KRS Dam: ನಾಳೆಯಿಂದ 15ದಿನ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ, ವಿವರ
ಬೆಂಗಳೂರು, ಜುಲೈ 07: ಕೊಡಗು, ಮಡಿಕೇರಿ, ಮಂಗಳೂರು, ಉತ್ತರ ಕನ್ನಡ ಸೇರಿದಂತೆ ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆ ಆಗುತ್ತಿದೆ. ಕಳೆದ ಎರಡು ವಾರದಿಂದ ಮಲೆನಾಡು ಹಾಗೂ ಕಾವೇರಿ ಜಲಾಯನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಅಬ್ಬರಿಸುತ್ತಿದೆ. ಹೀಗಾಗಿ ಕೆಆರ್‌ಎಸ್ ಆಣೆಕಟ್ಟು ಹಾಗೂ ಇನ್ನಿತರ ಜಲಾಶಯಗಳು ತುಂಬಿ ಹರಿಯುತ್ತಿವೆ. ಇದೀಗ KRS ನಿಂದ 15 ದಿನ ಬಿಡುಗಡೆಗೆ ತೀರ್ಮಾನಿಸಲಾಗಿದೆ.
ಭಾರೀ ಮಳೆಗೆ ಕೃಷ್ಣ ರಾಜ ಸಾಗರ ಜಲಾಶಯದಲ್ಲಿ (KRS Dam) ಒಳಹರಿವು ಇಂದು ಭಾನುವಾರ (ಜುಲೈ 7) 11,027 ಕ್ಯೂಸೆಕ್ ನೀರು ಕಂಡು ಬಂದಿದೆ. ನಿರಂತರ ಮಳೆಗೆ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಗರಿಷ್ಠ ಮಟ್ಟ 100 ಅಡಿಗೂ ಮೀರಿ ದಾಟಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಿಂದಾಗಿ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಇದರಿಂದ ನೀರಾವರಿಗೆ, ಕುಡಿಯಲು ಅನುಕೂಲವಾಗುತ್ತಿದೆ. ಮುಂದಿನ ಮಳೆಗಾಲವರೆಗೆ ನೀರು ಲಭ್ಯಾಗುವ ನಿರೀಕ್ಷಿ ಇದೆ. ಸದ್ಯ ನೀರು ಹೇರವಾಗಿ ಡ್ಯಾಂ ನಲ್ಲಿ ಭರ್ತಿ ಆದ ಕಾರಣ ಎರಡು ವಾರಗಳವರೆಗೆ ನಿರಂತರವಾಗಿ ನೀರು ಬಿಡುಗಡೆಗೆ ನೀರ್ಧರಿಸಲಾಗಿದೆ.
KRS Dam ನಿಂದ ನಾಳೆ ಜುಲೈ 8 ರ ಸಂಜೆಯಿಂದ ಮುಂದಿನ 15 ದಿನಗಳವರೆಗೆ (ಜುಲೈ 22ರವರೆಗೆ) ಕಾಲುವೆ, ನದಿಗಳು ಸೇರಿದಂತೆ ಜಲಾನಯನ ಪ್ರದೇಶಗಳಿಗೆ ಬಿಡುಗಡೆ ಮಾಡಲಾತ್ತದೆ. ಈ ನಿರನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ.
ಜಲಾನಯನ ಪ್ರದೇಶದ ಕೆರೆಗಳನ್ನು ತುಂಬಿಸಲು ಮತ್ತು ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ನೀರು ಬಿಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಭಾನುವಾರ ಮಾಹಿತಿ ನೀಡಿದೆ.

ಮಂಡ್ಯ ಉಸ್ತುವಾರಿ ಸಚಿವರು ಹೇಳಿದ್ದೇನು?
ಈ ಕಾವೇರಿ ನೀರು ಬಿಡುವುದು ಬೆಳೆಗಳಿಗೆ ಅಲ್ಲ. ಹತ್ತು ದಿನಗಳ ನಂತರ ಬೆಳೆಗಳಿಗೆ ನೀರು ಬಿಡುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಮಳೆ ಮತ್ತು ಅಣೆಕಟ್ಟಿಗೆ ಒಳಹರಿವು ಆಧರಿಸಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಅಂದರೆ ಸದ್ಯ ಮಳೆ ಆಗುತ್ತಿದೆ. ಅದರಿಂದಲೇ ಬೆಳೆಗಳಿಗೆ ತಕ್ಕ ಮಟ್ಟಿಗೆ ನೀರು ಸಿಗುತ್ತದೆ. ಸದ್ಯ ಬರಗಾಲದಿಂದ ಒಣಗಿರುವ ಕೆರೆ, ಕಟ್ಟೆಗಳು ಇನ್ನಿತರ ಜಲಮೂಲಗಳನ್ನು ತುಂಬಿಸಲು ಈ ಜಲಾಶಯ ನೀರು ಬಿಡುಗಡೆ ಮಾಡಲಾಗುತ್ತಿದೆ.
KRS ಇಂದಿನ ನೀರಿನ ಮಟ್ಟ ಎಷ್ಟಿದೆ?
ವ್ಯಾಪಕ ಮಳೆಯಿಂದಾಗಿ ಮಂಡ್ಯದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕೆಆರ್ ಎಸ್ ನಲ್ಲಿ ಇಂದು ಭಾನುವಾರ 11,027 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಒಟ್ಟು 124.80 ಅಡಿಯಲ್ಲಿ ಈಗಾಗಲೇ ನೀರಿನ ಸಂಗ್ರಹ 102 ಅಡಿ ಯಷ್ಟು ನೀರು ಸಂಗ್ರಹವಾಗಿದೆ.
ಜಲಾಶಯದ ಒಟ್ಟು 49.452 ಟಿಎಂಸಿ ಇದ್ದು, ಇದರಲ್ಲಿ ಈವರೆಗೆ ಶೇಕಡಾ 49.37ರಷ್ಟು ನೀರು ಸಂಗ್ರಹಾಗಿದೆ. ಇನ್ನೂ ಹೊರ ಹರಿವು 512 ಕ್ಯೂಸೆಕ್ ನಷ್ಟಿದೆ. ಈ ಹೊರ ಹರಿವು ಪೈಕಿ ಕಾಲುವೆಗೆ ನದಿಗೆ ಬಿಡಲಾಗುತ್ತದೆ. ನಾಳೆಯಿಂದ ಹೊರಹರಿವು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೆಆರ್‌ಎಸ್ ಮಾತ್ರವಲ್ಲದೇ ಭಾರೀ ಮಳೆಗೆ ಭದ್ರಾ, ತುಂಗಾ, ಕದ್ರಾ ಜಲಾಶಯ, ಆಲಮಟ್ಟಿ, ಹಾರಂಗಿ ಸೇರಿದಂತೆ ರಾಜ್ಯದ ಸುಮಾರು ಹದಿನಾಲ್ಕು ಪ್ರಮುಖ ಡ್ಯಾಂ ಗಳಲ್ಲಿ ನೀರಿನ ಪ್ರಮಾಣ ಏರಿಕೆ ಆಗುತ್ತಿದೆ. ಆದರೆ ಈ ನೀರು ಇನ್ನಷ್ಟು ಪ್ರಮಾಣದಲ್ಲಿ ಏರಿಕೆ ಆಗಬೇಕಿದೆ. ಕಾರಣ ಮಳೆಗಾಲ ಆರಂಭವಾಗಿ ಎರಡನೇ ತಿಂಗಳ ಮಧ್ಯಭಾಗದಲ್ಲಿದ್ದೇವೆ. ಬೇಸಿಗೆಗೆ ನೀರಿಗೆ ಹೆಚ್ಚು ಬೇಡಿಕೆ ಇರುತ್ತದೆ.
ರಾಜ್ಯದಲ್ಲಿ ಆಲಮಟ್ಟಿ ಜಲಾಶಯದಲ್ಲಿ ಅತ್ಯಧಿಕ ಒಳಹರಿವು ಕಂಡು ಬಂದಿದೆ. ಇತರ ಜಲಾಶಯಗಳಿಗಿಂತ ಇದು ಹೆಚ್ಚಿನ ಒಳಹರಿವು ಎನ್ನಲಾಗಿದೆ.












Click it and Unblock the Notifications