ಮೈಸೂರು, ಸುತ್ತಮುತ್ತ ಊರು ನೋಡಲು ದರ್ಶಿನಿ ಪ್ಯಾಕೇಜ್
ಮೈಸೂರು, ಜೂನ್ 11: ಸಾಂಸ್ಕೃತಿಕ ನಗರಿ ಮೈಸೂರು ಪ್ರವಾಸಿಗರ ನೆಚ್ಚಿನ ತಾಣ. ಆದ್ದರಿಂದ ಇಲ್ಲಿನ ಸುತ್ತಮುತ್ತಲ ಸ್ಥಳಗಳಿಗೆ ಪ್ರವಾಸಿಗರನ್ನು ಇನ್ನಷ್ಟು ಸೆಳೆಯುವ ನಿಟ್ಟಿನಲ್ಲಿ ರಾಜ್ಯ ರಸ್ತೆ ಸಾರಿಗೆ ವಿಶೇಷ ಪ್ಯಾಕೇಜ್ ಟೂರ್ ಯೋಜನೆಯನ್ನು ಪರಿಚಯಿಸಲು ಮುಂದಾಗಿದೆ.
ಟ್ಯಾಕ್ಸಿ ಹಾಗೂ ಇತರೆ ಖಾಸಗಿ ಸ್ಪರ್ಧೆಗಳನ್ನು ಹತ್ತಿಕ್ಕಲು, ಸರ್ಕಾರಿ ಸಾರಿಗೆಯನ್ನು ಜನಪ್ರಿಯಗೊಳಿಸಲು ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಗಳನ್ನು ನೀಡಲು ರಸ್ತೆ ಸಾರಿಗೆ ಮುಂದಾಗಿದೆ.
ಹೊರ ರಾಜ್ಯದಿಂದ ನಗರಕ್ಕೆ ಬರುತ್ತಿರುವ ಪ್ರವಾಸಿಗರು ನಗರದ ತಾಣಗಳನ್ನು ವೀಕ್ಷಿಸಲು ಈ ಬಸ್ ದರ್ಶಿನಿ ಪ್ಯಾಕೇಜ್ ಸಾಕಷ್ಟು ಪ್ರಯೋಜನಕಾರಿಯಾಗಲಿದೆ. ಯಾವುದೇ ಕಿರಿಕಿರಿ ಇಲ್ಲದೆ ಕಡಿಮೆ ದರದಲ್ಲಿ ನೆಚ್ಚಿನ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಅವಕಾಶವಿದ್ದು, ಇಲ್ಲಿ ಗೈಡ್ ಕೆಲಸವನ್ನು ಡ್ರೈವರ್ ನಿರ್ವಹಿಸುತ್ತಾರೆ. ಧ್ವನಿವರ್ಧಕದ ಸಹಾಯದಿಂದ ಪ್ರವಾಸಿಗರಿಗೆ ತಾಣದ ವಿಶೇಷತೆಯನ್ನು ವಿವರಿಸುತ್ತಾ ಹೋಗುತ್ತಾರೆ. ಇದರಿಂದ ಜನರಿಗೆ ಸಹಾಯವಾಗಲಿದೆ ಎನ್ನುತ್ತಾರೆ ನಗರ ಸಾರಿಗೆ ಡಿ ಸಿ ಸತೀಶ್.

ಮೂರು ಪ್ಯಾಕೇಜ್ ಗಳನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಪ್ರತಿ ದಿನ ಬೆಳಗ್ಗೆ 7 ಗಂಟೆಗೆ ಮೈಸೂರಿನ ಇನ್ಫೋಸಿಸ್ ಬಳಿಯಿಂದ ಬಸ್ ಹೊರಡಲಿದೆ. ಚಾಮುಂಡಿ ಬೆಟ್ಟ, ರಂಗನತಿಟ್ಟು ಪಕ್ಷಿ ಧಾಮ, ಶ್ರೀರಂಗಪಟ್ಟಣ, ತೊಣ್ಣೂರು ಕೆರೆ, ಮೇಲುಕೋಟೆ ಹಾಗೂ ಕೆಆರ್ ಎಸ್ ಗೆ ತೆರಳಿ ರಾತ್ರಿ 9.15ಕ್ಕೆ ಹಿಂತಿರುಗಲಿದೆ. ಹಿರಿಯರಿಗೆ 600 ಹಾಗೂ ಮಕ್ಕಳಿಗೆ 450 ರೂಪಾಯಿ ದರ ನಿಗದಿ ಮಾಡಲಾಗಿದೆ.
ಮತ್ತೊಂದು ಬಸ್ ಪ್ರತಿದಿನ ಬೆಳಗ್ಗೆ 8 ಗಂಟೆಗೆ ಇನ್ಫೋಸಿಸ್ ನಿಂದ ಹೊರಡಲಿದೆ. ಇದು ಸೋಮನಾಥಪುರ, ತಲಕಾಡು, ಗಗನಚುಕ್ಕಿಗೆ ತೆರಳಿ ರಾತ್ರಿ 8ಕ್ಕೆ ಹಿಂತಿರುಗಲಿದೆ. ಇಲ್ಲಿ ಕೂಡ ಹಿರಿಯರಿಗೆ 600 ಹಾಗೂ ಮಕ್ಕಳಿಗೆ 450 ರೂ ದರ ನಿಗದಿ ಮಾಡಲಾಗಿದೆ.
ನಗರ ಬಸ್ ನಿಲ್ದಾಣದಿಂದ ಬೆಳಗ್ಗೆ 7ಕ್ಕೆ ಹಾಗೂ ಗ್ರಾಮಾಂತರ ಬಸ್ ನಿಲ್ದಾಣದಿಂದ ಬೆಳಿಗ್ಗೆ 7.30ಕ್ಕೆ ಆರಂಭವಾಗಲಿರುವ ಬಸ್, ಚಾಮುಂಡಿ ಬೆಟ್ಟ, ಸ್ಯಾಂಡ್ ಮ್ಯೂಸಿಯಂ, ಪ್ರಾಕೃತಿಕ ಮತ್ತು ಐತಿಹಾಸಿಕ ವಸ್ತು ಸಂಗ್ರಹಾಲಯ, ಮೃಗಾಲಯ, ಅರಮನೆ, ಕೆಆರ್ ಎಸ್ ಗೆ ತೆರಳಿ ನಗರ ಬಸ್ ನಿಲ್ದಾಣಕ್ಕೆ ರಾತ್ರಿ 9ಕ್ಕೆ ಹಿಂತಿರುಗಲಿದೆ. ಸಾಮಾನ್ಯ ಸಾರಿಗೆಯಲ್ಲಿ ವಯಸ್ಕರಿಗೆ 200, ಮಕ್ಕಳಿಗೆ 100, ವೋಲ್ವೊ ಬಸ್ ನಲ್ಲಿ ವಯಸ್ಕರಿಗೆ 300 ಹಾಗೂ ಮಕ್ಕಳಿಗೆ 125 ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ.












Click it and Unblock the Notifications