಷ ಸಾಮ್ರಾಜ್ಯವನ್ನು ಕಟ್ಟಿದವನೇ ಮಹಿಷಾಸುರ. ವೈದಿಕರ ಇತಿಹಾಸಗಳು ದಿನಾಂಕವಿಲ್ಲದ ಇತಿಹಾಸವಾಗಿದ್ದು, ಅದರಲ್ಲಿ ಹೆಚ್ಚು ಕಟ್ಟುಕತೆಗಳಿವೆ. ಚಾಮುಂಡಿ ಬೆಟ್ಟದ ಕತೆಯಲ್ಲೂ ಇದನ್ನು ಕಾಣಬಹುದಾಗಿದ್ದು, ಮಹಿಷನ ಕಥೆ, ಚಾಮುಂಡಿಯ ಕತೆಯಲ್ಲ ಎಂದು ಸಮರ್ಥನೆ ನೀಡಲಾಗಿದೆ. ಮಹಾಬಲನಾದ ಮಹಿಷನನ್ನು ಸೋಲಿಸಲು ವೈದಿಕರ ದೇವರಿಂದ ಆಗಲಿಲ್ಲ, ಮಹಿಷನ ಯುದ್ಧೋನ್ಮಾದ ಕಥೆಗಳು ಪುರಾಣಗಳಲ್ಲಿವೆ ಓದಿ ತಿಳಿಯಿರಿ ಎಂದು ಮನವಿ ಮಾಡಿದ್ದಾರೆ.
ಜಾತಿ ಮತಗಳನ್ನು ಮೀರಿ ಮಹಾಜನತೆ ಮೈಸೂರಿಗೆ ಗೌರವ ಸಮರ್ಪಿಸಲು ಮುಂದಾದರೆ ಅದಕ್ಕೆ ಜಾತಿ ಬಣ್ಣ ಕಟ್ಟಿ ಮೂಲ ನಿವಾಸಿಗಳ ವಿರುದ್ಧ ಇತರೆ ಜಾತಿಗಳನ್ನು ಎತ್ತಿಕಟ್ಟಲು ಹುನ್ನಾರ ನಡೆಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲಾಗುತ್ತಿದೆ. ಜಾತಿಗಳೇ ಇಲ್ಲದ ಮಹಿಷನ ಕಾಲದಲ್ಲಿ ಜಾತಿ ಹೇಗೆ ಬಂದಿತು ಎಂದು ರಾಜಕಾರಣಿಗಳನ್ನು ಪ್ರಶ್ನಿಸುವಂತೆ ಮನವಿ ಮಾಡಲಾಗಿದೆ.
ಸೆಪ್ಟೆಂಬರ್ 29ರಂದು ಮಹಿಷ ದಸರಾ ನಡೆಯಲಿದ್ದು, ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನಿಗೆ ಪುಷ್ಪಾರ್ಷನೆ ಮಾಡಿ ಬಳಿಕ ನಗರದ ಪುರಭವನದಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.
ಪ್ರತಾಪ್ ಸಿಂಹ ಸವಾಲು
ಚಾಮುಂಡಿ ಬೆಟ್ಟದಲ್ಲಿ ಯಾವುದೇ ಕಾರಣಕ್ಕೂ ಮಹಿಸ ದಸರಾ ಆಚರಣೆಗೆ ಅವಕಾಶ ನೀಡಬಾರದು, ಅವರು ಮಹಿಷ ದಸರಾ ಆಚರಣೆ ಮಾಡಿದರೆ, ನಾವು ಚಾಮುಂಡಿ ಚಲೋ ಮಾಡಬೇಕಾಗುತ್ತದೆ. ಮಹಿಷ ಭಕ್ತರ ಕೈ ಮೇಲಾಗುತ್ತದೋ, ಚಾಮುಂಡಿ ಭಕ್ತರ ಕೈ ಮೇಲಾಗುತ್ತದೋ ನೋಡಿಯೇ ಬಿಡೋಣ ಎಂದು ಮಹಿಷ ದಸರಾ ಆಚರಣಾ ಸಮಿತಿಗೆ ಸವಾಲು ಹಾಕಿದ್ದಾರೆ.












Click it and Unblock the Notifications