ಓಮಿಕ್ರಾನ್ ಆತಂಕ; ಲಾಕ್‌ಡೌನ್ ಭೀತಿಯಲ್ಲಿ ಮದುವೆಗೆ ತರಾತುರಿ!
ಮೈಸೂರು, ಡಿಸೆಂಬರ್ 07; ಕೊರೊನಾ ರೂಪಾಂತರ ತಳಿ ಓಮಿಕ್ರಾನ್ ಜಾಗತಿಕವಾಗಿ ವೇಗವಾಗಿ ಹಬ್ಬುತ್ತಿದ್ದು, ರಾಜ್ಯಕ್ಕೂ ವೈರಸ್ ಕಾಲಿರಿಸಿದೆ. ಈ ನಡುವೆ ಈಗಾಗಲೇ ಮದುವೆ ನಿಶ್ಚಯವಾಗಿರುವ ಕುಟುಂಬಗಳಲ್ಲಿ ಲಾಕ್‌ಡೌನ್ ಆತಂಕ ಮನೆ ಮಾಡಿದೆ.
ಜನವರಿಯಲ್ಲಿ ಪುಷ್ಯ ಮಾಸ ಆರಂಭವಾಗುವುದರಿಂದ ತಿಂಗಳ ಪೂರ್ತಿ ಮದುವೆಗೆ ಮುಹೂರ್ತ ಇಲ್ಲ. ಹಾಗಾಗಿ ಸಾಮಾನ್ಯವಾಗಿ ಮದುವೆ, ಸಮಾರಂಭಗಳಿಗೆ ಡಿಸೆಂಬರ್ ತಿಂಗಳು ಪ್ರಶಸ್ತವಾದ ಮಾಸ. ಒಳ್ಳೆಯ ದಿನ, ಮುಹೂರ್ತ ಸಿಗುತ್ತದೆ ಎಂದು ಬಹುತೇಕರು ಮದುವೆ ನಿಶ್ಚಯ ಮಾಡುತ್ತಾರೆ.
ಬೇಸಿಗೆ ಕಾಲದಲ್ಲಿ ಕೃಷಿ ಚಟುವಟಿಕೆಗಳು ಕಡಿಮೆ. ಈ ಸಮಯದಲ್ಲಿ ಮದುವೆ ಹೆಚ್ಚು. ಆದರೆ, ಓಮಿಕ್ರಾನ್ ಆತಂಕದ ನಡುವೆ ಮದುವೆ ಮಾಡುವುದು ಹೇಗೆ? ಎಂಬ ಭಯ ಪೋಷಕರನ್ನು ಕಾಡುತ್ತಿದೆ. ಒಂದು ವೇಳೆ ಲಾಕ್‌ಡೌನ್ ಆದರೆ? ಎಂದು ಸಹ ಮಾತುಕತೆಗಳು ಆರಂಭವಾಗಿವೆ.
ಕೆಲವು ಕುಟುಂಬಗಳು ತರಾತುರಿಯಲ್ಲಿ ಮದುವೆ ಮಾಡಲು ಮುಂದಾಗಿದ್ದಾರೆ. ಭವಿಷ್ಯದಲ್ಲಿ ಲಾಕ್ ಡೌನ್ ಆಗಬಹುದೆಂಬ ಆತಂಕದಿಂದ ಒಡವೆ ಹಾಗೂ ಬಟ್ಟೆಗಳನ್ನು ಖರೀದಿ ಮಾಡುತ್ತಿದ್ದಾರೆ. ಮುಂದಿನ ತಿಂಗಳಿಂದ ವಿವಾಹ ಮುಹೂರ್ತ ಕಡಿಮೆ ಇರುವುದರಿಂದ ಎಲ್ಲೆಡೆ ಮದುವೆ ಗಡಿಬಿಡಿ ಹೆಚ್ಚಾಗಿದೆ. ಕರ್ನಾಟಕದ ಸರ್ಕಾರ ಈಗಾಗಲೇ ವಿವಾಹದಲ್ಲಿ 500 ಜನರು ಪಾಲ್ಗೊಳ್ಳಲು ಅವಕಾಶವನ್ನು ನೀಡಿದೆ.

ಪೂಜಾರಿಗಳಿಗೂ ಹೆಚ್ಚಿದ ಒತ್ತಡ
ಓಮಿಕ್ರಾನ್ ರೂಪಾಂತರಿ ವೈರಸ್ ತಲ್ಲಣ ಉಂಟು ಮಾಡಿದೆ. ಸೋಂಕಿನ ಪ್ರಕರಣಗಳು ಹೆಚ್ಚಾಗಿ ಲಾಕ್‌ಡೌನ್ ಮಾಡಬಹುದು ಎಂಬ ಭಯದಿಂದ ಹಲವರು ಸರಳ ಮದುಗೆ ಮುಂದಾಗಿದ್ದಾರೆ. ಫೆಬ್ರವರಿಯಲ್ಲಿ ನಿಶ್ಚಯವಾದ ಮದುವೆಗಳನ್ನು ಮುಂದೂಡಲು ಹಲವು ಕುಟುಂಬಗಳು ಯೋಚಿಸುತ್ತಿವೆ. ಇನ್ನೂ ಹಲವರು ಡಿಸೆಂಬರ್‌ನಲ್ಲೇ ಮದುವೆ ಮಾಡಲು ಉತ್ಸಾಹ ತೋರಿಸುತ್ತಿದ್ದಾರೆ. ಇದರಿಂದ ಪೂಜಾರಿಗಳಿಗೆ ಬೇಡಿಕೆ ಸೃಷ್ಟಿಯಾಗಿದೆ.

ಪ್ರತಿ ವರ್ಷ ಕೋವಿಡ್ ಕಾಟ
ಕಳೆದ 18 ತಿಂಗಳಿನಿಂದ ಕೊರೊನಾ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಮೊದಲ ಎರಡು ಅಲೆಗಳಿಂದ ಎಷ್ಟೋ ವಿವಾಹ ಸಮಾರಂಭಗಳು ನಿಂತಿದ್ದವು. ಹಲವರು ಅದ್ಧೂರಿ ಮದುವೆ ಮಾಡುವ ಸಲುವಾಗಿ ಮೊದಲೇ ಕಲ್ಯಾಣ ಮಂಟಪವನ್ನು ಬುಕ್ ಮಾಡಿದ್ದರು. ಕೊರೊನಾದಿಂದ ಮದುವೆಗಳು ರದ್ದಾಗಿ ಮನೆಯಲ್ಲೇ ಸರಳವಾಗಿ ನಡೆದಿತ್ತು. ಈ ವರ್ಷ ಮದುವೆ ನಿಶ್ಚಯ ಮಾಡಿಕೊಳ್ಳುವವರಿಗೆ ಕಲ್ಯಾಣ ಮಂಟಪ ಹುಡುಕುವುದೇ ಸವಾಲಾಗುತ್ತಿದೆ. ಆದರೆ ಹೇಗೋ ಕಲ್ಯಾಣ ಮಂಟಪ ಸಿಕ್ಕಿದೆ ಎಂದು ಸಮಾಧಾನಪಡುವಾಗಲೇ ಓಮಿಕ್ರಾನ್ ಹೊಸ ತಲೆನೋವು ತಂದಿದೆ

ದೇವಸ್ಥಾನಗಳಲ್ಲಿ ಮಾಡಲು ಆಲೋಚನೆ
ಕಳೆದ ಎರಡು ಕೊರೊನಾ ಅಲೆ ನೋಡಿರುವ ನಾಗರಿಕರಿಗೆ ಪರಿಸ್ಥಿತಿ ಹೀಗೆ ಇರುತ್ತದೆ ಎನ್ನುವ ನಂಬಿಕೆ ಇಲ್ಲ. ಕಳೆದ ವರ್ಷವೂ ಏಪ್ರಿಲ್, ಮೇ ಅವಧಿಯಲ್ಲಿ ಕೊರೊನಾ ಆರ್ಭಟ ಜೋರಾಗಿತ್ತು. ಹಾಗಾಗಿ ಹೆಚ್ಚಿನ ಮದುವೆಗಳು ದೇವಾಸ್ಥಾನ, ಮನೆಗಳಿಗೆ ಶಿಫ್ಟ್ ಆಗಿತ್ತು. ಈಗ ಓಮಿಕ್ರಾನ್ ಭೀತಿ ಶುರುವಾಗಿದ್ದರಿಂದ ಕೆಲವರು ದೇವಸ್ಥಾನಗಳಲ್ಲೂ ಮದುವೆ ಮಾಡಲು ಮುಂದಾಗುತ್ತಿದ್ದಾರೆ. ಈಗಾಗಲೇ ಕರ್ನಾಟಕ ಸರ್ಕಾರ ಮದುವೆ ಸಮಾರಂಭಗಳಿಗೆ 500 ಜನರ ಮಿತಿಯನ್ನು ಹೇರಿದೆ.

ಈ ವರ್ಷ ಹೊಸ ಬುಕ್ಕಿಂಗ್ ಇಲ್ಲ
"ಡಿಸೆಂಬರ್ ತಿಂಗಳಲ್ಲಿ ಬಹುತೇಕ ಎಲ್ಲ ದಿನವೂ ಕಲ್ಯಾಣ ಮಂಟಪ ಬುಕ್ ಆಗಿದೆ. ಇದರಲ್ಲಿ ಎಲ್ಲವೂ ಕಳೆದ ಮೇ, ಜೂನ್, ಜುಲೈನಲ್ಲಿ ಮುಂದೂಡಿದ್ದ ಮದುವೆಗಳೇ, ಬಹಳ ಹಿಂದೆಯೇ ಬುಕಿಂಗ್ ಆಗಿದ್ದವು. ಈ ವರ್ಷದ ಹೊಸ ಬುಕಿಂಗ್ ಇಲ್ಲ" ಎನ್ನುತ್ತಾರೆ ಕನ್ವೆನ್ಷನ್ ಹಾಲ್ ಸಿಬ್ಬಂದಿ.
"ಹಿಂದಿನ ವರ್ಷ ಮದುವೆ ನಿಶ್ಚಯವಾದವರೂ ಮತ್ತು ಈ ವರ್ಷ ನಿಶ್ಚಯವಾದವರು ಡಿಸೆಂಬರ್ ತಿಂಗಳಲ್ಲಿ ಮದುವೆ ಮಾಡಿಕೊಳ್ಳುತ್ತಿರುವುದರಿಂದ ಈ ಬಾರಿ ಒತ್ತಡ ಹೆಚ್ಚಾಗಿದೆ" ಎನ್ನುತ್ತಾರೆ ಪೂಜಾರಿಯಾದ ಉಮೇಶ ಭಟ್.












Click it and Unblock the Notifications