ಸಾಹಿತ್ಯ ಓದುವವರೇ ಮತದಾನ ಮಾಡುವುದಿಲ್ಲ:ಎಸ್.ಎಲ್.ಭೈರಪ್ಪ
ಮೈಸೂರು, ಜನವರಿ 21: ಸಾಹಿತ್ಯ ಸಮಾಜದಲ್ಲಿನ ಅನ್ಯಾಯವನ್ನು ಸರಿಪಡಿಸುವುದಿಲ್ಲ. ಓದುಗರು ಆ ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು ಎಂದು ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟರು.
ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನದಿಂದ ಕಲಾಮಂದಿರದಲ್ಲಿ ಏರ್ಪಡಿಸಿದ್ದ 2 ದಿನಗಳ ಭೈರಪ್ಪ ಸಾಹಿತ್ಯೋತ್ಸವದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಸಮಾಜದಲ್ಲಿನ ಅನ್ಯಾಯವನ್ನು ತಿಳಿದುಕೊಳ್ಳಲು ಸಾಹಿತ್ಯ ಓದಬೇಕೇ? ಅದನ್ನು ಅನುಭವಿಸುತ್ತಿಲ್ಲವೇ? ಅನ್ಯಾಯ, ಸಮಸ್ಯೆಗಳನ್ನು ಹೋಗಲಾಡಿಸಲು ಕಾದಂಬರಿ ಬರೆಯಬೇಕೆ? ಎಂದು ಪ್ರಶ್ನಿಸಿದರು.
ಸಾಹಿತ್ಯ ಕೃತಿ ಬರೆದ ಮಾತ್ರಕ್ಕೆ ಜೀವನದ ಸಮಸ್ಯೆ ಪರಿಹಾರವಾಗುವುದಿಲ್ಲ. ಸಾಹಿತ್ಯ ಓದುವ ವಿದ್ಯಾವಂತರೇ ಮತದಾನ ಮಾಡುವುದಿಲ್ಲ. ಆದ್ದರಿಂದ ಓದುಗರು ಸಾಹಿತ್ಯದಲ್ಲಿ ರಸವನ್ನು ಮಾತ್ರ ಅನುಭವಿಸಬೇಕು. ಅದಕ್ಕಿಂತ ಹೆಚ್ಚಿನದ್ದನ್ನು ನಿರೀಕ್ಷಿಸಬಾರದು. ಆ ಬಗೆಯಾಗಿ ನನಗೂ ಹೆಚ್ಚಿನ ಗುರಿ ಇಲ್ಲ ಎಂದು ಹೇಳಿದರು.

ಚಳವಳಿ ಸಾಹಿತ್ಯ, ಸ್ಲೋಗನ್ ಸಾಹಿತ್ಯದಲ್ಲಿ ನನಗೆ ನಂಬಿಕೆ ಇಲ್ಲ. ಗದ್ದಲದ ನಡುವೆ ಶುದ್ಧ ಸಾಹಿತ್ಯದ ಬಗ್ಗೆ ಬಹಳ ಜನಕ್ಕೆ ತಿಳಿದಿಲ್ಲ. ರಾಜಕೀಯ, ಸಾಮಾಜಿಕ ಚಿಂತನೆಗೆ ಅನುಗುಣವಾಗಿ ಚಳವಳಿ ಸಾಹಿತ್ಯ ಹುಟ್ಟುತ್ತದೆ. ನನಗೆ ನಂಬಿಕೆ ಇರುವುದು ಶುದ್ಧಸಾಹಿತ್ಯದಲ್ಲಿ ಎಂದು ನುಡಿದರು.
ಸಾಹಿತ್ಯದ ಮೂಲ ಲಕ್ಷಣ ಯಾವುದು? ಮೊದಲಿಂದಲೂ ನಾನು ನಂಬಿರುವುದು ರಸ, ಧ್ವನಿ, ಔಚಿತ್ಯ. ಇವು ಸಾಹಿತ್ಯದ ಮೂಲ ನಿಕಾಶ. ಒಂದಕ್ಕೊಂದು ಸೇರಿದ್ದು. ಇವತ್ತು ಮೇಷ್ಟ್ರು ಸಾಹಿತ್ಯದ ಹೆಸರಿನಲ್ಲಿ ಚಳವಳಿ ಬೋಧಿಸುತ್ತಿದ್ದಾರೆ ಎಂದು ವಿಷಾದಿಸಿದರು.
ಚಳವಳಿಗಾರರು ನಿಮ್ಮ ಸಾಮಾಜಿಕ ಬದ್ಧತೆ ಏನು? ಭಾವನೆಯಲ್ಲಿ ಯಾವ ಮೌಲ್ಯವಿದೆ ಎಂದು ಪ್ರಶ್ನಿಸುತ್ತಾರೆ. ಲೇಖಕ ಬರವಣಿಗೆ ಜತೆಗೆ ಸಾಮಾಜಿಕ ಸೇವೆ ಮಾಡಬೇಕು ಎನ್ನುತ್ತಾರೆ. ಅನೇಕ ಸಾಹಿತಿಗಳನ್ನು ಆಕ್ರಮಿಸಿಕೊಂಡಿರುವುದು ಈ ಸಿದ್ಧಾಂತ. ಇದು ಕಮ್ಯುನಿಸ್ಟ್ ಸಿದ್ಧಾಂತದಿಂದ ಬಂದಿದ್ದು, ಒಬ್ಬ ವೈದ್ಯ ಶ್ರದ್ಧೆಯಿಂದ ರೋಗಿಯ ಸೇವೆ ಮಾಡಿದರೆ ಅದಕ್ಕಿಂತ ಹೆಚ್ಚಿನ ಸಮಾಜ ಸೇವೆ ಇನ್ನೇನಿದೆ? ಇವರ ಪ್ರಕಾರ ಕಮ್ಯುನಿಸ್ಟ್ ಸಿದ್ಧಾಂತವನ್ನು ಬಿತ್ತನೆ ಮಾಡುವುದೇ ಸಮಾಜ ಸೇವೆಯಾಗಿದೆ ಎಂದು ತಿಳಿಸಿದರು.

ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಮಾತನಾಡಿ, ಸಣ್ಣ ವಯಸ್ಸಿನಲ್ಲೇ ನನಗೆ ಸಾಹಿತ್ಯದ ಮೇಲೆ ಅಭಿರುಚಿ ಇತ್ತು. ನಾನು ಬೀಚಿ ಅವರ ಸಾಹಿತ್ಯ ಓದುತ್ತಿದ್ದರೆ, ನನ್ನ ತಮ್ಮ ಭೈರಪ್ಪ ಅವರ ಕಾದಂಬರಿಗಳನ್ನು ಓದುತ್ತಿದ್ದ. ನನ್ನನ್ನು ಬ್ಯಾಂಕ್ ಅಧಿಕಾರಿಯನ್ನಾಗಿ ಮಾಡಬೇಕು ಎಂಬುದು ತಂದೆಯ ಕನಸಾಗಿತ್ತು. ಅವರಿಗೆ ಸಾಹಿತ್ಯ, ಕವನ ಇಷ್ಟವಿರಲಿಲ್ಲ." ಭೈರಪ್ಪ, ಬೀಚಿ ನಿಮ್ಮನ್ನು ಹಾಳು ಮಾಡುತ್ತಾ ಇದ್ದಾರೆ ಎಂದು ಬೈಯ್ಯುತ್ತಿದ್ದರು' ಎಂದು ಪ್ರಾಣೇಶ್ ನೆನಪಿಸಿಕೊಂಡರು.
ಭೈರಪ್ಪ, ಕಾರಂತ, ಬೀಚಿ ಅವರ ಸಾಹಿತ್ಯವನ್ನು ಓದಿದವರು ಧಾರಾವಾಹಿಗಳನ್ನು ನೋಡಲು ಸಾಧ್ಯವಿಲ್ಲ. ಅವರಿಗೆ ಧಾರಾವಾಹಿಗಳಲ್ಲಿ ಏನೂ ಇಲ್ಲ ಎನಿಸಿಬಿಡುತ್ತದೆ. ಧಾರಾವಾಹಿಗಳಲ್ಲಿ ಒಂದೇ ಘಟನೆಯನ್ನು ಆರು ತಿಂಗಳ ಕಾಲ ಎಳೆಯುತ್ತಾರೆ ಮೈಸೂರು, ಬೆಂಗಳೂರಿನ ಜನರು ಉದ್ಯೋಗಕ್ಕೆ ಬೇರೆ ಕಡೆ ಹೋಗಲು ಇಷ್ಟಪಡುವುದಿಲ್ಲ. ಆದರೆ ಉತ್ತರ ಕರ್ನಾಟಕದವರು ಎಲ್ಲಾ ಕಡೆ ಹೋಗಲು ಸಿದ್ಧರಿರುತ್ತಾರೆ. ಮೈಸೂರಿನ ಹೋಟೆಲ್‌ಗಳಲ್ಲಿ ಕೆಲಸ ಮಾಡುವವರಲ್ಲಿ ಹೊರಗಿನ ರಾಜ್ಯದವರೇ ತುಂಬಿದ್ದಾರೆ ಎಂದರು.












Click it and Unblock the Notifications