ಹೊರ ರಾಜ್ಯಗಳಲ್ಲಿ ಕೆಎಸ್‌ಒಯು ಕೋರ್ಸ್‌ಗೆ ಪ್ರವೇಶವಿಲ್ಲ
ಮೈಸೂರು, ಜೂ. 22 : ನಿಯಮಗಳನ್ನು ಉಲ್ಲಂಘಿಸಿದ ಕಾರಣ ಕೆಎಸ್‌ಒಯುದ 2012-13ನೇ ಶೈಕ್ಷಣಿಕ ವರ್ಷದ ನಂತರದ ಎಲ್ಲಾ ಕೋರ್ಸ್‌ಗಳ ಮಾನ್ಯತೆಯನ್ನು ಅಸಿಂಧುಗೊಳಿಸಿ ಯುಜಿಸಿ ಆದೇಶ ಹೊರಡಿಸಿದೆ. ಸದ್ಯ, ಹೊರ ರಾಜ್ಯಗಳಲ್ಲಿ ಕೆಎಸ್‌ಒಯು ತನ್ನ ಚಟುವಟಿಕೆಯನ್ನು ಸ್ಥಗಿತಗೊಳಿಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಹೊರ ರಾಜ್ಯದಲ್ಲಿ ನಡೆಸುತ್ತಿರುವ ಎಲ್ಲ ಕೋರ್ಸ್‌ಗಳನ್ನು ಸ್ಥಗಿತಗೊಳಿಸುವಂತೆ ಮತ್ತು ಈ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ನಡೆಸದಂತೆ ಉನ್ನತ ಶಿಕ್ಷಣ ಇಲಾಖೆಯು ಕುಲಪತಿ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಅವರಿಗೆ ಸೂಚನೆ ನೀಡಿದೆ. [ಯುಜಿಸಿ ಶಾಕ್: ಕೆಎಸ್ಒಯು ಮಾನ್ಯತೆ ರದ್ದು?]

ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್ ಲಾಲಾ ಮೀನಾ ಅವರು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದಾರೆ. ಕೆಎಸ್‌ಒಯು ತನ್ನ ಚಟುವಟಿಕೆಗಳನ್ನು ಕರ್ನಾಟಕ ರಾಜ್ಯಕ್ಕೇ ಸೀಮಿತಗೊಳಿಸಬೇಕು ಎಂದು ಪತ್ರದಲ್ಲಿ ಸ್ಪಷ್ಟವಾದ ಸೂಚನೆ ನೀಡಲಾಗಿದೆ.
ಹೊರ ರಾಜ್ಯಗಳಲ್ಲಿನ ತಾಂತ್ರಿಕ, ವೈದ್ಯಕೀಯ, ಪ್ಯಾರಾ ಮೆಡಿಕಲ್ ಮತ್ತು ನರ್ಸಿಂಗ್ ಕೋರ್ಸ್‌ಗಳನ್ನು ಸ್ಥಗಿತಗೊಳಿಸಬೇಕು. ಈಗಾಗಲೇ ಸ್ಥಗಿತಗೊಳಿಸಿದ್ದರೆ, ಆ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಕೋರ್ಸ್‌ಗಳಿಗೆ ಈ ಬಾರಿ ಪ್ರವೇಶ ಪ್ರಕ್ರಿಯೆ ನಡೆಸಬಾರದು ಎಂದು ಸ್ಪಷ್ಟಪಡಿಸಲಾಗಿದೆ.
ಹಿಂದೆಯೂ ವರದಿ ಕೇಳಿತ್ತು : ಮುಕ್ತ ವಿಶ್ವವಿದ್ಯಾಲಯ ತನ್ನ ವ್ಯಾಪ್ತಿಯನ್ನು ಮೀರಿ ಹೊರ ರಾಜ್ಯಗಳಲ್ಲಿ ಕೋರ್ಸ್‌ಗಳನ್ನು ಆರಂಭಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಇದರ ಅನ್ವಯವೇ ಯುಜಿಸಿ ಮಾರ್ಗಸೂಚಿ ಸಿದ್ಧಪಡಿಸಿದೆ.
ಕೆಎಸ್‌ಒಯು ಹೊರ ರಾಜ್ಯಕ್ಕೆ ಚಟುವಟಿಕೆ ವಿಸ್ತರಿಸಿರುವ ಕುರಿತು ಹಿಂದೆಯೇ ಉನ್ನತ ಶಿಕ್ಷಣ ಇಲಾಖೆ ವರದಿ ಕೇಳಿತ್ತು. ಆದರೆ, ವಿಶ್ವವಿದ್ಯಾಲಯ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸದ್ಯ, ನಿಯಮ ಉಲ್ಲಂಘನೆ ಮಾಡಿರುವುದಕ್ಕಾಗಿ ಕೋರ್ಸ್‌ಗಳ ಮಾನ್ಯತೆ ರದ್ದು ಮಾಡಲಾಗಿದೆ.












Click it and Unblock the Notifications