ಖಾಲಿಯಾಗುತ್ತಿರುವ ಕಾವೇರಿ, ಕಬಿನಿ ಒಡಲು: ಎದುರಾಗಿದೆ ಜಲಕ್ಷಾಮದ ಭೀತಿ
ಮೈಸೂರಿನಲ್ಲಿ ರಣ ಬಿಸಿಲು ತಾಂಡವವಾಡವಾಗುತ್ತಿದೆ. ಪ್ರಮುಖ ನೀರಿನ ಮೂಲಗಳಾದ ಕಬಿನಿ ಮತ್ತು ಕಾವೇರಿ ಜಲಾಶಯಗಳು ಬರಿದಾಗುತ್ತಿವೆ. ಬೋರ್‌ವೆಲ್‌ಗಳಲ್ಲಿ ನೀರು ಬತ್ತಿ ಹೋಗಿದೆ. ಬೇಸಿಗೆ ಇನ್ನೂ ಆರಂಭವೇ ಆಗಿಲ್ಲ. ಆಗಲೇ ನಗರದ ಕೆಲವು ಬಡಾವಣೆಗಳಲ್ಲಿ ಎರಡು ದಿನಕ್ಕೊಮ್ಮೆ ಕುಡಿಯುವ ನೀರು ಬರುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಬಾರದಿದ್ದರೆ ಭವಿಷ್ಯದಲ್ಲಿ ಜಲಕ್ಷಾಮ ಎದುರಾಗಲಿದೆ.
ಮೈಸೂರು ನಗರಕ್ಕೆ 230 ಎಂಎಲ್‌ಡಿ ನೀರಿನ ಅವಶ್ಯಕತೆ ಇದೆ. 60 ಎಂಎಲ್‌ಡಿ ನೀರನ್ನು ನಗರದ ಹೊರವಲಯ, ರಮ್ಮನಹಳ್ಳಿ ಸೇರಿದಂತೆ 48 ಹಳ್ಳಿಗಳು, ಕೈಗಾರಿಕೆಗಳು ಹಾಗೂ ಮುಡಾ ಬಡಾವಣೆಗಳಿಗೆ ವಿತರಣೆ ಮಾಡಲಾಗುತ್ತದೆ. ಪ್ರಸ್ತುತ ಕೆಆರ್‌ಎಸ್‌ನಲ್ಲಿ 90.63 ಅಡಿ ನೀರಿದೆ. ಅದರಲ್ಲಿ ಡೆಡ್‌ಸ್ಟೋರೇಜ್ ಸೇರಿ 16.317 ಟಿಎಂಸಿ ನೀರು ಇದ್ದು, 12 ಟಿಎಂಸಿ ಬಳಕೆಗೆ ಲಭ್ಯವಿದೆ. ಕಬಿನಿಯಲ್ಲಿ 2270.55 ಅಡಿ ನೀರಿದೆ. ಡೆಡ್‌ಸ್ಟೋರೇಜ್ ಸೇರಿ 11.95 ಟಿಎಂಸಿ ನೀರಿದೆ. ಮೈಸೂರು ನಗರದಲ್ಲಿ 13.50 ಲಕ್ಷ ಜನಸಂಖ್ಯೆ ಇದ್ದು, ವಾರ್ಷಿಕ 3.5 ಟಿಎಂಸಿ ನೀರು ಕುಡಿಯಲು ಬೇಕಾಗಿದೆ.

ನಗರಕ್ಕೆ ನಿತ್ಯವೂ ಸರಬರಾಜಾಗುವ 305 ಎಂಎಲ್‌ಡಿ ನೀರಿ ನಲ್ಲಿ ಶೇ. 65ರಷ್ಟು ನೀರಿಗೆ ಮಾತ್ರ ಕಂದಾಯ ಸಂಗ್ರಹವಾಗುತ್ತಿದೆ. ಇನ್ನುಳಿದ ಅಂದಾಜು ಶೇ. 35ರಷ್ಟು ನೀರಿಗೆ ಬಿಲ್ ಪಾವತಿಯಾಗುತ್ತಿಲ್ಲ. ಹೀಗಾಗಿ ಇಷ್ಟು ಪ್ರಮಾಣದ ನೀರಿನಲ್ಲಿ ಎಷ್ಟು ವ್ಯರ್ಥವಾಗಿ ಹರಿದು ಹೋಗುತ್ತಿದೆಯೇ? ಎಲ್ಲಾದರೂ ಲೀಕೇಜ್ ಇದೆಯೇ? ಅಕ್ರಮ ಸಂಪರ್ಕಕ್ಕೆ ಬಳಕೆಯಾಗುತ್ತಿದೆಯೇ? ಎಂಬುದನ್ನು ಪತ್ತೆ ಮಾಡಬೇಕಿದೆ. ಆದರೆ, ಪಾಲಿಕೆಯಿಂದ ಈ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ.
ಟ್ಯಾಂಕರ್ ಮುಖಾಂತರ ನೀರು ಪೂರೈಕೆ
ಸದ್ಯ ನಗರಕ್ಕೆ ನಿತ್ಯವೂ ಟ್ಯಾಂಕರ್ ಮುಖಾಂತರ 0.5 ಎಂಎಲ್‌ಡಿ ನೀರು ಸರಬರಾಜು ಮಾಡಲಾಗುತ್ತಿದೆ. ಬೇಸಿಗೆಯಲ್ಲಿ ಈ ಬೇಡಿಕೆ ಎರಡು ಅಥವಾ ಮೂರು ಪಟ್ಟು ಜಾಸ್ತಿಯಾಗುವುದರಿಂದ ಮೈಸೂರು ಮಹಾನಗರ ಪಾಲಿಕೆ ಈ ಬಾರಿ ಹೆಚ್ಚುವರಿಯಾಗಿ 20 ಕುಡಿವ ನೀರು ಸರಬರಾಜು ಟ್ಯಾಂಕರ್ ಬಳಸಲು ನಿರ್ಧರಿಸಿದೆ. ಮಾತ್ರವಲ್ಲದೇ ಟ್ಯಾಂಕರ್‌ಗೆ ನೀರು ತೆಗೆದುಕೊಳ್ಳಲು 30 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿದೆ.
'ದೀಪದ ಕೆಳಗೆ ಕತ್ತಲು' ಎಂಬಂತೆ ಕಾವೇರಿ ಮತ್ತು ಕಪಿಲಾ ನದಿಗಳು ಕೂಗಳತೆ ದೂರದಲ್ಲಿದ್ದರೂ ಮೈಸೂರಿಗೆ ನೀರಿನ ಬವಣೆ ತಪ್ಪಿಲ್ಲ. ಈ ಬಾರಿ ಮುಂಗಾರು ಕೈಕೊಟ್ಟ ಪರಿಣಾಮ ನಗರದ ಪ್ರಮುಖ ನೀರಿನ ಮೂಲಗಳಾದ ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ದಿನೇದಿನೆ ಕುಸಿಯುತ್ತಿದೆ. ಮೈಸೂರು ನಗರಕ್ಕೆ ನಾಲ್ಕು ಕಡೆಯಿಂದ ನೀರು ಸರಬರಾಜು ಮಾಡಲಾಗುತ್ತಿದ್ದರೂ ನೀರಿನ ಹಾಹಾಕಾರ ನಿಂತಿಲ್ಲ. ನೀರಿಗಾಗಿ ಬೋರ್ ಕೊರೆಯುವುದು ಸಾಮಾನ್ಯವಾಗಿದೆ. ಬೋರ್‌ವೆಲ್‌ನಿಂದ ಫ್ಲೋರೈಡ್‌ಯುಕ್ತ ನೀರು ಪೂರೈಕೆಯಿಂದಾಗಿ ಜನರ ಆರೋಗ್ಯದ ಮೇಲೆಯೂ ದುಷ್ಟರಿಣಾಮ ಬೀರಿದೆ.
ನೀರಿನ ಘಟಕಕ್ಕೆ ಡಿಮ್ಯಾಂಡ್
ನಗರದಲ್ಲಿ ಶುದ್ಧ ನೀರಿನ ಘಟಕಕ್ಕೆ ಬೇಡಿಕೆ ಸೃಷ್ಟಿಯಾಗಿದೆ. 5 ರೂ. ಕಾಯಿನ್ ಮೂಲಕ ನೀರು ಖರೀದಿಸುವವರ ಸಂಖ್ಯೆ ದುಪ್ಪಟ್ಟಾಗಿದೆ. ಯಾವ ಘಟಕದಲ್ಲಿ ನೋಡಿದರೂ ಜನರ ಸಾಲು ಕಂಡುಬರುತ್ತಿದೆ. ಇನ್ನು ಕಲಾಮಂದಿರದ ಅಪಾರ್ಟ್‌ಮೆಂಟ್‌ನಲ್ಲಿ 80 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಇಲ್ಲ. ಪೈಪ್‌ಲೈನ್ ಕಾಮಗಾರಿಯು ದುರಸ್ತಿಯಲ್ಲಿದೆ.
ಕಾವೇರಿನಗರ, ಐಶ್ವರ್ಯ ನಗರ, ನ್ಯಾಯಾಂಗ ಬಡಾವಣೆ, ರವಿಶಂಕರ್ ಬಡಾವಣೆಗಳು ಇಂದಿಗೂ ಬೋರ್‌ವೆಲ್ ನೀರನ್ನೇ ಆಶ್ರಯಿಸಿವೆ. ಕುವೆಂಪುನಗರ, ಮೇಟಗಳ್ಳಿಘಿ, ಬಿಎಂಶ್ರೀ ನಗರ, ಕುಂಬಾರಕೊಪ್ಪಲು, ಕೆಜಿ ಕೊಪ್ಪಲು, ಟಿ.ಕೆ.ಲೇಔಟ್, ಗಾಂಧಿನಗರ, ಎನ್‌ಆರ್ ಮೊಹಲ್ಲಾಘಿ, ವಿಜಯನಗರ ನಾಲ್ಕನೇ ಹಂತ ಸೇರಿದಂತೆ ಕೆಲವು ಕಡೆ ನಿತ್ಯ ಎರಡು ಗಂಟೆ ನೀರು ಬಂದರೆ ಹೆಚ್ಚು. ಉಳಿದ ಕಡೆ ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ.












Click it and Unblock the Notifications