ಮೈಸೂರು ಜಿಲ್ಲೆಯಲ್ಲಿದೆ ಕೋಳಿ ಕೂಗದ ಊರು! ಮದ್ಯ, ಮಾಂಸವಿಲ್ಲದ ಈ ಸ್ಥಳದ ಬಗ್ಗೆ ನೀವು ತಿಳಿಯಲೇಬೇಕು!
ಮೈಸೂರು, ಜನವರಿ 27: ಇದು ಒಂಥರಾ ವಿಶೇಷದ ಊರು. ಇಲ್ಲಿ ಕೋಳಿಗಳೇ ಇಲ್ಲ ಎಂದ ಮೇಲೆ ಕೋಳಿ ಕೂಗುವ ಮಾತೆಲ್ಲಿ? ಇಲ್ಲಿನ ವಿಶೇಷತೆ ತಲೆಮಾರುಗಳಿಂದ ಬಂದಿದ್ದಾಗಿದೆ. ಅದು ಸಂಕನಹಳ್ಳಿ. ಇದು ಕೆ.ಆರ್.ನಗರ ತಾಲೂಕಿನ ಭೇರ್ಯ-ಸಾಲಿಗ್ರಾಮ ಮುಖ್ಯ ರಸ್ತೆಯ ಬಾಚಹಳ್ಳಿ ಗ್ರಾಮದಿಂದ 2ಕಿಮೀ ಅಂತರದಲ್ಲಿದೆ.
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕೋಳಿಗಳ ಕೂಗೇ ಬೆಳಗ್ಗಿನ ಅಲರಾಂ ಎಂಬ ಮಾತಿದೆ. ಆದರೆ ಈ ಊರಿನಲ್ಲಿ ಬೆಳಗ್ಗಿನ ಅಲರಾಂ ಆಗಿ ಕೋಳಿಗಳು ಕೂಗುವುದಿಲ್ಲ ಎಂಬುದೇ ವಿಶೇಷ. ಇಲ್ಲಿ ಮಾಂಸಹಾರವೇ ನಿಷಿದ್ಧವಾಗಿರುವುದರಿಂದ ಕೋಳಿಗಳನ್ನು ಸಾಕುವ ಗೋಜಿಗೆ ಜನ ಹೋಗುವುದಿಲ್ಲ. ಹೀಗಾಗಿ ಕೋಳಿ ಕೂಗು ಕೇಳಿಸುವುದಿಲ್ಲ.

ಇದಕ್ಕೆ ಕಾರಣವೂ ಇದೆ. ಗ್ರಾಮದ ಜನರ ಕಸುಬು ವ್ಯವಸಾಯವಾಗಿದ್ದು, ವಾಸಿಸುವ ಜನರೆಲ್ಲರೂ ಸಸ್ಯಹಾರಿಯಾಗಿರುವುದರಿಂದ ಮಾಂಸಹಾರ ಸೇವನೆ ನಿಷಿದ್ಧವಾಗಿದೆ ಎಂದು ಹೇಳಬಹುದು. ಆದರೆ ಹಿಂದಿನ ತಲೆಮಾರಿನಿಂದಲೂ ಇಲ್ಲಿ ಮಾಂಸಹಾರ ಸೇವಿಸುವುದಿಲ್ಲ. ಅದನ್ನು ಧಿಕ್ಕರಿಸಿ ಗ್ರಾಮದಲ್ಲಿ ಅಡುಗೆ ಮಾಡಿ ಸೇವಿಸಿದರೆ ಕೆಡುಕಾಗಿರುವ ನಿದರ್ಶನವನ್ನು ಜನ ನೀಡುತ್ತಾರೆ. ಬಹಳಷ್ಟು ವರ್ಷಗಳ ಹಿಂದೆ ಗೊಂಬೆ ನಾಟಕ ವಾಡಿಸಲು ಬಂದಂತಹ ಕಲಾವಿದರು ಮಾಂಸ ಹಾರಿಗಳಾಗಿದ್ದು, ಊರಿನಿಂದ ಹೊರಗೆ ಅಡುಗೆ ಮಾಡಿಕೊಂಡು ಊಟ ಮಾಡಿ ನಂತರ ಗ್ರಾಮಕ್ಕೆ ಪ್ರವೇಶ ಮಾಡಿ ಗೊಂಬೆ ಆಡಿಸುತ್ತಿದ್ದರಂತೆ.
ಅದೊಂದು ಘಟನೆ ಬೆಚ್ಚಿ ಬೀಳಿಸಿತ್ತು
ಒಮ್ಮೆ ಗ್ರಾಮದ ಜನಕ್ಕೆ ತಿಳಿಯದ ರೀತಿಯಲ್ಲಿ ಅವರು ಕದ್ದುಮುಚ್ಚಿ ಗ್ರಾಮದೊಳಗೆ ಮಾಂಸದ ಅಡುಗೆ ಮಾಡಿ ಊಟ ಮಾಡಿದ್ದರಂತೆ. ಆದರೆ ಆ ರಾತ್ರಿ ಕಳೆದು ಬೆಳಗಿನ ಹೊತ್ತಿಗೆ ಗೊಂಬೆ ಆಟ ಆಡಿಸುವವರ ಬಳಿಯಿದ್ದ ಮೂರು ಕುದುರೆಗಳು ಸಾವನ್ನಪ್ಪಿದ್ದವಂತೆ. ಇದೊಂದು ಕತೆಯಾಗಿ ಗ್ರಾಮದಲ್ಲಿ ಪ್ರಚಲಿತದಲ್ಲಿರುವುದರಿಂದ ಗ್ರಾಮದ ಒಳಿತಿಗಾಗಿ ಜನ ಹಿಂದಿನ ಸಂಪ್ರದಾಯವನ್ನೇ ಮುಂದುವರೆಸುತ್ತಿದ್ದಾರೆ.
ಇನ್ನು ಸಂಕನಹಳ್ಳಿಯಲ್ಲಿ ಮದ್ಯಕ್ಕೂ ಬಹಿಷ್ಕಾರ ಹಾಕಿದ್ದಾರೆ. ಹಿಂದಿನ ಕಾಲದಲ್ಲಿ ಗ್ರಾಮಕ್ಕೆ ಒಂದೋ ಎರಡೋ ಸಾರಾಯಿ ಅಂಗಡಿಗಳು ಇರುತ್ತಿದ್ದವು. ಆದರೆ ಅವತ್ತಿನ ಕಾಲದಿಂದಲೇ ತಮ್ಮ ಊರಿಗೆ ಸಾರಾಯಿ ಅಂಗಡಿಬೇಡವೆಂದು ಪ್ರತಿಪಾದಿಸುತ್ತಾ ಬಂದವರು ಇಲ್ಲಿನವರು. ಹೀಗಾಗಿ ಇಲ್ಲಿ ಮದ್ಯಪಾನಕ್ಕೂ ಅವಕಾಶ ಮಾಡಿಕೊಡಲಾಗಿಲ್ಲ. ಗ್ರಾಮದ ಜನ ವ್ಯವಸಾಯ ಮಾಡುತ್ತಿದ್ದು, ತರಕಾರಿ, ಭತ್ತ, ರಾಗಿ, ಹೊಗೆಸೊಪ್ಪು ಬೆಳೆಯುತ್ತಾರೆ. ಜೊತೆಗೆ ಹಸು, ಎಮ್ಮೆ, ಕುರಿ, ಮೇಕೆಗಳನ್ನು ಸಾಕುತ್ತಾರೆ.

ಪರಶಿವನಿಂದ ಅನುಗ್ರಹ ಪಡೆದ ನಂದಿ
ಸಂಕನಹಳ್ಳಿ ಗ್ರಾಮದ ಬಗ್ಗೆ ಹೇಳುವುದಾದರೆ ಇಲ್ಲಿನ ಬಸವೇಶ್ವರ ದೇಗುಲದಲ್ಲಿರುವ ನಂದಿಯು ಪರಶಿವನಿಂದ ಅನುಗ್ರಹ ಪಡೆದು ನೆಲೆಸಿದೆ ಎಂಬ ನಂಬಿಕೆ ಗ್ರಾಮಸ್ಥರದ್ದಾಗಿದೆ. ಈ ದೇಗುಲದಲ್ಲಿರುವ ಬಸವೇಶ್ವರನಿಗೆ ಪ್ರತಿದಿನವೂ ತಪ್ಪದೆ ಪೂಜೆ ನಡೆಯುತ್ತಿದೆಯಲ್ಲದೆ, ಗ್ರಾಮದ ಜನರಿಗೆ ಬಸವೇಶ್ವರ ಆರಾಧ್ಯ ದೈವನಾಗಿದ್ದಾನೆ. ಗ್ರಾಮದಲ್ಲಿ ನೀರು ಬಳಕೆದಾರರ ಸಹಕಾರ ಸಂಘ ಹಾಗೂ ಮಹಿಳಾ ಸ್ವ-ಸಹಾಯ ಸಂಘಗಳು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಮದ್ಯಪಾನವು ಗ್ರಾಮದಲ್ಲಿ ಸಂಪೂರ್ಣವಾಗಿ ನಿಷೇಧವಾಗಿದೆ.
ಇಷ್ಟೇ ಅಲ್ಲದೆ, ಗ್ರಾಮದ ಒಳಿತಿಗಾಗಿ ಗ್ರಾಮಸ್ಥರು ಒಟ್ಟಾಗಿ ಸೇರಿ ಪ್ರತಿ ವರ್ಷವೂ ಬಂಡಿ ಹಬ್ಬವನ್ನು ಆಚರಿಸುತ್ತಾ ಬರಲಾಗುತ್ತಿದ್ದು, ಈ ವೇಳೆ ಪಕ್ಕದ ಗ್ರಾಮವಾದ ಮೇಲೂರಿನಿಂದ ಶ್ರೀಶಂಭುಲಿಂಗೇಶ್ವರ ದೇವರನ್ನು ತಂದು ತಮ್ಮ ಊರಿನ ಮಧ್ಯಭಾಗದಲ್ಲಿರುವ ಕುರ್ಜಿನಲ್ಲಿ ಪ್ರತಿಷ್ಠಾಪಿಸಿ ಭಕ್ತಿಭಾವಗಳಿಂದ ಪೂಜಿಸುವುದು ಇಲ್ಲಿನ ಸಂಪ್ರದಾಯವಾಗಿದೆ.

ಒಟ್ಟಾರೆ ಹೇಳಬೇಕೆಂದರೆ ಗ್ರಾಮದ ಅಭಿವೃದ್ಧಿಗೆ ಏನೆಲ್ಲ ಬೇಕೋ ಅದೆಲ್ಲವನ್ನು ಮಾಡುತ್ತಿರುವ ಜನ ಮದ್ಯ ಮಾಂಸದಿಂದ ದೂರವಿದ್ದಾರೆ ಹೀಗಾಗಿಯೇ ಈ ಊರು ಇತರೆ ಊರುಗಳಿಗಿಂತ ವಿಶೇಷವಾಗಿ ಕಾಣಿಸುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಮ್ಮ ದೇಶ ವಿಭಿನ್ನ, ವಿಶಿಷ್ಟ ಸಂಪ್ರದಾಯ, ಆಚರಣೆ ಹೊಂದಿದ್ದು ಅದಕ್ಕೆ ಸಂಕನಹಳ್ಳಿ ಸಾಕ್ಷಿಯಾಗಿದೆ.












Click it and Unblock the Notifications