Dog's Prediction Came True: ಮೈಸೂರಿನಲ್ಲಿ ನಿಜವಾಯ್ತು ಶ್ವಾನ ನುಡಿದ ಭವಿಷ್ಯ!
ಮೈಸೂರು ಜೂನ್ 4: ಮೈಸೂರು ಲೋಕಸಭಾ ಚುನಾವಣೆ ಫಲಿತಾಂಶ ಬಹುತೇಕ ಖಚಿತವಾಗಿದ್ದು, ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಗೆಲುವಿನ ನಗೆ ಬೀರಿದ್ದಾರೆ. ಹೀಗಾಗಿ ಮೈಸೂರಿನಲ್ಲಿ ಶ್ವಾನ ನುಡಿದ ಭವಿಷ್ಯ ನಿಜವಾಗಿದೆ.
ಮೈಸೂರು -ಕೊಡಗು ಈ ಬಾರಿ ಇಡೀ ರಾಜ್ಯದಲ್ಲಿ ಅತ್ಯಂತ ಹೆಚ್ಚು ಗಮನ ಸೆಳೆದ ಕ್ಷೇತ್ರಗಳಲ್ಲಿ ಒಂದಾಗಿದೆ. ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡಿರುವುದು ಇದಕ್ಕೆ ಮೊದಲನೇ ಕಾರಣವಾದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ಎಂಬುದು ಮತ್ತೊಂದು ಕಾರಣ.

ಮೈಸೂರಿನಲ್ಲಿ ಒಟ್ಟು 18 ಅಭ್ಯರ್ಥಿಗಳಿದ್ದು ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರು ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ ಅವರ ನಡುವೆ ತೀವ್ರ ಪೈಪೋಟಿ ಇತ್ತು. ಆದರೆ ಈ ಜಿದ್ದಾಜಿದ್ದಿನಲ್ಲಿ ಯದುವೀರ್ ಒಡೆಯರ್ ಗೆಲುವು ಬಹುತೇಕ ಖಚಿತವಾಗಿದೆ.
ಮೈಸೂರಿನ ಕೆ.ಟಿ.ಸ್ಟ್ರೀಟ್‌ನ ಕಾಲಭೈರವೇಶ್ವರ ದೇಗುಲದಲ್ಲಿ ಭೈರವ ಎಂಬ ಎರಡು ವರ್ಷದ ಶ್ವಾನ ಮೈಸೂರಿನಲ್ಲಿ ಯಾರು ಗೆಲ್ಲುತ್ತಾರೆಂದು ಭವಿಷ್ಯ ನುಡಿದಿತ್ತು. ಗೋಪಿನಾಥ್ ಎಂಬುವವರು ಸಾಕಿರುವ ಈ ಶ್ವಾನ ಈ ಬಾರಿ ನರೇಂದ್ರ ಮೋದಿಯವರು ಗೆಲ್ಲುತ್ತಾರೆಂದು ಭವಿಷ್ಯ ಹೇಳಿತ್ತು. ಸದ್ಯ ಶ್ವಾನ ನುಡಿದಂತೆ ರಾಜಕೀಯ ಭವಿಷ್ಯ ಕಾಣಿಸುತ್ತಿದೆ.

ಹೌದು.. ಶ್ವಾನದ ಮುಂದೆ ಪ್ರಧಾನಿ ನರೇಂದ್ರ ಮೊದಿ ಹಾಗೂ ರಾಹುಲ್ ಗಾಂಧಿ ಅವರ ಫೋಟೋ ಇಟ್ಟಾಗ, ಶ್ವಾನ ಮೋದಿ ಅವರ ಚಿತ್ರವನ್ನು ಆಯ್ಕೆ ಮಾಡಿ ಫಲಿತಾಂಶವನ್ನು ಹೇಳಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಅಲ್ಲದೆ ಶ್ವಾನದ ಮುಂದೆ ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಎಂ ಲಕ್ಷ್ಮಣ್ ಹಾಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಭಾವಚಿತ್ರ ಇಟ್ಟಾಗ ಶ್ವಾನ ಯದುವೀರ್ ಅವರ ಚಿತ್ರವನ್ನು ತೋರಿಸಿತ್ತು. ಈಗ ಶ್ವಾನ ನುಡಿದ ಭವಿಷ್ಯ ನಿಜವಾಗಿದೆ. ಇದರಿಂದ ಶ್ವಾನದ ಮೇಲೆ ನಂಬಿಕೆ ಹೆಚ್ಚಾಗಿದೆ.
ಈ ಶ್ವಾನ ನುಡಿದ ಭವಿಷ್ಯವನ್ನು ದೇವರಾದ ಕಾಲಭೈರವೇಶ್ವರನೇ ಹೇಳಿದ್ದು ಎಂದು ಇಲ್ಲಿನ ಜನ ನಂಬಿದ್ದಾರೆ. ಶ್ವಾನದ ಭವಿಷ್ಯವನ್ನು ಇಲ್ಲಿನ ಸ್ಥಳಿಯರು ನಂಬುತ್ತಾರೆ. ಶ್ವಾನಕ್ಕೆ ಪೂಜೆ ಸಲ್ಲಿಸುತ್ತಾರೆ. ಸದ್ಯ ಶ್ವಾನ ನುಡಿದ ಭವಿಷ್ಯ ನಿಜವಾಗಿದ್ದು ಭಕ್ತರು ಕಾಲಭೈರವೇಶ್ವರನ ಮೇಲೆ ಭಕ್ತಿ ಅಧಿಕವಾಗಿದೆ. ಜೊತೆಗೆ ಶ್ವಾನ ನುಡಿಯುವ ಭವಿಷ್ಯದ ಮೇಲೂ ನಂಬಿಕೆ ಹೆಚ್ಚಾಗಿದೆ.












Click it and Unblock the Notifications