Lok Sabha Election 2024: ಮೈಸೂರು ಲೋಕ ಅಖಾಡದಲ್ಲಿ ಯದುವೀರ್ ಮಿಂಚಿನ ಸಂಚಾರ!
ಮೈಸೂರು, ಮಾರ್ಚ್ 16: ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ರಾಜಕೀಯ ಚಿತ್ರಣ ಬದಲಾಗುವ ಎಲ್ಲ ಲಕ್ಷಣಗಳು ಎದ್ದು ಕಾಣಿಸುತ್ತಿವೆ. ಕಳೆದ ಎರಡು ಅವಧಿಯಿಂದ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿ ರಾಜಕೀಯವಾಗಿ ತನ್ನದೇ ಛಾಪು ಮೂಡಿಸಿದ್ದ ಪ್ರತಾಪ್ ಸಿಂಹ ಅವರನ್ನು ಈ ಬಾರಿ ಕೈಬಿಟ್ಟು ರಾಜವಂಶಸ್ಥ ಯದುವೀರ್‌ಗೆ ಟಿಕೆಟ್ ನೀಡಲಾಗಿದೆ. ಆ ಮೂಲಕ ಚುನಾವಣೆಗೆ ಮುನ್ನವೇ ಬಿಜೆಪಿ ವರಿಷ್ಟರು ಕ್ಷೇತ್ರದ ಜನರನ್ನು ಅಚ್ಚರಿಗೊಳಿಸಿದ್ದಾರೆ. ಆದರೆ ಇದೆಲ್ಲದರ ನಡುವೆ ರಾಜವಂಶಸ್ಥ ಯದುವೀರ್ ಅವರ ಈಗಿನ ನಡೆ ನೋಡಿದರೆ ಅವರು ರಾಜಕೀಯಕ್ಕೆ ಬರಲು ಈ ಹಿಂದೆಯೇ ತಯಾರಿ ಮಾಡಿಕೊಂಡಿದ್ದರು ಎನ್ನುವುದು ಗೊತ್ತಾಗುತ್ತಿದೆ.
ಈ ಬಾರಿ ಪ್ರತಾಪ್ ಸಿಂಹ ಮೂರನೇ ಬಾರಿಗೆ ಗೆದ್ದು ಕಾಂಗ್ರೆಸ್ ನಾಯಕರಿಗೆ ಶಾಕ್ ಕೊಡುತ್ತಾರೆಂದು ಬಹಳಷ್ಟು ಜನ ನಂಬಿದ್ದರು. ಆದರೆ ಇಲ್ಲಿ ಶಾಕ್ ಆಗಿರುವುದು ಕಾಂಗ್ರೆಸ್ ನಾಯಕರಿಗಲ್ಲ ಹಾಲಿ ಸಂಸದ ಪ್ರತಾಪ್ ಸಿಂಹರಿಗೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ರಾಜಕೀಯದಲ್ಲಿ ಟಿಕೆಟ್ ಸಿಕ್ಕಿ ಗೆಲ್ಲುವ ತನಕವೂ ಯುವಕರಿಗೆ, ಹೊಸಬರಿಗೆ ಆದ್ಯತೆ ನೀಡಬೇಕೆಂದು ಪುಂಖಾನುಪುಂಖವಾಗಿ ಎಲ್ಲರೂ ಮಾತನಾಡುತ್ತಾರೆ. ಆದರೆ ಒಮ್ಮೆ ಆರಿಸಿ ಬಂದ ಬಳಿಕ ಐದು ವರ್ಷ ರಾಜಕೀಯ ಸೇವೆ ಮಾಡಿದ್ದು ಸಾಕು, ಕೈಲಾದಷ್ಟು ಕೆಲಸ ಮಾಡಿದ್ದೇನೆ. ಮುಂದೆ ಬೇರೆಯವರಿಗೆ ಅವಕಾಶ ನೀಡೋಣ ಎಂದು ಯಾರೂ ಹೇಳುವುದಿಲ್ಲ.

ಒಮ್ಮೆ ಅಧಿಕಾರದ ಗದ್ದುಗೆ ಏರಿದ ಬಳಿಕ ಇನ್ನೊಂದು ಅವಧಿಗೂ ನಾನೇ ಆಗಬೇಕೆಂದು ಬಯಸುವವರೇ ಹೆಚ್ಚು. ಅದು ಸಂಸದ ಪ್ರತಾಪ್ ಸಿಂಹರಿಗೂ ಅನ್ವಯಿಸದಿರದು. 2014ರಲ್ಲಿ ಇಡೀ ಭಾರತ ಮೋದಿ ಅಲೆಯಲ್ಲಿ ತೇಲುತ್ತಿತ್ತು. ಜತೆಗೆ ದೇಶದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದ್ದ ಕಾಂಗ್ರೆಸ್ ನ್ನು ಅಧಿಕಾರದಿಂದ ಕಿತ್ತೊಗೆಯಲು ಜನ ಕೂಡ ಸಜ್ಜಾಗಿದ್ದರು. ಹೀಗಾಗಿ ಬಿಜೆಪಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಬೆಂಬಲಿಸಿದ್ದರು. ಆದ್ದರಿಂದ ದೇಶ ಮಾತ್ರವಲ್ಲದೆ ಮೈಸೂರು ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್ ನ್ನು ಬದಿಗೆ ಸರಿಸಿ ಬಿಜೆಪಿಯನ್ನು ಮತದಾರರು ಗೆಲ್ಲಿಸಿದ್ದರು.
ಎಚ್.ವಿಶ್ವನಾಥ್ ರನ್ನು ಸೋಲಿಸಿದ ಪ್ರತಾಪ್ ಸಿಂಹ
ಅವತ್ತು ಮೈಸೂರು ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಹಾಲಿ ಸಂಸದರಾಗಿದ್ದ ಎಚ್.ವಿಶ್ವನಾಥ್ ಅವರು ಸ್ಪರ್ಧಿಸಿದ್ದರೆ ಅವರಿಗೆ ಎದುರಾಳಿಯಾಗಿ ಪತ್ರಕರ್ತರಾಗಿದ್ದ ಪ್ರತಾಪ್ ಸಿಂಹ ಅವರನ್ನು ತಂದು ನಿಲ್ಲಿಸಲಾಗಿತ್ತು. ರಾಜಕೀಯದ ಗಂಧಗಾಳಿ ಗೊತ್ತಿಲ್ಲದ ಪ್ರತಾಪ್ ಸಿಂಹ ಅನುಭವಿ ರಾಜಕಾರಣಿ ಎಚ್.ವಿಶ್ವನಾಥ್ ಅವರನ್ನು ಸೋಲಿಸಿ ವಿಜಯದ ಪತಾಕೆ ಹಾರಿಸುವುದರೊಂದಿಗೆ ಮೊದಲ ಬಾರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದರೊಂದಿಗೆ ಸಂಸತ್ತನ್ನು ಪ್ರವೇಶಿಸಿದ್ದರು.

ಅಲ್ಲಿ ತನಕ ಮೈಸೂರಿನಲ್ಲಿದ್ದುಕೊಂಡು ಕಾಂಗ್ರೆಸ್ ನ್ನು ಎದುರಿಸಿಕೊಂಡು ಬರುತ್ತಿದ್ದ ವಿಜಯಶಂಕರ್ ಅವರನ್ನು ಹಾಸನದಲ್ಲಿ ಹೆಚ್.ಡಿ.ದೇವೇಗೌಡರ ವಿರುದ್ಧ ಕಣಕ್ಕಿಳಿಸಿ ಅವರು ಸೋಲು ಕಾಣುವಂತಾಯಿತು. ಆ ನಂತರ ಪಕ್ಷದ ನಡೆಗೆ ಬೇಸರಗೊಂಡ ವಿಜಯಶಂಕರ ಅವರು ಕಾಂಗ್ರೆಸ್ ನತ್ತ ಮುಖ ಮಾಡಿದ್ದರಲ್ಲದೆ, ಕಳೆದ 2019ರ ಚುನಾವಣೆಯಲ್ಲಿ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಕಂಡರು. ಈ ಬಾರಿ ಪ್ರತಾಪ್ ಸಿಂಹ ಹ್ಯಾಟ್ರಿಕ್ ಗೆಲುವು ಸಾಧಿಸುತ್ತಾರೆಂದು ಎಲ್ಲರೂ ನಂಬಿದ್ದರು.
ರಾಜಕೀಯದಲ್ಲಿ ಏನೂ ಬೇಕಾದರೂ ಸಾಧ್ಯ
ರಾಜಕೀಯದಲ್ಲಿ ಏನೂ ಬೇಕಾದರೂ ಆಗಬಹುದು ಎಂಬುದು ಇಲ್ಲಿ ನಿಜವಾಗಿದೆ. ಪ್ರತಾಪ್ ಸಿಂಹರಿಗೆ ಬೇರೆ ಪಕ್ಷಗಳಲ್ಲಿ ವಿರೋಧಿಗಳು ಇದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸ್ವಪಕ್ಷ ಬಿಜೆಪಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಹಲವು ನಾಯಕರು ವಿರೋಧಿಗಳಾಗಿದ್ದಾರೆ. ಅವರೆಲ್ಲವೂ 2023ರ ವಿಧಾನಸಭಾ ಚುನಾವಣೆ ಬಳಿಕ ಮೌನವಾಗಿದ್ದರಾದರೂ ಪ್ರತಾಪ್ ಸಿಂಹಗೆ ಟಿಕೆಟ್ ಸಿಕ್ಕಿಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಆಕ್ಟೀವ್ ಮೂಡ್ ಗೆ ಬಂದಿದ್ದಾರೆ. ಅವರೆಲ್ಲರೂ ಈಗ ಯದುವೀರ್ ಹೆಗಲಿಗೆ ನಿಂತಿದ್ದಾರೆ. ಜತೆಗೆ ಅಭ್ಯರ್ಥಿ ಯದುವೀರ್ ಕೂಡ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಟಿಕೆಟ್ ಘೋಷಣೆಗೆ ಮುನ್ನ ಪ್ರತಾಪ್ ಸಿಂಹ ಪರೋಕ್ಷವಾಗಿ ಏನೆಲ್ಲ ಟಾಂಗ್ ನೀಡಿದ್ದರೋ ಅದಕ್ಕೆಲ್ಲ ತಿರುಗೇಟು ನೀಡುವ ಕೆಲಸಕ್ಕೆ ಮುಂದಾಗಿದ್ದಾರೆ. ಸದ್ಯ ಮೈಸೂರು ಮತ್ತು ಕೊಡಗು ಎರಡು ಕಡೆಗಳಲ್ಲಿ ಮಿಂಚಿನ ಸಂಚಾರ ನಡೆಸುತ್ತಿರುವ ಅವರು ಎಲ್ಲ ನಾಯಕರ ಮನೆ ಬಾಗಿಲು ತಟ್ಟಿ ಅವರ ಬೆಂಬಲ ಕೇಳುತ್ತಿದ್ದಾರಲ್ಲದೆ, ಸಲಹೆ ಸೂಚನೆಗಳನ್ನು ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಸಿಂಹಾಸನದಲ್ಲಿ ಕೂರುವುದು ಮಾತ್ರವಲ್ಲ ರಸ್ತೆ ಬದಿಯ ಟೀ ಅಂಗಡಿಯ ಪ್ಲಾಸ್ಟಿಕ್ ಕುರ್ಚಿ ಮೇಲೆ ಕುಳಿತು ಟೀ ಸವಿಯುವುದು ಗೊತ್ತಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ರಾಜಕೀಯಕ್ಕೆ ಸಿದ್ಧರಾದ ರಾಜವಂಶಸ್ಥ ಯದುವೀರ್
ಕೊಡಗಿನಲ್ಲಿ ಸುತ್ತಾಡಿ ಬಂದಿರುವ ಯದುವೀರ್ ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಅಪ್ಪಚ್ಚುರಂಜನ್ ಸೇರಿದಂತೆ ಹಲವು ನಾಯಕರನ್ನು ಭೇಟಿ ಸಭೆ ನಡೆಸಿದ್ದಾರೆ. ಈ ವೇಳೆ ಪ್ರತಾಪ್ ಸಿಂಹ ಅವರ ಕೆಲವು ಬೆಂಬಲಿಗರನ್ನು ಹೊರತುಪಡಿಸಿ ಉಳಿದಂತೆ ಬಹುತೇಕ ನಾಯಕರು ಹಾಜರಿದ್ದರು ಎಂಬುದು ವಿಶೇಷವಾಗಿದೆ. ಟಿಕೆಟ್ ಘೋಷಣೆಯಾದಲ್ಲಿಂದ ಇಲ್ಲಿಂದ ಅರಮನೆಯಿಂದ ಹೊರ ಬಂದು ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ನಡುವೆ ಬೆರೆಯುತ್ತಿರುವ ಯದುವೀರ್ ಅವರನ್ನು ಗಮನಿಸಿದರೆ ಅವರು ಬಹಳ ಸಮಯದಿಂದಲೇ ರಾಜಕೀಯಕ್ಕೆ ಬೇಕಾದ ಎಲ್ಲ ರೀತಿಯ ಮಾನಸಿಕ ಸಿದ್ಧತೆಗಳನ್ನು ಮಾಡಿಕೊಂಡಿದ್ದರು ಎನ್ನುವುದು ಗೊತ್ತಾಗುತ್ತದೆ.
ಕಳೆದ ಎರಡು ದಿನಗಳಿಂದ ಬಿಜೆಪಿ ಪಕ್ಷದ ನಾಯಕರು ಮಾತ್ರವಲ್ಲದೆ, ಜೆಡಿಎಸ್ ನಾಯಕರಾದ ಶಾಸಕ ಜಿ.ಟಿ.ದೇವೇಗೌಡ, ಮಾಜಿ ಶಾಸಕ ಸಾ.ರಾ.ಮಹೇಶ್ ಹೀಗೆ ಹಲವು ನಾಯಕರನ್ನು ಭೇಟಿ ಮಾಡಿದ್ದು, ಅವರ ಬೆಂಬಲವನ್ನು ಕೋರಿದ್ದಾರೆ. ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಅವರು ಅದಕ್ಕಾಗಿ ಏನೆಲ್ಲ ತಂತ್ರಗಳು ಬೇಕೋ ಅದೆಲ್ಲವನ್ನು ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಅವರ ವಿರುದ್ಧ ಕಣಕ್ಕೆ ಯಾರನ್ನು ಇಳಿಸುತ್ತದೆ ಎಂಬುದರ ಮೇಲೆ ಕ್ಷೇತ್ರದಲ್ಲಿ ಮುಂದಿನ ರಾಜಕೀಯ ರಣಾಂಗಣದ ಚಿತ್ರ ಬದಲಾಗಲಿದೆ.












Click it and Unblock the Notifications