Get Updates
Get notified of breaking news, exclusive insights, and must-see stories!

ಭವಿಷ್ಯದ ಅಂಬಾರಿ ಆನೆ ಆಗ್ತಾನಾ ಕಂಜನ್?, ಯಾಕೆ ಈ ಪ್ರಶ್ನೆ ಅಂತೀರಾ ಇಲ್ಲಿವೆ ಕುತೂಹಲಕಾರಿ ಅಂಶಗಳು

ಮೈಸೂರು, ಅಕ್ಟೋಬರ್‌, 22: ಮೈಸೂರು ಅರಮನೆಯಲ್ಲಿ ಬೀಡು ಬಿಟ್ಟು ಅಕ್ಟೋಬರ್‌ 24ರ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಪಾಲ್ಗೊಳ್ಳಲು ಸರ್ವ ರೀತಿಯಲ್ಲಿ ಸಜ್ಜಾಗುತ್ತಿರುವ 14 ಗಜಪಡೆಗಳ ನಡುವೆ ಕಂಜನ್ ಆನೆ ಗಮನ ಸೆಳೆಯುತ್ತಿದೆ. ಇದಕ್ಕೆ ಜಂಬೂಸವಾರಿ ಹೊಸದಾಗಿದೆ. ಆದರೂ ಬಹುಬೇಗವೇ ನಗರದ ವಾತಾವರಣಕ್ಕೆ ಹೊಂದಿಕೊಂಡು ದಸರಾ ತಾಲೀಮಿನಲ್ಲೂ ಸೈ ಎನಿಸಿಕೊಂಡಿರುವುದರಿಂದ ಭವಿಷ್ಯದ ಅಂಬಾರಿ ಆನೆ ಆಗುತ್ತಾನಾ ಎಂಬ ಪ್ರಶ‍್ನೆಗಳು ಹುಟ್ಟಿಕೊಂಡಿವೆ.

ಕಂಜನ್ ಆನೆಯನ್ನು ಗಮನಿಸಿದರೆ ಅದು ಮುಂದಿನ ಅಂಬಾರಿ ಆನೆ ಆಗುವ ಲಕ್ಷಣಗಳು ಎದ್ದು ಕಾಣಿಸುತ್ತಿದೆ. ಇದಕ್ಕೆ ಇದೇ ಮೊದಲ ಜಂಬೂಸವಾರಿ ಆಗಿದ್ದರೂ ಅದು ಎಲ್ಲದಕ್ಕೂ ಹೊಂದಿಕೊಂಡು ಮಾವುತರು ಮತ್ತು ಕಾವಾಡಿಗಳು ಹೇಳಿದಂತೆ ಕೇಳಿಕೊಂಡು ಮುನ್ನಡೆಯುತ್ತಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆಯಿಂದ ನೋಡಿದರೆ ಅಂಬಾರಿ ಹೋರಲು ಸಹಕಾರಿ ಆಗುವಂತಹ ದೇಹವನ್ನು ಹೊಂದಿರುವುದು ಭರವಸೆ ಮೂಡಿಸಿದೆ.

Know interesting facts of Kanjan elephant

ಅಂಬಾರಿ ಆನೆ ಆಗುವುದು ಸುಲಭವಲ್ಲ. ಬಲಿಷ್ಠವಾದ ಮತ್ತು ಆಕರ್ಷಕ ದೇಹಧಾರ್ಡ್ಯ ಹೊಂದಿರಬೇಕು, ನೋಡಲು ಆಕರ್ಷಕವಾಗಿರಬೇಕು, ಸಾಧು ಸ್ವಭಾವ, ಹೇಳಿದ ಮಾತನ್ನು ಕೇಳುವ ಗುಣವಿರಬೇಕು. ಇದೆಲ್ಲವೂ ಮೇಲ್ನೋಟಕ್ಕೆ ಕಂಜನ್ ಆನೆಯಲ್ಲಿದೆ. ಹೀಗಾಗಿ ಅದನ್ನು ಜಂಬೂಸವಾರಿಗೆ ಕರೆತಂದು ತಾಲೀಮು ನೀಡಿ ತಯಾರುಗೊಳಿಸುವ ಕೆಲಸವನ್ನು ಈ ವರ್ಷದಿಂದಲೇ ಆರಂಭಿಸಲಾಗಿದೆ.

2014ರಲ್ಲಿ ಹಾಸನ ಜಿಲ್ಲೆಯಲ್ಲಿ ಸೆರೆ

ಕಂಜನ್ ಆನೆ ಈಗಿರುವ ಜಂಬೂಸವಾರಿ ಗಜಪಡೆಗಳ 14 ಆನೆಗಳ ಪೈಕಿ 9 ಕಿರಿಯ ಆನೆಗಳಲ್ಲಿ ಇದು ಒಂದಾಗಿದೆ. ಸದ್ಯ ಇದಕ್ಕೆ 24ವರ್ಷ ವಯಸ್ಸಾಗಿದ್ದು, ಮೊದಲು ಇದು ಕೂಡ ಪುಂಡಾನೆಯಾಗಿತ್ತು. ಎಲ್ಲ ಆನೆಗಳಂತೆ ಕಾಡಿನಿಂದ ಹೊರ ಬಂದು ರೈತರ ತೋಟಗಳಿಗೆ ನುಗ್ಗಿ ಉಪಟಳ ನೀಡುತ್ತಿತ್ತು. ಹೀಗಾಗಿಯೇ ಇದು 2014ರಲ್ಲಿ ಹಾಸನ ಜಿಲ್ಲೆಯ ಆಲೂರಿನಲ್ಲಿ ಉಪಟಳ ನೀಡುತ್ತಿದ್ದಾಗ ನಡೆಸಿದ ಆನೆ ಸೆರೆ ಕಾರ್ಯಾಚರಣೆಯಲ್ಲಿ ಇದು ಸೆರೆ ಸಿಕ್ಕಿತ್ತು. ಆ ನಂತರ ಅದನ್ನು ತಂದು ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಪಳಗಿಸಲಾಯಿತು.

ಬಹುಬೇಗವೇ ತಯಾರಾದ ಕಂಜನ್ ದುಬಾರೆ ಆನೆ ಶಿಬಿರದಲ್ಲಿದ್ದುಕೊಂಡೇ ತನ್ನ ಕಾರ್ಯವನ್ನು ಆರಂಭಿಸಿದ್ದು, ಸೆರೆ ಸಿಕ್ಕಾಗ ಪುಂಡನಾಗಿದ್ದ ಈತ ಮೂರು ತಿಂಗಳಲ್ಲೇ ಶಿಬಿರದ ನೆಚ್ಚಿನ ಆನೆಯಾಗಿದ್ದು ವಿಶೇಷ. ಇದೀಗ ಈತ ಕಾಡಾನೆಗಳ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾನೆ. ದುಬಾರೆ ಆನೆ ಶಿಬಿರದಲ್ಲಿದ್ದ ಕಂಜನ್ ಆನೆ ಮೈಸೂರು ಜಂಬೂಸವಾರಿಯಲ್ಲಿ ಸ್ಥಾನ ಪಡೆದಿದ್ದು ಕೂಡ ಆಕಸ್ಮಿಕವೇ.

ಜಂಬೂಸವಾರಿಗೆ ಆಯ್ಕೆಯಾಗಿದ್ದು ಹೇಗೆ?

ಈ ಬಾರಿಯ ದಸರಾ ಮಹೋತ್ಸವಕ್ಕೆ ಬಂಡೀಪುರದ ಪಾರ್ಥಸಾರಥಿ ಆನೆಯನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಈ ಆನೆಗೆ ಮದ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಅದನ್ನು ಜಂಬೂಸವಾರಿಯಿಂದ ಹೊರಗಿಡಲಾಯಿತು. ಅದರ ಸ್ಥಾನಕ್ಕೆ ಯಾವುದನ್ನು ಕರೆತರುವುದು ಎಂದು ಅರಣ್ಯಾಧಿಕಾರಿಗಳು ಯೋಚಿಸುತ್ತಿರುವಾಗಲೇ ಅವರ ಮುಂದೆ ಬಂದಿದ್ದೇ ಕಂಜನ್ ಆನೆ. ಅದನ್ನು ಆಯ್ಕೆ ಮಾಡಿದ್ದರಿಂದ ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಿತು.

ಇನ್ನು ಕಂಜನ್ ಆನೆಯನ್ನು ಮೊದಲಿನಿಂದಲೂ ಮಾವುತ ಗೋಪಾಲ ನೋಡಿಕೊಳ್ಳುತ್ತಾ ಬಂದಿದ್ದರು. ಆದರೆ, ಅವರು ಅನಾರೋಗ್ಯಕ್ಕೀಡಾದ ಕಾರಣ ಅವರ ಬದಲಿಗೆ ಜೆ.ಬಿ.ವಿಜಯ ಅವರು ನೋಡಿಕೊಳ್ಳುತ್ತಿದ್ದು, ಕಾವಾಡಿಯಾಗಿ ಮಣಿಕಂಠ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಸದ್ಯ ಇವರ ಪೋಷಣೆ ಮತ್ತು ನಿರ್ವಹಣೆಯಲ್ಲಿ ಕಂಜನ್ ಮುನ್ನಡೆಯುತ್ತಿದ್ದಾನೆ. ಜಂಬೂಸವಾರಿಗೆಂದು ಮೊದಲಿಗೆ ಮೈಸೂರಿಗೆ ಕರೆತಂದಾಗ ಈತ ನಗರದ ವಾತಾವರಣಕ್ಕೆ ಹೊಂದಿಕೊಳ್ಳುತ್ತಾನಾ? ಎಂಬ ಭಯ ಕಾಡಿತ್ತು. ಆದರೆ ಅದು ಎಲ್ಲದಕ್ಕೂ ಹೊಂದಿಕೊಂಡು ಸಿಡಿ ಮದ್ದಿಗೆ ಹೆದರದೆ ನಿಲ್ಲುವುದು ಈತನ ಧೈರ್ಯಕ್ಕೆ ಸಾಕ್ಷಿಯಾಗಿದೆ.

ಹೇಗಿದೆ ಕಂಜನ್ ಆನೆ ದೇಹದಾರ್ಢ್ಯ

ಕಂಜನ್ ಆನೆ ಮೈಕಟ್ಟಿನ ಬಗ್ಗೆ ಹೇಳಬೇಕೆಂದರೆ 4,395 ಕೆಜಿ ತೂಕವಿದೆ. 2.62 ಮೀಟರ್ ಎತ್ತರ ಹಾಗೂ 3.30ಮೀಟರ್ ಉದ್ದವಿದ್ದು, ದಂತ, ದೇಹ ರಚನೆ, ಸಮತಟ್ಟಾಗಿದ್ದು, ಬೆನ್ನು ಅಂಬಾರಿ ಇಡಲು ಸೂಕ್ತವಾಗಿದೆ. ಹೀಗಾಗಿಯೇ ಇದು ಮುಂದಿನ ಅಂಬಾರಿ ಆನೆಯಾಗಬಹುದು ಎಂಬ ನಿರೀಕ್ಷೆಯಾಗಿದೆ. ಇಷ್ಟೇ ಅಲ್ಲದೆ ಇದು ಸೆರೆ ಸಿಕ್ಕ ಎರಡು, ಮೂರು ತಿಂಗಳಿನಲ್ಲೇ ಶಿಬಿರದ ನೆಚ್ಚಿನ ಆನೆಯಾಗಿರುವುದು ವಿಶೇಷ.

ಶಾಂತ ಸ್ವಭಾವ, ಧೈರ್ಯಶಾಲಿ. ಹುಲಿ, ಆನೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಹೆಗ್ಗಳಿಕೆಯಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಕೊಡಗಿನಲ್ಲಿ ನಡೆದ ಹುಲಿ ಸೆರೆ ಕಾರ್ಯಾಚರಣೆ, ದಕ್ಷಿಣಕನ್ನಡದ ಕಡಬಾದಲ್ಲಿ ನಡೆದ ಪುಂಡಾನೆ ಸೆರೆ ಕಾರ್ಯಾಚರಣೆಯಲ್ಲೂ ಭಾಗಿಯಾದ ಖ್ಯಾತಿ ಹೊಂದಿದೆ. ಈಗಾಗಲೇ ನಡೆದ ಜಂಬೂಸವಾರಿ ತಾಲೀಮಿನಲ್ಲಿ ಕಂಜನ್ ಆನೆ ಉತ್ತಮ ಪ್ರತಿಕ್ರಿಯೆ ನೀಡಿದ್ದು, ಮಂಗಳವಾರ ನಡೆಯಲಿರುವ ಜಂಬೂಸವಾರಿಯಲ್ಲಿ ಭಾಗವಹಿಸಿ ಸೈ ಎನಿಸಿಕೊಳ್ಳಲಿದ್ದಾನೆ.

ಜವಬ್ದಾರಿ ನಿಭಾಯಿಸಲಿರುವ ಕಂಜನ್

ಒಟ್ಟಾರೆಯಾಗಿ ಹೇಳಬೇಕೆಂದರೆ ಮೈಸೂರು ದಸರಾದಲ್ಲಿ ದಸರಾ ಜಂಬೂಸವಾರಿ ಅಂತಿಮಘಟ್ಟವಾಗಿದ್ದು, ಇದನ್ನು ಯಶಸ್ಸುಗೊಳಿಸುವುದು ಮತ್ತು ಆಕರ್ಷಣೆ ನೀಡುವುದು ಗಜಪಡೆಯಾಗಿದೆ. ಈ ಗಜಪಡೆಯನ್ನು ತಯಾರು ಮಾಡಿ ಅವುಗಳನ್ನು ಸಿಂಗಾರಗೊಳಿಸಿ ಅಣಿಮಾಡುವುದು ಸುಲಭದ ಕೆಲಸವಲ್ಲ. ಆದರೂ ಅದನ್ನು ಮಾಡಲಾಗುತ್ತಿದೆ. ಈ ಬಾರಿ ಕಂಜನ್ ಆನೆ ಹೇಗೆ ಜವಬ್ದಾರಿ ನಿಭಾಯಿಸುತ್ತಾನೆ ಎಂಬುದನ್ನು ಕಾದುನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+