ಈ ಬಾರಿ ಮೈಸೂರು ದಸರಾಕ್ಕೆ ಖರ್ಚಾಗುವ ಅಂದಾಜು ವೆಚ್ಚ ಎಷ್ಟು? ಇಲ್ಲಿದೆ ಮಾಹಿತಿ
ಮೈಸೂರು, ಸೆಪ್ಟೆಂಬರ್, 18: ಈ ಬಾರಿ ಅಂದಾಜು 35 ಕೋಟಿ ವೆಚ್ಚದಲ್ಲಿ ಅದ್ಧೂರಿ ದಸರಾ ಆಚರಿಸಲಾಗುತ್ತಿದೆ. ಅರಮನೆ ಮಂಡಳಿಯಿಂದ 5 ಕೋಟಿ ರೂಪಾಯಿ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 10 ಕೋಟಿ ರೂಪಾಯಿ ಹಣ ವ್ಯಯಿಸಲು ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ.
ಕಳೆದ ಎರಡು ವರ್ಷದಲ್ಲಿ ಮಹಾಮಾರಿ ಕೊರೊನಾ ಕಾರಣದಿಂದ ಸರಳ ದಸರಾ ಆಚರಣೆ ಮಾಡಲಾಗಿತ್ತು. ಆದರೆ ಈ ವರ್ಷ ಕೋವಿಡ್ ಕ್ಷೀಣಿಸಿರುವ ಕಾರಣದಿಂದ ಅದ್ಧೂರಿ ದಸರಾ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಅಂದಾಜು ವೆಚ್ಚದ ಬಗ್ಗೆ ಮಾಹಿತಿ ನೀಡಿದ್ದಾರೆ.
ದಸರಾ ದಟ್ಟಣೆಯಲ್ಲಿ ಪ್ರವಾಸಿ ಸ್ಥಳದಲ್ಲಿ ಸರತಿಯಲ್ಲಿ ನಿಂತು ಟಿಕೆಟ್ ಕೊಳ್ಳುವುದಕ್ಕೇ ಹೆಚ್ಚು ಸಮಯ ಬೇಕಾಗುತ್ತದೆ. ಹೀಗೆ ಸಮಯ ವ್ಯರ್ಥ ಆಗದಂತೆ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಈ ಬಾರಿ ಕಾಂಬೋ ಟಿಕೆಟ್ ಹೊರತರಲಾಗಿದೆ. ಮೈಸೂರು ಅರಮನೆ, ಚಾಮುಂಡಿಬೆಟ್ಟ, ಕೆ.ಆರ್.ಎಸ್, ಮೃಗಾಲಯ, ರೈಲ್ವೆ ಮ್ಯೂಸಿಯಂ ಸೇರಿದಂತೆ 8 ಸ್ಥಳಗಳಲ್ಲಿ ಒಂದೇ ಟಿಕೆಟ್ ಬಳಕೆ ಮಾಡಬಹುದು. ವಯಸ್ಕರು 500 ಹಾಗೂ ಮಕ್ಕಳು 250 ರೂಪಾಯಿ ಪಾವತಿಸಿ ಕಾಂಬೋ ಟಿಕೆಟ್ ಪಡೆಯಬಹುದು ಎಂದು ಸಚಿವರು ಹೇಳಿದರು.

2 ಸಾವಿರ ಜನ ಕೂರುವುದಕ್ಕೆ ಆಸನದ ವ್ಯವಸ್ಥೆ
ದಸರಾ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹಾಗಂತ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಸುಮಾರು 2 ಸಾವಿರ ಜನ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗುವುದು. ವೇದಿಕೆ ಮೇಲೆ ಕುಳಿತುಕೊಳ್ಳಲು ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಸಂಸ್ಥೆ ಸೇರಿದಂತೆ 49 ಜನರ ಪಟ್ಟಿ ನಮ್ಮ ಬಳಿ ಇದೆ. ಆದರೆ ಅಷ್ಟು ಜನರಿಗೆ ವೇದಿಕೆ ಮೇಲೆ ಕುಳಿತುಕೊಳ್ಳಲು ಅವಕಾಶ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ರಾಷ್ಟ್ರಪತಿ ಕಚೇರಿಯಿಂದ ಮಾಹಿತಿ ಬಂದ ಮೇಲೆ ವೇದಿಕೆ ಮೇಲೆ ಎಷ್ಟು ಜನ ಇರುತ್ತಾರೆ ಎಂಬುದು ತಿಳಿದು ಬರಲಿದೆ. ಎಷ್ಟು ಜನ ಇರಬೇಕೆಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ.

ರಾಷ್ಟ್ರಪತಿ ಕಚೇರಿಗೆ 49 ಗಣ್ಯರ ಪಟ್ಟಿ ರವಾನೆ
ಹಿಂದಿನ ವರ್ಷಗಳಲ್ಲಿದ್ದಂತೆ ದಸರಾ ಉದ್ಘಾಟನಾ ಸಮಾರಂಭ ವೇದಿಕೆಯಲ್ಲಿ ಉಪಸ್ಥಿತರಿರಬಹುದಾದ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಶಾಸಕರು, ಸಂಸದರು, ಸಂಬಂಧಿಸಿದ ಇಲಾಖೆ ಸಚಿವರು, ಮೇಯರ್, ಕಾರ್ಪೊರೇಟರ್ಗಳು, ಅಧಿಕಾರಿಗಳು ಸೇರಿದಂತೆ ಒಟ್ಟು 49 ಗಣ್ಯರ ಪಟ್ಟಿಯನ್ನು ರಾಷ್ಟ್ರಪತಿ ಕಚೇರಿಗೆ ಕಳುಹಿಸಲಾಗಿದೆ.
ವೇದಿಕೆಯಲ್ಲಿ ಯಾರಿಗೆ ಅವಕಾಶ ಕಲ್ಪಿಸಬೇಕು ಎಂಬುದನ್ನು ರಾಷ್ಟ್ರಪತಿ ಕಚೇರಿಯಿಂದಲೇ ನಿರ್ದೇಶನ ನೀಡಲಾಗುತ್ತದೆ. ಒಂದು ವೇಳೆ ವೇದಿಕೆಯಲ್ಲಿ ಎಲ್ಲರಿಗೂ ಅವಕಾಶ ಇಲ್ಲವಾದರೆ ಮುಂಭಾಗದಲ್ಲಿ ಆಸನ ವ್ಯವಸ್ಥೆ ಮಾಡಲಾಗುವುದು. ಆ ದಿನ ಸಾರ್ವಜನಿಕರಿಗೆ ನಿರ್ಬಂಧವಿರುವುದಿಲ್ಲ. ಹಾಗಾಗಿ ಇನ್ನೂ 2 ಸಾವಿರ ಆಸನ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ದೀಪಾಲಂಕಾರದಲ್ಲೂ ಅಪ್ಪು ವೈಭವ
ದಸರಾ ವಸ್ತು ಪ್ರದರ್ಶನದಲ್ಲಿ ಮರಳಿನಲ್ಲಿ ಪುನೀತ್ ರಾಜ್‌ಕುಮಾರ್ ಅವರ ಆಕೃತಿ ನಿರ್ಮಿಸಲಾಗಿದೆ. ವಿದ್ಯುತ್ ದೀಪಾಲಂಕಾರದಲ್ಲೂ ಅಪ್ಪು ಅವರ ಆಕೃತಿ ಸೃಷ್ಟಿ ಆಗಲಿದೆ. ಸೆಪ್ಟೆಂಬರ್ 27ರಿಂದ ಯುವ ದಸರಾ ಆರಂಭವಾಗಲಿದ್ದು, ಅಕ್ಟೋಬರ್ 1ರಂದು ನಟ ಪುನೀತ್ ರಾಜ್ ಕುಮಾರ್ ಹಾಡಿರುವ ಹಾಗೂ ಅಭಿನಯಿಸಿರುವ ಗೀತ ಗಾಯನ ನಡೆಯಲಿದೆ. ಇನ್ನು ದಸರಾ ಚಲನಚಿತ್ರೋತ್ಸವದಲ್ಲಿ ಸೆಪ್ಟೆಂಬರ್ 27ರಂದು ಅಪ್ಪು ಅಭಿನಯದ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಇದನ್ನು ಅವರ ಪತ್ನಿ ಅಶ್ವಿನಿ ಅವರು ಉದ್ಘಾಟನೆ ನೆರವೇರಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಇದೀಗ ಗೋಲ್ಡ್ ಕಾರ್ಡ್ ವಿತರಣೆ ಭರವಸೆ
ಈ ಮೊದಲು ಗೋಲ್ಡ್ ಕಾರ್ಡ್ ವಿತರಣೆ ಬೇಡ ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಗೋಲ್ಡ್ ಕಾರ್ಡ್ ವಿತರಿಸುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿದೆ. ಹಾಗಾಗಿ ಗೋಲ್ಡ್ ಕಾರ್ಡ್ ವಿತರಣೆ ಕಾರ್ಯಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು. ಇನ್ನೆರಡು ಮೂರು ದಿನದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪಂಚಾಯತ್ ಸಿಇಒ ಡಾ.ಬಿ.ಆರ್.ಪೂರ್ಣಿಮಾ, ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ, ಅಪರ ಡಿಸಿ ಮಂಜುನಾಥಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications