ಮೈಸೂರು ಚಾಮುಂಡಿಬೆಟ್ಟದ ಸೊಬಗಿಗೆ ಕಪ್ಪುಚುಕ್ಕೆಯಾಗದಿರಲಿ ಕಸದ ರಾಶಿ, ಯಾರಿಗೆ ಈ ಎಚ್ಚರಿಕೆ ಸಂದೇಶ?

ಮೈಸೂರು, ಮೇ, 23: ಪ್ರವಾಸಿ ತಾಣವಾಗಿ, ದೈವಿಕ ತಾಣವಾಗಿ ಪ್ರವಾಸಿಗರನ್ನು ಸೆಳೆಯುವ ಚಾಮುಂಡಿಬೆಟ್ಟ ವಾಯುವಿಹಾರಕ್ಕೆ ಹೇಳಿ ಮಾಡಿಸಿದಂತಿದೆ. ಹೀಗಾಗಿ ಇಲ್ಲಿಗೆ ಮುಂಜಾನೆಯಿಂದಲೇ ಜನ ಹೆಜ್ಜೆ ಹಾಕುತ್ತಿರುತ್ತಾರೆ. ಸೊಬಗಿನ ನಿಸರ್ಗದ ನಡುವೆ ಒಂದೊಂದೇ ಮೆಟ್ಟಿಲೇರುತ್ತಾ ಸಾಗುವುದು ಸುಂದರ ಅನುಭವ ನೀಡುವುದಲ್ಲದೆ, ಆರೋಗ್ಯವನ್ನು ಕಾಪಾಡಿಕೊಳ್ಳುವ ಮತ್ತು ಚಾಮುಂಡೇಶ್ವರಿಯನ್ನು ಧ್ಯಾನಿಸುವ ಮಾರ್ಗವಾಗಿದೆ. ಆದರೆ ಈ ತಾಣದ ಎಲ್ಲೆಂದರಲ್ಲೇ ಕೆಲ ಪ್ರವಾಸಿಗರು ಕಸವನ್ನು ಎಸೆಯುವುತ್ತಿರುವು ಅಸಹ್ಯಕ್ಕೆ ಕಾರಣವಾಗಿದೆ.

ಮುಂಜಾನೆ ಐದು ಗಂಟೆಯಿಂದಲೇ ಮಹಿಳೆಯರು, ಮಕ್ಕಳು, ವೃದ್ಧರು ಹೀಗೆ ಎಲ್ಲ ವಯೋಮಾನದವರು ಪಾದದಿಂದ ಮೆಟ್ಟಿಲೇರುತ್ತಾ ಸಾಗಿ ಚಾಮುಂಡಿಬೆಟ್ಟವನ್ನು ತಲುಪಿ ಮತ್ತೆ ಮೆಟ್ಟಿಲಿಳಿದು ಹೋಗುತ್ತಾರೆ ಹೀಗೆ ಪ್ರತಿದಿನವೂ ಮೆಟ್ಟಿಲೇರಿ ಸಾಗುವವರ ಸಂಖ್ಯೆ ದೊಡ್ಡಮಟ್ಟದಲ್ಲಿದೆ. ಕೆಲವರು ವ್ಯಾಯಾಮದ ಉದ್ದೇಶದಿಂದ ಮೆಟ್ಟಿಲೇರಿದರೆ ಇನ್ನು ಕೆಲವರು ಚಾಮುಂಡೇಶ್ವರಿಯ ದರ್ಶನಕ್ಕಾಗಿ ಮೆಟ್ಟಿಲೇರುತ್ತಾರೆ.

Wastes on Steps of Mysuru Chamundi Hills

ಭಕ್ತರು ಪ್ರತಿ ಮೆಟ್ಟಿಲಿಗೂ ಅರಶಿಣ, ಕುಂಕುಮ ಹಚ್ಚಿ, ಹೂವು, ಕರ್ಪೂರದ ದೀಪ ಬೆಳಗುತ್ತಾ ಹರಕೆ ತೀರಿಸುತ್ತಾರೆ. ವಾರದ ಕೊನೆಯ ದಿನಗಳಾದ ಶನಿವಾರ ಮತ್ತು ಭಾನುವಾರದಂದು ಮೆಟ್ಟಿಲೇರುವವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ವಾರವಿಡೀ ಕಚೇರಿಗಳಲ್ಲಿ ಕೆಲಸ ಮಾಡಿದವರು ರಿಲ್ಯಾಕ್ಸ್‌ಗಾಗಿ ಗುಂಪು ಗುಂಪಾಗಿ ಸೇರಿ ಸಂತೋಷದಿಂದ ಮೆಟ್ಟಿಲು ಹತ್ತುತ್ತಾರೆ.

ಹೀಗೆ ಚಾಮುಂಡಿಬೆಟ್ಟದ ಮೆಟ್ಟಿಲು ಹತ್ತುವವರು ಅಲ್ಲಲ್ಲಿ ತಿಂಡಿ, ತಿನಿಸು ತಿನ್ನುವುದು, ಜ್ಯೂಸ್ ಕುಡಿಯುವುದನ್ನು ಮಾಡುತ್ತಾರೆ. ಆದರೆ ಬಳಿಕ ಕಸವನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ಹೀಗಾಗಿ ಇತ್ತೀಚೆಗಿನ ದಿನಗಳಲ್ಲಿ ಮೆಟ್ಟಿಲಿನುದ್ದಕ್ಕೂ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಕವರ್, ತಟ್ಟೆ ಲೋಟಗಳು ಹರಡಿ ಬಿದ್ದಿರುವುದು ಕಾಣಿಸುತ್ತಿದ್ದು, ಈ ದೃಶ್ಯ ಅಸಹ್ಯ ಹುಟ್ಟಿಸುತ್ತಿವೆ.

ಹಸಿರಿನಿಂದ ಕಂಗೊಳಿಸುವ ಚಾಮುಂಡಿಬೆಟ್ಟ

ಹಾಗೆ ನೋಡಿದರೆ ಬೇಸಿಗೆಯ ದಿನಗಳಲ್ಲಿ ಬಿಸಿಲಿನ ಧಗೆಗೆ ಸಿಕ್ಕಿ ಒಣಗಿ ಹೋಗಿದ್ದ ಗಿಡಮರಗಳು ಇತ್ತೀಚೆಗೆ ಸುರಿದ ಮಳೆಯಿಂದ ಚೇತರಿಸಿಕೊಂಡಿದೆ. ಗಿಡಮರಗಳು ಚಿಗುರಿದ್ದು, ಇಡೀ ವಾತಾವರಣ ಹಸಿರಿನಿಂದ ಕಂಗೊಳಿಸುತ್ತಿದೆ. ಗಿಡಮರಗಳ ನಡುವೆ ಹಕ್ಕಿಗಳ ಚಿಲಿಪಿಲಿ ನಿನಾದ ಆಲಿಸುತ್ತಾ ಸಾಗುವುದು ಮನಕ್ಕೆ ಮುದ ನೀಡುತ್ತದೆ.

ಜೊತೆಗೆ ಮೆಟ್ಟಿಲು ಹತ್ತುವಾಗ ಆಯಾಸವಾದರೂ ದೇಹಕ್ಕೆ ಪೋಷಕ ಶಕ್ತಿ ನೀಡಿ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಮಾಡುತ್ತದೆ. ಹೀಗಾಗಿಯೇ ಕಳೆದ ಹಲವು ದಶಕಗಳಿಂದ ಮೆಟ್ಟಿಲು ಹತ್ತುವುದನ್ನೇ ಹಿರಿಯರು, ಕಿರಿಯರು, ಯುವತಿಯರು, ಮಹಿಳೆಯರು ನಿತ್ಯದ ವ್ಯಾಯಾಮನ್ನಾಗಿ ಮಾಡಿಕೊಂಡಿದ್ದಾರೆ.

ಸಾರ್ವಜನಿಕರು ಸೇರಿದಂತೆ ಚಾಮುಂಡಿಬೆಟ್ಟವನ್ನು ಕಾಪಾಡಿಕೊಳ್ಳುವ ಜವಬ್ದಾರಿ ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಇದೆ. ಆದರೆ ಇಲ್ಲಿ ಯಾರೂ ಕೂಡ ಗಂಭೀರವಾಗಿ ಪರಿಗಣಿಸದ ಕಾರಣದಿಂದಾಗಿ ಮೆಟ್ಟಿಲಿನಲ್ಲಿಯೇ ಕೆಲವರು ಪಾರ್ಟಿ ಮಾಡಿ ತಟ್ಟೆಗಳನ್ನು ಎಸೆಯುವುದು, ಮದ್ಯದ ಬಾಟಲಿಗಳನ್ನು ಬಿಟ್ಟು ಹೋಗುವುದು, ಹೀಗೆ ಅನಾಚಾರಗಳನ್ನು ಮಾಡುವುದು ಕಾಣಿಸುತ್ತಿದೆ.

ಇತ್ತೀಚೆಗೆ ರಸ್ತೆ ಬದಿಯಲ್ಲಿಯೇ ಹುಟ್ಟುಹಬ್ಬ ಆಚರಣೆ ಮಾಡುವುದು ಟ್ರೆಂಡ್ ಆಗಿದ್ದು, ಅದರಂತೆ ಚಾಮುಂಡಿಬೆಟ್ಟದ ಮೆಟ್ಟಿಲಲ್ಲಿ ರಾತ್ರಿ ವೇಳೆ ಬರ್ತ್ ಡೇ ಪಾರ್ಟಿ ಮಾಡುವವರು ತಾವು ತಂದಿದ್ದ ಬಾಟಲಿಗಳು, ಪ್ಲಾಸ್ಟಿಕ್‌ ಕವರ್‌ಗಳನ್ನು ಕಸದ ತೊಟ್ಟಿಗೂ ಹಾಕದೆ ಎಲ್ಲೆಂದರಲ್ಲೇ ಎಸೆದು ಹೋಗುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ.

ಗಿಡಗಂಟಿಗಳನ್ನು ತೆರವುಗೊಳಿಸುವುದು ಅಗತ್ಯ

ಇನ್ನು ಗ್ರಾಮಪಂಚಾಯಿತಿ, ಅರಣ್ಯ ಇಲಾಖೆಯೂ ಇತ್ತ ಗಮನಹರಿಸಬೇಕಿದೆ. ವಾಹನಗಳಲ್ಲಿ ಚಾಮುಂಡಿಬೆಟ್ಟಕ್ಕೆ ಬರುವವರು ಮೆಟ್ಟಿಲಿನ ಮೂಲಕ ನಂದಿಗೆ ತೆರಳುತ್ತಾರೆ. ಈ ಸ್ಥಳಗಳಲ್ಲಿ ಪಾರ್ಟಿ ಮಾಡುವುದು, ಕಸ ಎಸೆಯುವುದು, ಪುಂಡಾಟ ಆಡುವುದು ಹೆಚ್ಚಾಗಿ ನಡೆಯುತ್ತದೆ. ಇದನ್ನು ತಡೆಯಲು ಪೊಲೀಸ್ ಇಲಾಖೆ ಮುಂದಾಗಬೇಕಿದೆ. ಇನ್ನು ನಂದಿಗೆ ಸಮೀಪದ ವೀವ್ ಪಾಯಿಂಟ್ ಬಳಿ ಗಿಡಗಂಟಿಗಳು ಬೆಳೆದು ಮೆಟ್ಟಿಲನ್ನು ಆವರಿಸಿದ್ದು, ಇದರಿಂದ ಮೆಟ್ಟಿಲನ್ನು ಹತ್ತುವವರಿಗೆ ತೊಂದರೆಯಾಗುತ್ತಿದೆ.

ಇಲ್ಲಿ ಬೆಳೆದು ಮೆಟ್ಟಿಲಿಗೆ ಬಾಗಿದ ಗಿಡಗಂಟಿಗಳನ್ನು ತೆರವುಗೊಳಿಸುವ ಕೆಲಸವನ್ನು ಸಂಬಂಧಪಟ್ಟವರು ಮಾಡಬೇಕಾಗಿದೆ. ಆಗೊಮ್ಮೆ ಈಗೊಮ್ಮೆ ಸಂಘ-ಸಂಸ್ಥೆಗಳು ಮೆಟ್ಟಿಲು ಮತ್ತು ಸುತ್ತಮುತ್ತ ಬಿದ್ದಿರುವ ಕಸವನ್ನು ತೆಗೆಯುವ ಅಭಿಯಾನ ನಡೆಸುತ್ತಿವೆ. ಸದ್ಯ ಇಂತಹ ಯಾವುದೇ ಕಾರ್ಯಕ್ರಮಗಳು ನಡೆಯದ ಕಾರಣ ಮೆಟ್ಟಿಲ ಎರಡು ಕಡೆಗಳಲ್ಲಿ ಕಸಗಳು ಅಲ್ಲಲ್ಲಿ ಬಿದ್ದಿರುವುದು ಕಾಣಿಸುತ್ತಿದೆ.

ವೃದ್ಧ ಮಹದೇವ ಅವರಿಂದ ನಿಸ್ವಾರ್ಥ ಸೇವೆ

ಇದೆಲ್ಲದರ ನಡುವೆ ಹಲವರು ನಿರ್ಲಕ್ಷ್ಯದಿಂದ ಕಸವನ್ನು ಮೆಟ್ಟಿಲಿನ ಮೇಲೆ ಮತ್ತು ಪಕ್ಕದ ಅರಣ್ಯಕ್ಕೆ ಎಸೆದು ಹೋಗುತ್ತಾರೆ. ಆದರೆ ಮಹದೇವ ಎನ್ನುವವರು ಮೆಟ್ಟಿಲನ್ನು ಗುಡಿಸಿ ಸ್ವಚ್ಛಗೊಳಿಸಿ ಭಕ್ತರಿಗೆ ಅನುಕೂಲ ಮಾಡಿಕೊಡುತ್ತಾ ಬರುತ್ತಿದ್ದಾರೆ. ಆ ಮೂಲಕ ಇವರು ಪ್ರಚಾರಕ್ಕೋಸ್ಕರ ಕೆಲಸ ಮಾಡುವವರ ನಡುವೆ ಭಿನ್ನವಾಗಿ ಕಾಣುತ್ತಾರೆ.

ಸುಮಾರು ಎಪ್ಪತ್ತು ವರ್ಷ ಪ್ರಾಯದ ಮಹದೇವ ಅವರು ಮೂರು ದಶಕಗಳಿಂದ ಚಾಮುಂಡಿಬೆಟ್ಟದ ಮೆಟ್ಟಿಲನ್ನು ಗುಡಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಇವರು ಮೂಲತಃ ನಂಜನಗೂಡಿನ ಬಿಳುಗಲಿ ಗ್ರಾಮದವರಂತೆ ಸದ್ಯ ಮೈಸೂರಿನಲ್ಲಿದ್ದಾರೆ. ಬೆಳಗ್ಗೆ ಆರು ಗಂಟೆಗೆ ಮನೆಯಿಂದ ಹೊರಡುವ ಇವರು ಚಾಮುಂಡಿಬೆಟ್ಟದ ಪಾದದಿಂದಲೇ ಕಸ ಗುಡಿಸುವ ಕೆಲಸ ಆರಂಭಿಸುತ್ತಾರೆ.

ಮಹದೇವ ಅವರ ಈ ಸೇವೆಯನ್ನು ನೋಡಿದ ಜನ ಅವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಾ ಬಂದಿದ್ದಾರೆ. ಹೀಗೆ ಭಕ್ತರು ನೀಡಿದ ಹಣದಿಂದಲೇ ತೃಪ್ತಿ ಕಾಣುತ್ತಿದ್ದು, ಈ ಮೂಲಕ ಅವರು ನಿಷ್ಕಲ್ಮಷ ಮನಸ್ಸಿನಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಕಸದಿಂದ ಮುಕ್ತಿ ಯಾವಾಗ?

ಒಂದು ವೇಳೆ ಮಹದೇವ ಅವರು ಇಲ್ಲಿಗೆ ಬಂದು ಕಸ ಗುಡಿಸಿ ಸ್ವಚ್ಛಗೊಳಿಸದೆ ಇದ್ದಿದ್ದರೆ, ಜನ ಮೆಟ್ಟಿಲೇರಲು ಕಷ್ಟಪಡಬೇಕಾಗುತ್ತಿತ್ತೇನೋ? ಆದರೆ ಮಹದೇವ ಅವರ ನಿಸ್ವಾರ್ಥ ಸೇವೆಯಿಂದಾಗಿ ಇದೀಗ ಜನ ನೆಮ್ಮದಿಯಾಗಿ ಮೆಟ್ಟಿಲೇರುವಂತಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಚಾಮುಂಡಿಬೆಟ್ಟದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದಕ್ಕೆ ಕಡಿವಾಣ ಹಾಕಬೇಕಿದೆ ಎನ್ನುವುದು ಇಲ್ಲಿನ ಸ್ಥಳೀಯರ ಆಗ್ರಹವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+