ತಮಿಳುನಾಡಿಗೆ ನೀರು, ಸುಪ್ರೀಂ ಆದೇಶಕ್ಕೆ ಕುರುಬೂರು ಶಾಂತಕುಮಾರ್ ವಿರೋಧ
ಮೈಸೂರು, ಮೇ 3: ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ತಮಿಳುನಾಡಿಗೆ ಹರಿಸಬೇಕಿದ್ದ 4 ಟಿಎಂಸಿ ನೀರನ್ನು ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ರಾಜ್ಯದ ರೈತ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದೆ.
ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್, "ಸರ್ವೋಚ್ಚ ನ್ಯಾಯಾಲಯವು ಈ ತೀರ್ಪನ್ನು ಪುನರ್ ಪರಿಶೀಲನೆ ಮಾಡಬೇಕು. ಕರ್ನಾಟಕದಲ್ಲಿ ಇಂದು ಚುನಾವಣೆ ನಡೆಯುತ್ತಿದೆ. ನಮ್ಮ ಸರ್ಕಾರಕ್ಕೆ ಯಾವುದೇ ಆದೇಶ ನೀಡಲು ಅವಕಾಶ ಇರುವುದಿಲ್ಲ. ಇಂತಹ ಹೊತ್ತಿನಲ್ಲಿ ಈ ರೀತಿಯ ಆದೇಶಗಳು ಗಾಯದ ಮೇಲೆ ಬರೆ ಎಳೆದಂತೆ," ಎಂದು ಅಸಮಾಧಾನ ಹೊರ ಹಾಕಿದರು.
"ಇದು ರಾಜ್ಯದ ಜನರನ್ನು ತಲ್ಲಣಗೊಳಿಸುವ ಆದೇಶವಾಗಿದೆ. ಈಗಾಗಲೇ ಕರ್ನಾಟಕದಲ್ಲಿ ಬರಗಾಲ ಎದುರಾಗಿದೆ. ಇಂತಹ ಸನ್ನಿವೇಶದಲ್ಲಿ ಮತ್ತೆ 4 ಟಿಎಂಸಿ ನೀರು ಬಿಡುವಂತೆ ಹೇಳುವುದು ಸರಿಯಲ್ಲ. ಯಾರದೋ ಮೇಲಿನ ಕೋಪವನ್ನ ಸುಪ್ರೀಂ ಕೋರ್ಟ್ ನಮ್ಮ ರಾಜ್ಯದ ಜನರ ಮೇಲೆ ತೀರಿಸಿಕೊಂಡಂತಾಗಿದೆ," ಎಂದು ಕುರುಬೂರು ಶಾಂತಕುಮಾರ್ ಬೇಸರ ವ್ಯಕ್ತಪಡಿಸಿದರು.

ಚಾಮುಂಡೇಶ್ವರಿಯಲ್ಲಿ ಸಿಎಂ ವಿರುದ್ಧ ರೈತರಿಂದ ಜಾಗೃತಿ ಅಭಿಯಾನ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಬ್ಬು ಬೆಳೆಗಾರರ ಸಂಘದಿಂದ ಜಾಗೃತಿ ಅಭಿಯಾನ ಆರಂಭಗೊಂಡಿದೆ. ರೈತ ಮುಖಂಡರು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಡಾ. ಹೆಚ್. ಸಿ ಮಹದೇವಪ್ಪರನ್ನು ಸೋಲಿಸುವ ಗುರಿ ಹೊಂದಿದ್ದು, ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ವಿರುದ್ದ ರೈತರು ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದರು.
ಈ ಸಂದರ್ಭ ಮಾತನಾಡಿದ ಕುರುಬೂರು ಶಾಂತಕುಮಾರ್, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರಿಗೆ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ. ರೈತರ ಕಬ್ಬಿಗೆ ಬೆಂಬಲ ಬೆಲೆ ಘೋಷಿಸಿಲ್ಲ. ಅದಕ್ಕಾಗಿ ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ವಿರುದ್ದ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದೇವೆ. ನಾಳೆ ತಿ. ನರಸೀಪುರದಲ್ಲಿ ಡಾ. ಹೆಚ್.ಸಿ ಮಹದೇವಪ್ಪ ವಿರುದ್ಧ ಜಾಗೃತಿ ಅಭಿಯಾನ ನಡೆಸುತ್ತೇವೆ. ರೈತರ 15 ಪ್ರಣಾಳಿಕೆಯನ್ನು ಯಾರು ಬೆಂಬಲಿಸುತ್ತಾರೋ ಆ ಪಕ್ಷದ ಅಭ್ಯರ್ಥಿಗೆ ಮತ ಹಾಕಲು ನಿರ್ಧರಿಸಿದ್ದೇವೆ ಎಂದರು.












Click it and Unblock the Notifications