ಲೋಕಸಭಾ ಚುನಾವಣೆ: ಸುಗಮವಾಯ್ತು ಸಂಸದ ಪ್ರತಾಪ್ ಸಿಂಹ ಹಾದಿ, ಕಾರಣವೇನು..?
ಮೈಸೂರು, ಫೆಬ್ರವರಿ 29: ಜೆಡಿಎಸ್ ನಾಯಕ ಮಾಜಿ ಸಚಿವ ಸಾ.ರಾ. ಮಹೇಶ್ ಕೂಡ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂಬ ವದಂತಿಗಳು ಹರಡಿದ್ದವು ಆದರೀಗ ಅವರು ನಾನು ಆಕಾಂಕ್ಷಿ ಅಲ್ಲ ಎನ್ನುವುದರ ಮೂಲಕ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರ ಹಾದಿ ಸುಗಮವಾಗಿದ್ದು, ಅವರಲ್ಲಿ ಗೆಲುವಿನ ಆತ್ಮವಿಶ್ವಾಸವನ್ನು ಇಮ್ಮಡಿಸಿದೆ.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಸಾ.ರಾ.ಮಹೇಶ್ ಅವರು ಕೂಡ ಆಕಾಂಕ್ಷಿ ಹೀಗಾಗಿ ಪ್ರತಾಪ್ ಸಿಂಹ ಮತ್ತು ಸಾ,ರಾ.ಮಹೇಶ್ ನಡುವೆ ಟಿಕೆಟ್ ಗಾಗಿ ಪೈಪೋಟಿ ಶುರುವಾಗಲಿದೆ. ಜೆಡಿಎಸ್ ಮೈಸೂರು ಕೊಡಗು ಕ್ಷೇತ್ರಕ್ಕಾಗಿ ಪಟ್ಟು ಹಿಡಿದಿದೆ ಎಂಬಂತಹ ಮಾತುಗಳು ಪುಂಖಾನುಪುಂಖವಾಗಿ ಹೊರ ಬಂದಿದ್ದವು. ಇದು ರಾಜಕೀಯದಲ್ಲಿ ಹಲವು ರೀತಿಯ ಚರ್ಚೆಗಳನ್ನು ಹುಟ್ಟು ಹಾಕಿತ್ತು.

ಕಾಂಗ್ರೆಸ್ ಗೆ ಇದೊಂದು ಅಸ್ತ್ರವೂ ಆಗಿತ್ತು. ಜೆಡಿಎಸ್ ಮತ್ತು ಬಿಜೆಪಿ ನಡುವೆ ಟಿಕೆಟ್ ಗಾಗಿ ಸಂಘರ್ಷ ಏರ್ಪಟ್ಟರೆ ಅದರ ಲಾಭ ಪಡೆದುಕೊಳ್ಳಲು ತಯಾರಿ ಆರಂಭವಾಗಿದ್ದವು. ಸಾ.ರಾ,ಮಹೇಶ್ ಅವರು ಕಣಕ್ಕಿಳಿಯುವ ಸುದ್ದಿ ಹರಿದಾಡುತ್ತಿದ್ದರೂ ಅದರ ಬಗ್ಗೆ ಅವರು ಯಾವುದೇ ಸ್ಪಷ್ಟನೆ ನೀಡುವ ಪ್ರಯತ್ನವನ್ನು ಮಾಡಿರಲಿಲ್ಲ. ಹೀಗಾಗಿ ಅದಕ್ಕೆ ರೆಕ್ಕೆಪುಕ್ಕಗಳು ಕೂಡ ಹುಟ್ಟಿಕೊಂಡು ಹಲವು ರೀತಿಯ ವಿಶ್ಲೇಷಣೆಗಳು ನಡೆದಿದ್ದವು. ಈ ನಡುವೆ ಪ್ರತಾಪ್ ಸಿಂಹ ಮಾತ್ರ ಆ ರೀತಿಯ ಯಾವುದೇ ಮಾತುಕತೆಗಳು ನಡೆದಿಲ್ಲ. ಈ ಬಾರಿಯೂ ನಾನೇ ಅಭ್ಯರ್ಥಿ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಲೇ ಇದ್ದರು.
ಸಾ.ರಾ.ಮಹೇಶ್ ನೀಡಿದ ಸ್ಪಷ್ಟನೆ ಏನು?
ಇದೆಲ್ಲದರ ಮಧ್ಯೆ ಸಂಸದ ಪ್ರತಾಪ್ ಸಿಂಹ ವಿರೋಧಿಗಳು ಮಾತ್ರ ಟಿಕೆಟ್ ಸಾ.ರಾ.ಮಹೇಶ್ ಅವರಿಗೆ ಸಿಕ್ಕೇ ಬಿಡ್ತು ಎಂಬಂತೆ ಬಿಂಬಿಸುತ್ತಲೇ ಹೋದರು. ಇದರಿಂದ ಎಲ್ಲೋ ಒಂದು ಕಡೆ ಮೈಸೂರಿನಲ್ಲಿ ಟಿಕೆಟ್ ಗಾಗಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಸಂಘರ್ಷವಾಗಲಿದ್ದು, ಇದರ ಸಂಪೂರ್ಣ ಲಾಭ ಕಾಂಗ್ರೆಸ್ಸಿಗೆ ಆಗಲಿದೆ ಎಂಬ ಸುದ್ದಿಯೂ ಹರಡಲಾರಂಭಿಸಿತ್ತು. ಆದರೀಗ ಎಲ್ಲ ಊಹಾಪೋಹಗಳಿಗೆ ಸ್ವತಃ ಸಾ.ರಾ.ಮಹೇಶ್ ಅವರೇ ಸ್ಪಷ್ಟನೆ ನೀಡುವ ಮೂಲಕ ನಾನು ಆಕಾಂಕ್ಷಿನೇ ಅಲ್ಲ ಎಂಬ ಹೇಳಿಕೆ ನೀಡಿದ್ದಾರೆ.

ಹಾಗೆನೋಡಿದರೆ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಗೆಲುವಿನ ನಾಗಾಲೋಟದಲ್ಲಿ ಸಾಗುತ್ತಿದ್ದ ಜೆಡಿಎಸ್ ನಾಯಕ ಸಾ.ರಾ.ಮಹೇಶ್ ಅವರು 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಬೇಕಾಗಿ ಬಂತು. ಅದು ಅವರಿಗೆ ನೀಡಿದ ಆಘಾತ ಎಂದರೂ ತಪ್ಪಾಗಲಾರದು. ಸದಾ ಗೆಲುವಿನ ರುಚಿಯನ್ನೇ ಅನುಭವಿಸಿದ್ದ ಅವರಿಗೆ ಸೋಲಿನ ಆಘಾತದಿಂದ ಚೇತರಿಸಿಕೊಳ್ಳುವುದು ಕಷ್ಟವಾಗಿದೆ ಎಂಬುದು. ಅವರ ಮಾತನ್ನು ಗಮನಿಸಿದರೆ ಸುಲಭವಾಗಿ ಅರ್ಥವಾಗಿ ಬಿಡುತ್ತದೆ. ಸದ್ಯಕ್ಕೆ ಅವರ ಮಾತುಗಳು ಚುನಾವಣೆಯಿಂದಲೇ ದೂರ ಸರಿಯುತ್ತಾರೆಯೇನೋ ಎಂಬಂತಿದೆ.
ಆರೋಗ್ಯ, ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ
ಇನ್ನು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಸಾ.ರಾ.ಮಹೇಶ್ ಏನು ಹೇಳಿದ್ದಾರೆ ಎಂಬುದನ್ನು ನೋಡಿದ್ದೇ ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಾನು ಖಂಡಿತವಾಗಿಯೂ ಟಿಕೆಟ್ ಆಕಾಂಕ್ಷಿ ಅಲ್ಲ. ನನ್ನ ಮಾನಸಿಕ, ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ. ನನಗೆ ಕಳೆದ 35 ವರ್ಷಗಳಿಂದಲೂ ಬಿಜೆಪಿ ಜೊತೆ ಒಡನಾಟವಿದೆ. ಆದರೆ ಚುನಾವಣೆ ವಿಚಾರವಾಗಿ ನಾನು ಯಾರನ್ನೂ ಭೇಟಿ ಮಾಡಿಲ್ಲ ಹಾಗೂ ಅದರ ಕುರಿತಂತೆ ಯಾವ ಚರ್ಚೆಯೂ ನಡೆದಿಲ್ಲ ಎಂದಿದ್ದಾರೆ.

ಸದ್ಯಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಸಂಸದ ಪ್ರತಾಪ್ ಸಿಂಹ ಅವರೇ ಕಣಕ್ಕಿಳಿಯಲಿದ್ದಾರೆ. ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವುದೊಂದೇ ನಮ್ಮ ಗುರಿಯಾಗಿದೆ. ಆದರೆ ನನಗೆ ಯಾವ ಚುನಾವಣೆಗೂ ಸ್ಪರ್ಧೆ ಮಾಡುವ ಆಸಕ್ತಿ ಇಲ್ಲ. ಹೀಗಾಗಿ ಸದ್ಯಕ್ಕೆ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿರುವ ಎಲ್ಲ ಚರ್ಚೆಗಳು ಸತ್ಯಕ್ಕೆ ದೂರವಾದವು. ಕುಮಾರಸ್ವಾಮಿ ಅವರು ನಮ್ಮ ನಾಯಕರಾಗಿದ್ದು, ಅವರು ಈ ಬಗ್ಗೆ ಏನು ನಿರ್ಧಾರ ಮಾಡುತ್ತಾರೆ ಗೊತ್ತಿಲ್ಲ. ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿದ್ದರೂ, ಚುನಾವಣೆ ವಿಚಾರ ಎಲ್ಲೂ ಪ್ರಸ್ತಾಪ ಮಾಡಿಲ್ಲ ಎಂದ ಅವರು, ಈ ಕುರಿತು ಮಾಧ್ಯಮಗಳಲ್ಲಿ ಬರುತ್ತಿರುವುದು ಊಹಾಪೋಹಗಳಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರತಾಪ್ ಸಿಂಹಗೆ ಹೆಚ್ಚಿದ ಆತ್ಮವಿಶ್ವಾಸ
ಸಾ.ರಾ.ಮಹೇಶ್ ಅವರು ಮಾಧ್ಯಮಗಳ ಮುಂದೆ ಬಂದು ಈ ಹೇಳಿಕೆ ನೀಡಿದ ಮೇಲೆ ಜೆಡಿಎಸ್ ಮೈಸೂರು ಕೊಡಗು ಕ್ಷೇತ್ರದ ಮೇಲೆ ಕಣ್ಣಿಟ್ಟಿಲ್ಲ ಎಂಬುದು ಮನದಟ್ಟಾಗಿದೆ. ಅಷ್ಟೇ ಅಲ್ಲದೆ ಮೈತ್ರಿ ನಾಯಕರು ಹಾಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಗೆಲ್ಲಿಸಲು ಪಣತೊಡಲಿದ್ದಾರೆ ಎಂಬುದು ಗೊತ್ತಾಗಿದೆ. ಈ ಬಾರಿ ಜೆಡಿಎಸ್‌ನ ಮುಖಂಡರಾದ ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ, ಜಿ,ಟಿ.ದೇವೇಗೌಡ ಅವರ ಪುತ್ರ ಜಿ.ಡಿ.ಹರೀಶ್ ಗೌಡ ಹೀಗೆ ಎಲ್ಲರ ಬೆಂಬಲ ಪ್ರತಾಪ್ ಸಿಂಹ ಅವರ ಮೇಲಿರುವುದರಿಂದ ಗೆಲುವು ನನ್ನದೇ ಎಂಬ ಆತ್ಮವಿಶ್ವಾಸ ಸಂಸದ ಪ್ರತಾಪ್ ಸಿಂಹರಲ್ಲಿ ಹೆಚ್ಚಾಗಿದೆ.
ಏನೇ ಹೇಳಿದರೂ ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೊಳಪಡುವ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಿದೆ. ಹೀಗಾಗಿ ಕಾಂಗ್ರೆಸ್ ಕಣಕ್ಕೆ ಯಾರನ್ನು ಇಳಿಸುತ್ತದೆ ಎನ್ನುವುದರ ಮೇಲೆ ರಾಜಕೀಯ ಜಿದ್ದಾಜಿದ್ದಿಗೆ ವೇಗಸಿಗಲಿದೆ. ಜತೆಗೆ ಮತದಾರರು ರಾಜ್ಯದ ಸಿಎಂ ಸಿದ್ದರಾಮಯ್ಯ ಅವರ ಕಾರ್ಯ ವೈಖರಿ ನೋಡಿ ಮತಹಾಕುತ್ತಾರೋ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಅಭಿಲಾಷೆಯಿಂದ ಮತಹಾಕುತ್ತಾರೋ? ಎಂಬುದರ ಮೇಲೆ ಅಭ್ಯರ್ಥಿಗಳ ಗೆಲುವು ತೀರ್ಮಾನವಾಗುವುದಂತು ನಿಜ. ಏನೆಲ್ಲ ರಾಜಕೀಯ ಬೆಳವಣಿಗೆಯಾಗುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ.
-
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
ಬೆಂಗಳೂರು ಬಂಗಲೆ ವಿವಾದ: ರಾಜೀವ್ ಚಂದ್ರಶೇಖರ್ ನಾಮಪತ್ರ ಅಂಗೀಕರಿಸಿದ ಚುನಾವಣಾ ಆಯೋಗ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ











Click it and Unblock the Notifications